ಚೀನಾ ಆಕ್ಷೇಪದಿಂದ ವಾಸ್ತವ ಬದಲಾಗದು: ಲಡಾಖ್ ಭಾರತದ ಅವಿಭಾಜ್ಯ ಅಂಗ
ನವದೆಹಲಿ, 13 ಅಕ್ಟೋಬರ್ (ಹಿ.ಸ.): ಲಡಾಖ್‌ ಭಾರತದ ಅವಿಭಾಜ್ಯ ಅಂಗವಾಗಿದೆ. ಈ ಕುರಿತು ಚೀನಾ ಎಷ್ಟೇ ಆಕ್ಷೇಪ ವ್ಯಕ್ತಪಡಿಸಿದರೂ ಸ್ಥಾಪಿತ ವಾಸ್ತವಾಂಶಗಳು ಬದಲಾಗುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಭಾರತದ ಸರ್ವೇಕ್ಷಣಾ ಇಲಾಖೆಯ ಅಧಿಕೃತ ನಕ್ಷೆಯಲ್ಲಿ ಲಡಾಖ್‌ನ 28 ಸ್ಥಳಗಳು ಮತ್ತು ಭೌಗೋಳಿಕ ವೈಶಿಷ
विदेश मंत्रालय (MEA)


ನವದೆಹಲಿ, 13 ಅಕ್ಟೋಬರ್ (ಹಿ.ಸ.):

ಲಡಾಖ್‌ ಭಾರತದ ಅವಿಭಾಜ್ಯ ಅಂಗವಾಗಿದೆ. ಈ ಕುರಿತು ಚೀನಾ ಎಷ್ಟೇ ಆಕ್ಷೇಪ ವ್ಯಕ್ತಪಡಿಸಿದರೂ ಸ್ಥಾಪಿತ ವಾಸ್ತವಾಂಶಗಳು ಬದಲಾಗುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಭಾರತದ ಸರ್ವೇಕ್ಷಣಾ ಇಲಾಖೆಯ ಅಧಿಕೃತ ನಕ್ಷೆಯಲ್ಲಿ ಲಡಾಖ್‌ನ 28 ಸ್ಥಳಗಳು ಮತ್ತು ಭೌಗೋಳಿಕ ವೈಶಿಷ್ಟ್ಯಗಳನ್ನು ಪ್ರಮಾಣಿತ ಹೆಸರುಗಳೊಂದಿಗೆ ಗುರುತಿಸಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಲಡಾಖ್‌ಗೆ ಮಾನ್ಯತೆ ನೀಡುವುದಿಲ್ಲ ಮತ್ತು ಅಲ್ಲಿನ ಸ್ಥಳಗಳಿಗೆ ಭಾರತ ನಿಗದಿಪಡಿಸಿರುವ ಪ್ರಮಾಣಿತ ಹೆಸರುಗಳನ್ನು ತೀವ್ರವಾಗಿ ವಿರೋಧಿಸುವುದಾಗಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್ ಹೇಳಿದ್ದರು.

ಚೀನಾದ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರರು, ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿನ ಅಂಶಗಳು ಸ್ಪಷ್ಟವಾಗಿವೆ ಎಂದು ತಿಳಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿರುವ 28 ಸ್ಥಳಗಳು ಮತ್ತು ಭೌಗೋಳಿಕ ವೈಶಿಷ್ಟ್ಯಗಳನ್ನು ಭಾರತದ ಸರ್ವೇಕ್ಷಣಾ ಇಲಾಖೆಯ ಅಧಿಕೃತ ನಕ್ಷೆಯಲ್ಲಿ ಪ್ರಮಾಣಿತ ಹೆಸರುಗಳೊಂದಿಗೆ ಗುರುತಿಸಲಾಗಿದೆ. ಈ ಕಾರ್ಯವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ಆಡಳಿತ ಮತ್ತು ಸ್ಥಳೀಯ ಪಾಲುದಾರರ ಸಮಾಲೋಚನೆಯೊಂದಿಗೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲಡಾಖ್‌ನ ಈ ಸ್ಥಳಗಳನ್ನು ಅಧಿಕೃತ ನಕ್ಷೆಯಲ್ಲಿ ಗುರುತಿಸುವುದರ ಉದ್ದೇಶ ಅವುಗಳ ನಿಖರ ಗುರುತಿಸುವಿಕೆಗೆ ಅನುಕೂಲ ಕಲ್ಪಿಸುವುದು ಹಾಗೂ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವುದಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande