ಕಾಂಗ್ರೆಸ್ ಸರ್ಕಾರಕ್ಕೆ ಕಪ್ಪು ಚುಕ್ಕೆ ತರಲು ಹೊರಟ ತಹಶಿಲ್ದಾರ್, ಎಸಿ ವಿರುದ್ದ ಕಾನೂನು ಕ್ರಮಕ್ಕಾಗಿ ಒತ್ತಾಯ
ಕಾಂಗ್ರೆಸ್ ಸರ್ಕಾರಕ್ಕೆ ಕಪ್ಪು ಚುಕ್ಕೆ ತರಲು ಹೊರಟ ತಹಶಿಲ್ದಾರ್, ಎಸಿ ವಿರುದ್ದ ಕಾನೂನು ಕ್ರಮಕ್ಕಾಗಿ ಒತ್ತಾಯ
ಚಿತ್ರ : ಕೋಲಾರ ತಹಸೀಲ್ದಾರ್ ನಯನ ವಿರುದ್ದ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಕೋಲಾರ ತಹಶಿಲ್ದಾರ್ ಕಛೇರಿ ಮುಂದೆ ಬೃಹತ್ ಪ್ರತಿಭಟನೆ


ಕೋಲಾರ, ಜನವರಿ ೨೧ (ಹಿ.ಸ.) :

ಆ್ಯಂಕರ್ : ತಹಸೀಲ್ದಾರ್ ನಯನ ಮತ್ತು ಉಪ ವಿಭಾಗಾಧಿಕಾರಿ ಡಾ.ಮೈತ್ರಿ ರವರ ಅಧಿಕಾರಾವಧಿಯಲ್ಲಿನ ಆರ್.ಆರ್.ಟಿ ಮತ್ತು ತಿದ್ದುಪಡಿ ಕೇಸುಗಳನ್ನು ತನಿಖೆಗೆ ಹಾಗೂ ದಲಿತರ ಭೂಮಿಗಳ ವಿಚಾರಗಳಲ್ಲಿ ಆದೇಶಗಳಾಗಿರುವ ಎಲ್ಲಾ ಪ್ರಕರಣಗಳನ್ನು ಬೆಂಗಳೂರಿನ ಪ್ರಾದೇಶಿಕ ಆಯುಕ್ತರು, ಪುನರ್ ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡು ದಲಿತರಿಗೆ ನ್ಯಾಯ ಒದಗಿಸುವಂತೆ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಬುಧವಾರ ತಹಶಿಲ್ದಾರ್ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

ವಾಲ್ಮೀಕಿ ಸಮುದಾಯದ ಮುಖಂಡ ಹಾಗೂ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎನ್ ಅಂಬರೀಷ್ ಮಾತನಾಡಿ ತಹಸೀಲ್ದಾರ್ ನಯನ ಮತ್ತು ಎಸಿ ಡಾ. ಮೈತ್ರಿ ಕೋಲಾರಕ್ಕೆ ಬಂದಾಗಿನಿಂದ ಅವರ ಆದೇಶಗಳು ನ್ಯಾಯ ಸಮ್ಮತವಾಗಿಲ್ಲ ಒಂದೊಂದು ಪ್ರಕರಣಕ್ಕೆ ಒಂದೊಂದು ರೀತಿಯ ಕಾನೂನು ನಿಯಮಗಳನ್ನು ಪಾಲಿಸಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ. ಅವರಿಂದಲೇ ಸಾರ್ವಜನಿಕರು ರೈತರು ದಲಿತ ಸಮೂಹದಲ್ಲಿ ತೀವ್ರ ಸ್ವರೂಪದ ನೋವನ್ನು ಅನುಭವಿಸುತ್ತಿದ್ದು ಆವರ ಆಡಳಿತಾವಧಿಯಲ್ಲಿನ ಎಲ್ಲಾ ಆದೇಶಗಳನ್ನು ಪ್ರಾದೇಶಿಕ ಆಯುಕ್ತರು ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ನಯನ ವಿರುದ್ದ ೨೦೨೪ ರ ಸೆಪ್ಟೆಂಬರ್ ನಲ್ಲಿ ವಾಲ್ಮೀಕಿ ಸಮುದಾಯದ ವತಿಯಿಂದ ಹೋರಾಟ ನಡೆಸಿ, ಅವರ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಅಂದು ಎಸಿ ಡಾ.ಮೈತ್ರಿ ರವರಿಗೆ ಮನವಿ ಪತ್ರವನ್ನು ನೀಡಲಾಯಿತು. ಇಲ್ಲಿಯವರೆಗೂ ಆ ಮನವಿ ಪತ್ರವನ್ನು ಪ್ರಾದೇಶಿಕ ಆಯುಕ್ತರಿಗೆ ರವಾನಿಸದೆ, ತಹಶಿಲ್ದಾರ್ ನಯನ ಅವರ ಎಲ್ಲಾ ದಲಿತ ವಿರೋಧಿ ನಿಲುವುಗಳಿಗೆ ಎಸಿ ಮೈತ್ರಿ ರವರು ಕೂಡ ಶಾಮೀಲಾಗಿರುವುದು ಅನುಮಾನಗಳು ಮೂಡುವಂತೆ ಮಾಡಿದ್ದಾರೆ ಮೈತ್ರಿ ವಿರುದ್ದ ಕೂಡ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಕರಡುಗುರ್ಕಿ, ಊರುಗುರ್ಕಿ, ಹುಲಿಗುಟ್ಟೆ, ಓಬಟ್ಟಿ, ಮಾದಾಪುರ ಸೇರಿದಂತೆ ಸುತ್ತಲೂ ಪರಿಶಿಷ್ಟ ಜಾತಿಯ ಜನಾಂಗವು ಹೆಚ್ಚಾಗಿದ್ದು ಅವರನ್ನು ಜೀವಂತ ಸಮಾಧಿ ಮಾಡಲು ಹೊರಟಿರುವ ಜಿಪಂ ಮಾಜಿ ಸದಸ್ಯ ಎಂ.ಎಸ್ ಆನಂದ್ ಅವರ ನೇತೃತ್ವದ ಭೈರವೇ ಶ್ವರ ಸ್ಟೋನ್ ಕ್ರಷರ್ ಮಾಡಲು ಅನುಮತಿ ನೀಡಬಾರದು ಒಂದು ವೇಳೆ ನೀಡದರರೆ ಜ.೨೬ ರಂದು ಗಣರಾಜ್ಯೋತ್ಸವ ದಿನದಿಂದ ಗಾಂಧಿ ವನದಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಬಾಲಗೋವಿಂದ್ ಮಾತನಾಡಿ ತಾಲೂಕಿನ ಗುಟ್ಟಹಳ್ಳಿ ಗ್ರಾಮದಲ್ಲಿ ಸ.ನಂ.೪ ರಲ್ಲಿ ೨.೨೩ ಗುಂಟೆ ಜಮೀನು ದಶಕಗಳಿಂದ ಮನೆಗಳನ್ನು ಕಟ್ಟಿಕೊಂಡು ದಲಿತರು ವಾಸ ಮಾಡುತ್ತಿರುತ್ತಾರೆ. ಅದೇ ಗ್ರಾಮದ ಮೇಲ್ವರ್ಗದವರು ದಲಿತರಿಗೆ ತೊಂದರೆ ಕೊಡುವ ಉದ್ದೇಶದಿಂದ ಸ.ನಂ.೪ ರಲ್ಲಿ ಶಾಲೆಗೆ ಕ್ರೀಡಾಂಗಣ ಒದಗಿಸುವಂತೆ ದುರುದ್ದೇಶದಿಂದ ಅರ್ಜಿ ಪಡೆದುಕೊಂಡು ವಿನಾಕಾರಣ ತೊಂದರೆ ಕೊಟ್ಟಿದ್ದಾರೆ ಕಲ್ಲಂಡೂರು ಗ್ರಾಮದ ಸ.ನಂ. ೮೭ ರಲ್ಲಿ ಸುಮಾರು ವರ್ಷಗಳ ಹಿಂದೆ ಮಂಜೂರಾಗಿರುವ ಜಮೀನುಗಳಿಗೆ ಹದ್ದಬಸ್ತು ಮಾಡಿಕೊಡುವಂತೆ ತಾಲ್ಲೂಕು ಕಚೇರಿಗೆ ಹಲವಾರು ಬಾರಿ ತಿರುಗಾಡಿದರೂ, ದಲಿತರಿಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದರು

