ಕಸ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಫೋನ್-ಇನ್ ಕಾರ್ಯಕ್ರಮ
ಬೆಂಗಳೂರು, 13 ಅಕ್ಟೋಬರ್ (ಹಿ.ಸ.): ನಗರದ ಕಸ ವಿಲೇವಾರಿ ಮತ್ತು ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆ ವತಿಯಿಂದ ಪ್ರತಿ ಮಂಗಳವಾರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಇದೇ ವೇಳೆ, ವೈದ್ಯಕೀಯ ತ್ಯಾಜ
gba-phone-in-programme-garbage-disposal-medical-waste-fine


ಬೆಂಗಳೂರು, 13 ಅಕ್ಟೋಬರ್ (ಹಿ.ಸ.):

ನಗರದ ಕಸ ವಿಲೇವಾರಿ ಮತ್ತು ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆ ವತಿಯಿಂದ ಪ್ರತಿ ಮಂಗಳವಾರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.

ಇದೇ ವೇಳೆ, ವೈದ್ಯಕೀಯ ತ್ಯಾಜ್ಯವನ್ನು ಅಕ್ರಮವಾಗಿ ಸುರಿಯುವವರ ವಿರುದ್ಧ ₹15 ಸಾವಿರ ದಂಡ ವಿಧಿಸುವ ಕ್ರಮಕ್ಕೂ ಒತ್ತು ನೀಡಲಾಗಿದೆ.

ನಗರದಲ್ಲಿ ಕಸ ಸಂಗ್ರಹಣೆ ವಿಳಂಬ, ಪೌರಕಾರ್ಮಿಕರ ಸೇವೆ, ಮನೆಮನೆಗೆ ಕಸ ಸಂಗ್ರಹಿಸುವ ವಾಹನಗಳ ಸಂಚಾರದ ಸಮಯ ಹಾಗೂ ಕಸ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಾರ್ವಜನಿಕರು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಲು ಫೋನ್-ಇನ್ ಕಾರ್ಯಕ್ರಮ ಅವಕಾಶ ಕಲ್ಪಿಸಲಿದೆ.

ಪ್ರತಿ ಮಂಗಳವಾರ ಬೆಳಗ್ಗೆ 7.30ರಿಂದ 9.30ರವರೆಗೆ ಕಾರ್ಯಕ್ರಮ ನಡೆಯಲಿದ್ದು, ವಲಯಗಳ ಜಂಟಿ ಆಯುಕ್ತರ ನೇತೃತ್ವದಲ್ಲಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಿದ್ದಾರೆ.

ಸಾರ್ವಜನಿಕರು 080-22975936, 080-23636671 ದೂರವಾಣಿ ಸಂಖ್ಯೆಗಳ ಮೂಲಕ ಅಥವಾ 9480685705 ವಾಟ್ಸ್ಆ್ಯಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ದೂರುಗಳನ್ನು ಸಲ್ಲಿಸಬಹುದು.

ನಗರದ ಏಳು ವಿಭಾಗಗಳಲ್ಲಿ ಮನೆಮನೆಗೆ ಕಸ ಸಂಗ್ರಹಣೆ, ರಸ್ತೆ ಸ್ವಚ್ಛತೆ, ಕಸ ಸಂಗ್ರಹಣಾ ವಾಹನಗಳ ಸಂಚಾರ ಮಾರ್ಗ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವ ವಾಣಿಜ್ಯ ಸಂಸ್ಥೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸೂಕ್ಷ್ಮ ಯೋಜನೆಗಳನ್ನು ರೂಪಿಸಲಾಗಿದೆ. ಕಸದ ಕಪ್ಪುಚುಕ್ಕೆಗಳನ್ನು ಗುರುತಿಸಿ, ಅವುಗಳ ನಿವಾರಣೆಗೆ ಕ್ರಮ ಕೈಗೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ.

ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ನಗರದ ಸ್ವಚ್ಛತೆ ಕಾಪಾಡುವಲ್ಲಿ ನಾಗರಿಕರು ಸಹಕರಿಸಬೇಕು ಎಂದು ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande