
ಬೆಂಗಳೂರು, 13 ಅಕ್ಟೋಬರ್ (ಹಿ.ಸ.):
ಬೆಂಗಳೂರು ನಗರದ ಯುವಜನರಲ್ಲಿ ಎಚ್ಐವಿ/ಏಡ್ಸ್ ಕುರಿತು ವೈಜ್ಞಾನಿಕ ಅರಿವು, ಸೋಂಕು ತಡೆಗಟ್ಟುವಿಕೆ ಹಾಗೂ ತಾರತಮ್ಯರಹಿತ ಸಮಾಜ ನಿರ್ಮಾಣಕ್ಕೆ ಒತ್ತು ನೀಡಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಸೈಯದ್ ಸಿರಾಜುದ್ದೀನ್ ಮದಿನಿ ಅವರು ಕರೆ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಯಲಹಂಕ ನ್ಯೂ ಟೌನ್ನ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ 5K ಮ್ಯಾರಥಾನ್ Red Ribbon Run - HIV/AIDS Awareness for Youth ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಎಚ್ಐವಿ/ಏಡ್ಸ್ ಕುರಿತು ವೈಜ್ಞಾನಿಕ ಅರಿವು ಮೂಡಿಸುವುದು, ಸೋಂಕು ಹರಡುವ ವಿಧಾನಗಳು ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಎಚ್ಐವಿ ಸೋಂಕಿತರ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ಉದ್ದೇಶದಿಂದ ಶಾಲಾ-ಕಾಲೇಜು ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದಿದ್ದಾರೆ.
ಎಚ್ಐವಿ ಕುರಿತು ಸರಿಯಾದ ಮಾಹಿತಿ ಹೊಂದಿರುವುದು, ಆರೋಗ್ಯದ ಬಗ್ಗೆ ಜವಾಬ್ದಾರಿಯುತ ನಿರ್ಧಾರಗಳನ್ನು ಕೈಗೊಳ್ಳುವುದು ಹಾಗೂ ಸೋಂಕು ತಡೆಗಟ್ಟುವ ಕ್ರಮಗಳನ್ನು ಅನುಸರಿಸುವುದು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಎಚ್ಐವಿ ಸೋಂಕು ಅಪ್ಪಿಕೊಳ್ಳುವುದು, ಕೈಕುಲುಕುವುದು, ಒಟ್ಟಿಗೆ ಊಟ ಮಾಡುವುದು, ತರಗತಿಯಲ್ಲಿ ಜೊತೆಯಾಗಿ ಕುಳಿತುಕೊಳ್ಳುವುದು ಅಥವಾ ಸೊಳ್ಳೆ ಕಚ್ಚುವುದರಿಂದ ಹರಡುವುದಿಲ್ಲ.
ಎಚ್ಐವಿ ಸೋಂಕು ಪತ್ತೆಯಾದಲ್ಲಿ ಸೂಕ್ತ ವೈದ್ಯಕೀಯ ಸಲಹೆ ಪಡೆದು, ಆಂಟಿರೆಟ್ರೋವೈರಲ್ ಥೆರಪಿ ಚಿಕಿತ್ಸೆಯನ್ನು ನಿಯಮಿತವಾಗಿ ಪಡೆಯುವ ಮೂಲಕ ವೈರಸ್ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯಕರ ಜೀವನ ನಡೆಸಬಹುದು.
ಸಂಭಾವ್ಯ ಎಚ್ಐವಿ ಸೋಂಕಿನ ಅಪಾಯಕ್ಕೆ ಒಳಗಾದವರು ವಿಳಂಬ ಮಾಡದೆ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಮನವಿ ಮಾಡಿದರು.
ಏಡ್ಸ್ ತಡೆಗಟ್ಟುವಲ್ಲಿ ವೈಜ್ಞಾನಿಕ ಮಾಹಿತಿ, ನಿರಂತರ ಜಾಗೃತಿ ಹಾಗೂ ಸಮುದಾಯದ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸುತ್ತವೆ. ಯುವಜನರು ಈ ಸಂದೇಶವನ್ನು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವ ಮೂಲಕ ಆರೋಗ್ಯಕರ, ಜಾಗೃತ ಹಾಗೂ ತಾರತಮ್ಯರಹಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಸಹಯೋಗಿ ಸಂಘ-ಸಂಸ್ಥೆಗಳ ಸಹಭಾಗಿತ್ವ
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಸಹಯೋಗದಲ್ಲಿ, ರಾಷ್ಟ್ರೀಯ ಸೇವಾ ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಲಯನ್ಸ್ ಇಂಟರ್ನ್ಯಾಷನಲ್, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ರೋಟರಿ ಸೇರಿದಂತೆ ವಿವಿಧ ಸಹಯೋಗಿ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮ್ಯಾರಥಾನ್ ಸಾಗಿದ ಹಾದಿ
ಬೆಳಿಗ್ಗೆ 6.30ಕ್ಕೆ ಆರಂಭಗೊಂಡ 5K ಮ್ಯಾರಥಾನ್ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಿಂದ ಆರಂಭವಾಗಿ, ಡಿ-ಮಾರ್ಟ್, ಶೇಷಾದ್ರಿಪುರಂ ಶಾಲೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಮದರ್ ಡೈರಿ, ಬಿಎಂಟಿಸಿ ಟರ್ಮಿನಲ್, ಅಲ್ಲಾಳಸಂದ್ರ ರಸ್ತೆ, 80 ಅಡಿ ರಸ್ತೆ, ಅನುಪಮಾ ಆಸ್ಪತ್ರೆ ಹಾಗೂ 3ನೇ ಕ್ರಾಸ್ ಮೂಲಕ ಸಾಗಿ ಮತ್ತೆ ಶೇಷಾದ್ರಿಪುರಂ ಕಾಲೇಜಿನಲ್ಲಿ ಮುಕ್ತಾಯಗೊಂಡಿತು.
ವಿಜೇತರಿಗೆ ಬಹುಮಾನ ವಿತರಣೆ
ಮ್ಯಾರಥಾನ್ನಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮೂವರು ಹಾಗೂ ಮಹಿಳೆಯರ ವಿಭಾಗದಲ್ಲಿ ಮೂವರು ವಿಜೇತರನ್ನು ಆಯ್ಕೆ ಮಾಡಿ ಬಹುಮಾನಗಳನ್ನು ವಿತರಿಸಲಾಗಿದೆ/
ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎನ್. ವೆಂಕಟೇಶ್, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಡಾ. ಸವಿತಾ ಮತ್ತು ಡಾ. ಸುರೇಶ್, ಲಯನ್ಸ್ ಇಂಟರ್ನ್ಯಾಷನಲ್ನ ಪ್ರತಿನಿಧಿಗಳು, ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು, ಸಹಯೋಗಿ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಹಲವರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R