ಸೌಜನ್ಯ ಪ್ರಕರಣ: ತಂದೆ-ತಾಯಿ ಹಣ ಪಡೆದಿದ್ದಾರೆ ವಕೀಲ ಅಮೃತೇಶ್ ಗಂಭೀರ ಆರೋಪ
ಬೆಂಗಳೂರು, 13 ಅಕ್ಟೋಬರ್ (ಹಿ.ಸ.): 2012ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ-ತಾಯಿ ಹಣ ಪಡೆದುಕೊಂಡಿದ್ದಾರೆ ಎಂದು ಹೈಕೋರ್ಟ್ ವಕೀಲ ಅಮೃತೇಶ್ ಗಂಭೀರ ಆರೋಪ ಮಾಡಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ತನಿಖೆ, ಸುಪ್ರೀಂ
soujanya-case-advocate-amruthesh-alleges-parents-received-money


ಬೆಂಗಳೂರು, 13 ಅಕ್ಟೋಬರ್ (ಹಿ.ಸ.):

2012ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ-ತಾಯಿ ಹಣ ಪಡೆದುಕೊಂಡಿದ್ದಾರೆ ಎಂದು ಹೈಕೋರ್ಟ್ ವಕೀಲ ಅಮೃತೇಶ್ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ತನಿಖೆ, ಸುಪ್ರೀಂ ಕೋರ್ಟ್ ತೀರ್ಪಿಗೆ ಸಂಬಂಧಿಸಿದ ಪ್ರಮುಖ ಅಂಶಗಳು ಹಾಗೂ ನ್ಯಾಯದ ನಿರೀಕ್ಷೆಯ ಕುರಿತು ಮಾತನಾಡಿದರು. ಇದೇ ವೇಳೆ ಪ್ರಕರಣದಲ್ಲಿ ಯಾರು ಎಷ್ಟು ಹಣ ಪಡೆದುಕೊಂಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಆಡಿಯೋವೊಂದನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.

ಪ್ರಕರಣದ ಆರಂಭಿಕ ಬೆಳವಣಿಗೆಗಳ ಬಗ್ಗೆ ಪ್ರಶ್ನೆ

ಸೌಜನ್ಯ ಪ್ರಕರಣದಲ್ಲಿ ಆರಂಭದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದ್ದ ಆಕೆಯ ತಂದೆ-ತಾಯಿ ಮೊದಲ ಸುದ್ದಿಗೋಷ್ಠಿಯ ಬಳಿಕ ಸುಮಾರು ಒಂದು ವರ್ಷ ಮೌನವಾಗಿದ್ದರು. ನಂತರ ಎರಡನೇ ಸುದ್ದಿಗೋಷ್ಠಿ ನಡೆಸಿದ್ದರು. ಈ ಮಧ್ಯೆ ಒಂದು ವರ್ಷ ಮೌನವಾಗಿರಲು ಕಾರಣವೇನು ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಅಮೃತೇಶ್ ಪ್ರಶ್ನಿಸಿದರು.

ಈ ಅವಧಿಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಸ್ಪಷ್ಟತೆ ದೊರೆಯಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ಎಷ್ಟು ಹಣ ಪಡೆದುಕೊಂಡಿದ್ದಾರೆ ಎಂಬುದೂ ಬಹಿರಂಗವಾಗಬೇಕು ಎಂದು ಅವರು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಸೌಜನ್ಯ ಅವರ ಮಾವ ವಿಠ್ಠಲ ಗೌಡ ಹಣ ಖರ್ಚು ಮಾಡಿದ ವಿಚಾರಕ್ಕೆ ಸಂಬಂಧಿಸಿದ ಆಡಿಯೋವೊಂದನ್ನೂ ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ.

ತನಿಖೆ ಮತ್ತು ಆರೋಪಗಳ ಕುರಿತು ಹೇಳಿಕೆ

ಪ್ರಕರಣದ ತನಿಖೆಯ ಬೆಳವಣಿಗೆಗಳನ್ನು ಪ್ರಸ್ತಾಪಿಸಿದ ಅಮೃತೇಶ್, ಧರ್ಮಸ್ಥಳ ಪೊಲೀಸರು ನಾಪತ್ತೆ ಪ್ರಕರಣದ ದೂರು ಸ್ವೀಕರಿಸಿದ ಬಳಿಕ ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಎಫ್ಐಆರ್ ದಾಖಲಿಸಲಾಗಿತ್ತು. ನಂತರ ಪ್ರಕರಣವನ್ನು ಸಿಐಡಿ ಹಾಗೂ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವಹಿಸಲಾಗಿತ್ತು ಎಂದು ಹೇಳಿದರು.

ದೇವಾಲಯಗಳು ಮತ್ತು ಮಠಮಾನ್ಯಗಳನ್ನು ಗುರಿಯಾಗಿಸಿಕೊಳ್ಳುವ ಗುಂಪೊಂದು ಈ ಪ್ರಕರಣದಲ್ಲಿ ಕ್ಷೇತ್ರದವರ ಕೈವಾಡವಿದೆ ಎಂಬ ಆರೋಪಗಳನ್ನು ಹರಡಿದೆ ಎಂದು ಅವರು ದೂರಿದರು.

ಸಂತೋಷ್ ರಾವ್ ಕುರಿತು ಪ್ರಸ್ತಾಪ

ಪ್ರಕರಣದ ಆರಂಭಿಕ ಹಂತದಲ್ಲಿ ಸೌಜನ್ಯ ಅವರ ತಂದೆ-ತಾಯಿ ಧರ್ಮಸ್ಥಳದ ಪರವಾಗಿ ಮಾತನಾಡಿದ್ದರು ಮತ್ತು ಎಲ್ಲರೂ ಬೆಂಬಲ ನೀಡಿದ್ದರು ಎಂದು ಅಮೃತೇಶ್ ಹೇಳಿಕೊಂಡರು. ಧರ್ಮಸ್ಥಳದವರು ಯಾವುದೇ ಒತ್ತಡ ಹೇರಿರಲಿಲ್ಲ ಎಂದ ಅವರು, ಘಟನಾ ಸ್ಥಳದ ಮಹಜರ್ ಸಂದರ್ಭದಲ್ಲಿ ಸಂತೋಷ್ ರಾವ್ ಅವರನ್ನು ಬಲವಂತವಾಗಿ ಕರೆದುಕೊಂಡು ಹೋಗಿರಲಿಲ್ಲ. ಅವರು ಸಹಜ ಸ್ಥಿತಿಯಲ್ಲಿದ್ದು, ಸ್ಥಳಕ್ಕೆ ತೆರಳಿ ಸಾಕ್ಷ್ಯವಸ್ತುಗಳನ್ನು ಎತ್ತಿಕೊಟ್ಟಿದ್ದರು ಎಂದು ತಮ್ಮ ಹೇಳಿಕೆಯಲ್ಲಿ ಪ್ರಸ್ತಾಪಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande