
ಬೆಂಗಳೂರು, 23 ಜನವರಿ (ಹಿ.ಸ.) :
ಆ್ಯಂಕರ್ : ಫ್ಲೆಕ್ಸ್ ತೆರವು ವಿಚಾರವಾಗಿ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದಿಸಿ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ.ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯು ಈ ಸಂಬಂಧ ಅಮಾನತು ಆದೇಶ ಹೊರಡಿಸಿದೆ.
ಪೌರಾಯುಕ್ತೆಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆ ರಾಜೀವ್ ಗೌಡ ತಮ್ಮ ಮೊಬೈಲ್ ಫೋನ್ ಸ್ವಿಚ್‌ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.
ಸಚಿವ ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾದ ಫ್ಲೆಕ್ಸ್ ತೆರವುಗೊಳಿಸಿದ್ದನ್ನು ವಿರೋಧಿಸಿ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ರಾಜೀವ್ ಗೌಡ ಬೆದರಿಕೆ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅವರ ವಿರುದ್ಧ ನೋಟಿಸ್ ಜಾರಿ ಮಾಡಿತ್ತು.
ಘಟನೆಯ ಕುರಿತು ಕಾರಣ ಕೇಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ರಾಜೀವ್ ಗೌಡರಿಗೆ ನೋಟಿಸ್ ನೀಡಿದ್ದು, ಏಳು ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿತ್ತು. ನಿಗದಿತ ಅವಧಿಯಲ್ಲಿ ಉತ್ತರ ನೀಡದಿದ್ದಲ್ಲಿ ಶಿಸ್ತುಪಾಲನಾ ಸಮಿತಿಯಿಂದ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿತ್ತು.
ನೋಟಿಸ್‌ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಇದೀಗ ಕೆಪಿಸಿಸಿ ರಾಜೀವ್ ಗೌಡರನ್ನು ಪಕ್ಷದಿಂದ ಅಮಾನತು ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa