ಲಕ್ಕುಂಡಿ ಜಮೀನಿನಲ್ಲಿ ಘಟಸರ್ಪ ಶಿಲೆ ಪತ್ತೆ
ಗದಗ, 24 ಜನವರಿ (ಹಿ.ಸ.) : ಆ್ಯಂಕರ್ : ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪುರಾತತ್ವದ ಹೊಸ ಕೌತುಕ ಹೊರಬಿದ್ದಿದೆ. ಗ್ರಾಮದ ನಿವಾಸಿ ಷಣ್ಮುಖ ರವದಿ ಅವರ ಜಮೀನಿನಲ್ಲಿ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದ ಅಪರೂಪದ ಘಟಸರ್ಪ (ನಾಗರಕಲ್ಲು) ಶಿಲೆ ಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ತೀವ್ರ ಚರ್ಚೆ ಹಾಗೂ ಕು
ಫೋಟೋ


ಗದಗ, 24 ಜನವರಿ (ಹಿ.ಸ.) :

ಆ್ಯಂಕರ್ : ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪುರಾತತ್ವದ ಹೊಸ ಕೌತುಕ ಹೊರಬಿದ್ದಿದೆ. ಗ್ರಾಮದ ನಿವಾಸಿ ಷಣ್ಮುಖ ರವದಿ ಅವರ ಜಮೀನಿನಲ್ಲಿ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದ ಅಪರೂಪದ ಘಟಸರ್ಪ (ನಾಗರಕಲ್ಲು) ಶಿಲೆ ಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ತೀವ್ರ ಚರ್ಚೆ ಹಾಗೂ ಕುತೂಹಲ ಮೂಡಿಸಿದೆ.

ಈ ಹಿಂದೆ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯದ ವೇಳೆ ಪುರಾತನ ದೇವಸ್ಥಾನಗಳ ಅವಶೇಷಗಳು, ಅಲಂಕಾರಿಕ ಶಿಲೆಗಳು, ನಾಗರ ಶಿಲೆಗಳು ಪತ್ತೆಯಾಗಿದ್ದವು. ಇದೀಗ ಜಮೀನಿನೊಳಗೆ ಪತ್ತೆಯಾದ ಘಟಸರ್ಪ ಶಿಲೆ, “ಲಕ್ಕುಂಡಿ ಸಂಪತ್ತನ್ನು ಕಾಯುವ ಸರ್ಪಗಳೇ?” ಎನ್ನುವ ನಂಬಿಕೆಗಳಿಗೆ ಮತ್ತೆ ಬಲ ತುಂಬಿದಂತಾಗಿದೆ.

ಘಟಸರ್ಪ ಶಿಲೆಯ ವೈಶಿಷ್ಟ್ಯ ಪತ್ತೆಯಾದ ಶಿಲೆಯಲ್ಲಿ ಸರ್ಪವು ಘಟದ ಮೇಲೆ ಆವರಿಸಿಕೊಂಡಿರುವಂತೆ ಕಾಣುತ್ತಿದ್ದು, ನಾಗಾರಾಧನೆಯ ಸಂಕೇತಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ. ಶಿಲೆಯ ಅಲಂಕಾರ, ಶಿಲ್ಪಶೈಲಿ ಹಾಗೂ ಕೆತ್ತನೆಯ ರೀತಿಯಿಂದ ಇದು ಕಲ್ಯಾಣ ಚಾಲುಕ್ಯರ ಕಾಲದ ಶಿಲ್ಪ ಎನ್ನುವುದು ಪ್ರಾಥಮಿಕವಾಗಿ ದೃಢವಾಗುತ್ತಿದೆ.

ಪುರಾತನ ಕಾಲದಲ್ಲಿ ದೇವಸ್ಥಾನಗಳು, ಬಾವಿಗಳು ಹಾಗೂ ರಾಜಕೀಯ ಕೇಂದ್ರಗಳ ಸುತ್ತ ನಾಗರಕಲ್ಲುಗಳನ್ನು ಸ್ಥಾಪಿಸುವ ಪದ್ಧತಿ ಇತ್ತು ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಗರಕಲ್ಲುಗಳ ಸರಣಿ ಪತ್ತೆ ಲಕ್ಕುಂಡಿಯಲ್ಲಿ ಇತ್ತೀಚಿನ ದಿನಗಳಲ್ಲಿ ಒಂದರ ನಂತರ ಒಂದರಂತೆ ನಾಗರ ಸಂಬಂಧಿತ ಶಿಲೆಗಳ ಪತ್ತೆಯಾಗುತ್ತಿರುವುದು ವಿಶೇಷ. ಉತ್ಖನನ ನಡೆಯುತ್ತಿರುವ ಜಾಗದಲ್ಲಿ ಎರಡು ನಾಗರ ಚಿತ್ರ ಹೊಂದಿರುವ ಕಲ್ಲುಗಳು ಪತ್ತೆಯಾಗಿವೆ.

ಐತಿಹಾಸಿಕ ಬಾವಿಯೊಳಗೆ ಚಾಲುಕ್ಯರ ಕಾಲದ ಅಲಂಕಾರಿಕ ಸುಂದರ ಶಿಲೆಗಳು ಲಭ್ಯವಾಗಿವೆ. ಇದೀಗ ಜಮೀನಿನೊಳಗೆ ಘಟಸರ್ಪ ನಾಗರಕಲ್ಲು ಪತ್ತೆಯಾಗಿದೆ. ಈ ಎಲ್ಲ ಪತ್ತೆಗಳು ಲಕ್ಕುಂಡಿಯಲ್ಲಿ ನಾಗಾರಾಧನೆ ಎಷ್ಟು ವ್ಯಾಪಕವಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತಿವೆ.

ಗ್ರಾಮಸ್ಥರಲ್ಲಿ ನಂಬಿಕೆ ಮತ್ತು ಆತಂಕ ಸ್ಥಳೀಯ ಗ್ರಾಮಸ್ಥರು ಲಕ್ಕುಂಡಿಯನ್ನು “ಸಂಪತ್ತಿನ ತೊಟ್ಟಿಲು” ಎಂದು ಕರೆಯುತ್ತಾರೆ. “ಹಿಂದೆ ರಾಜ ಮಹಾರಾಜರ ಆಳ್ವಿಕೆಯಲ್ಲಿ ಇದ್ದ ಈ ಗ್ರಾಮದಲ್ಲಿ ಅನೇಕ ದೇವಸ್ಥಾನಗಳು, ಬಾವಿಗಳು ಹಾಗೂ ಸಂಪತ್ತು ಇತ್ತು. ಅದನ್ನೆಲ್ಲಾ ಕಾಯುವುದಕ್ಕೆ ನಾಗರಕಲ್ಲುಗಳನ್ನು ಸ್ಥಾಪಿಸಲಾಗಿತ್ತು” ಎನ್ನುವ ನಂಬಿಕೆ ಜನರಲ್ಲಿ ಇನ್ನೂ ಜೀವಂತವಾಗಿದೆ.

ಇನ್ನು ಕೆಲವರು, ನಿರಂತರ ಉತ್ಖನನದಿಂದ ಗ್ರಾಮಸ್ಥರ ಬದುಕಿಗೆ ತೊಂದರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

“ಸರ್ಕಾರ ಪುರಾತತ್ವದ ಹೆಸರಿನಲ್ಲಿ ಜಾಗ ವಶಪಡಿಸಿಕೊಳ್ಳುತ್ತಿದೆ, ಆದರೆ ರೈತರಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ” ಎನ್ನುವ ಅಸಮಾಧಾನವೂ ಕೇಳಿ ಬರುತ್ತಿದೆ.

ಪುರಾತತ್ವ ಇಲಾಖೆಯ ಗಮನ ಘಟಸರ್ಪ ಶಿಲೆ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಶಿಲೆಯನ್ನು ಸಂರಕ್ಷಿಸಿ, ಅಧ್ಯಯನಕ್ಕೆ ಒಳಪಡಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಲಕ್ಕುಂಡಿಯನ್ನು ವಿಶ್ವಪಾರಂಪರಿಕ ಸ್ಥಳವಾಗಿ ರೂಪಿಸುವ ಸರ್ಕಾರದ ಯೋಜನೆಗೆ ಇಂತಹ ಪತ್ತೆಗಳು ಮತ್ತಷ್ಟು ಮಹತ್ವ ನೀಡುತ್ತಿವೆ.

ಇತಿಹಾಸದ ಹೊಸ ಪುಟ ದಾನ ಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿಯಾಗಿರುವ ಲಕ್ಕುಂಡಿ, ಈಗ ಮತ್ತೆ ಇತಿಹಾಸದ ಹೊಸ ಪುಟಗಳನ್ನು ತೆರೆದುಕೊಳ್ಳುತ್ತಿದೆ.

ಒಂದೆಡೆಯಿಂದ ಪುರಾತನ ವೈಭವದ ಸಾಕ್ಷಿಗಳು ಹೊರಬರುತ್ತಿದ್ದರೆ, ಮತ್ತೊಂದೆಡೆಯಿಂದ ಗ್ರಾಮಸ್ಥರ ಜೀವನದ ಪ್ರಶ್ನೆಗಳೂ ಎದುರಾಗುತ್ತಿವೆ.

ಒಟ್ಟಾರೆ, ಲಕ್ಕುಂಡಿಯಲ್ಲಿ ಪತ್ತೆಯಾಗುತ್ತಿರುವ ನಾಗರಕಲ್ಲುಗಳು ಕೇವಲ ಶಿಲ್ಪವಲ್ಲ, ಅವು ಶತಮಾನಗಳ ಹಿಂದಿನ ನಂಬಿಕೆ, ಸಂಸ್ಕೃತಿ ಹಾಗೂ ಸಂಪತ್ತಿನ ರಕ್ಷಣೆಯ ಸಂಕೇತಗಳಾಗಿವೆ. ಲಕ್ಕುಂಡಿಯ ಸಂಪತ್ತನ್ನು ಕಾಯಲು ನಿಜಕ್ಕೂ ಸರ್ಪಗಳೇ ನಿಂತಿವೆಯೇ? ಎಂಬ ಪ್ರಶ್ನೆ ಇಂದಿಗೂ ಕುತೂಹಲವಾಗಿಯೇ ಉಳಿದಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande