
ನವದೆಹಲಿ, 13 ಅಕ್ಟೋಬರ್ (ಹಿ.ಸ.):
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ವಿವಿಧ ಅರ್ಜಿಗಳ ವಿಚಾರಣೆಯನ್ನು ಉಚ್ಚತಮ ನ್ಯಾಯಾಲಯ ಅಕ್ಟೋಬರ್ 15ರಂದು ನಡೆಸಲಿದೆ.
ಈ ಸಂಬಂಧ ಭಾರತೀಯ ಜನತಾ ಪಕ್ಷದ ವಕ್ತಾರ ಹಾಗೂ ವಕೀಲ ಗೌರವ್ ಭಾಟಿಯಾ ಮತ್ತು ಮಹೇಶ್ ಜೆಠ್ಮಲಾನಿ ಅವರು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದ ಮುಂದೆ ಅರ್ಜಿಗಳನ್ನು ಪ್ರಸ್ತಾಪಿಸಿ, ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯ, ಅಕ್ಟೋಬರ್ 15ರಂದು ವಿಚಾರಣೆ ನಡೆಸಲು ನಿರ್ಧರಿಸಿತು.
ದೆಹಲಿಯಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಕೀಲರು, ಪತ್ರಕರ್ತರು ಮತ್ತು ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಹಾಗೂ ಮೆಟ್ರೊ, ರೈಲು ಸೇರಿದಂತೆ ಇತರ ಸೇವೆಗಳನ್ನು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನೂ ಅದೇ ದಿನ ನಡೆಸಲು ನ್ಯಾಯಾಲಯ ಆದೇಶಿಸಿದೆ.
ವಿಚಾರಣೆಯ ವ್ಯಾಪ್ತಿಯನ್ನು ನಿರ್ಧರಿಸಿದ ನ್ಯಾಯಾಲಯ, ಕೇಂದ್ರ ಸರ್ಕಾರದ ಮನವಿಯನ್ನು ಪುರಸ್ಕರಿಸಿ, ತನ್ನ ಪ್ರತಿಕ್ರಿಯೆ ಸಲ್ಲಿಸಲು ಗುರುವಾರದವರೆಗೆ ಕಾಲಾವಕಾಶ ನೀಡಿದೆ.
ದೆಹಲಿಯಲ್ಲಿನ ಪ್ರಸ್ತುತ ಪರಿಸ್ಥಿತಿ ಮತ್ತು ನಾಗರಿಕರ ಹಕ್ಕುಗಳಿಗೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ವಿಚಾರಣೆ ನಡೆಸುವುದಾಗಿ ಉಚ್ಚತಮ ನ್ಯಾಯಾಲಯ ತಿಳಿಸಿದೆ.
ಅಕ್ಟೋಬರ್ 9ರಂದು ನೀಡಿದ್ದ ಆದೇಶದಲ್ಲಿ ಮೆಟ್ರೊ, ರೈಲು ಸೇವೆಗಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಬಾರದು ಎಂದು ನ್ಯಾಯಾಲಯ ಹೇಳಿತ್ತು. ಆದರೆ, ಈ ಆದೇಶವನ್ನು ಪಾಲಿಸದೆ ನ್ಯಾಯಾಲಯದ ನಿಂದನೆ ಎಸಗಲಾಗಿದೆ ಎಂದು ಆರೋಪಿಸಿ ಅಕ್ಟೋಬರ್ 10ರಂದು ಉಚ್ಚತಮ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.