ಅದೇ ರೀತಿ ವಕ್ಕಲೇರಿ ಗ್ರಾಮದ ಸ.ನಂ.೩೩೯ ರಲ್ಲಿ ೨.೦೫ ಎಕರೆ, ಮೇಡಿಹಾಳ ಗ್ರಾಮದ ಸ.ನಂ.೮೨ ರಲ್ಲಿ ಲಘುಮಪ್ಪ ಅವರ ೧ ಎಕರೆ, ಕಡಗಟ್ಟೂರು ಗ್ರಾಮದಲ್ಲಿ ವಾಲ್ಮೀಕಿ ಭವನ, ಲಕ್ಷ್ಮೀಪುರ ಮಜರ ಮೈಲಾಂಡಹಳ್ಳಿ ಗ್ರಾಮದ ಸ.ನಂ. ೪೧ ರಲ್ಲಿ ೦.೨೦ ಗುಂಟೆ ಕಲ್ಲಂಡೂರು ಗ್ರಾಮದ ಸ.ನಂ.೧೧೭ ರಲ್ಲಿ ಸರ್ಕಾರಿ ಜಮೀನು ವಕ್ಕಲೇರಿ ಗ್ರಾಮದ ಸ.ನಂ. ೧೭೪ ರಲ್ಲಿ ಸರ್ಕಾರಿ ಸ್ಮಶಾನ ಸೇರಿದಂತೆ ಅನೇಕ ಕಡೆ ವಾಲ್ಮೀಕಿ ಸಮಾಜದ ಸಮಸ್ಯೆಗಳು ಇದ್ದು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿದರು.

ನಗರದ ವಾಲ್ಮೀಕಿ ವೃತ್ತದಿಂದ ಮೆರವಣಿಗೆ ಮೂಲಕ ತಹಶಿಲ್ದಾರ್ ಕಛೇರಿಗೆ ಆಗಮಿಸಿದ ಪ್ರತಿಭಟನಾಕಾರರು ತಹಶಿಲ್ದಾರ್ ನಯನ ಮತ್ತು ಎಸಿ ಮೈತ್ರಿ ವಿರುದ್ದ ಘೋಷಣೆ ಕೂಗಿ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಮಂಗಳಾ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಾಗೃತಿ ಸಮಿತಿ ಸದಸ್ಯ ಮಾಲೂರು ಎನ್ ವೆಂಕಟರಾಮ್, ಮುಖಂಡರಾದ ಕುಡುವನಹಳ್ಳಿ ಆನಂದ್, ಬೈರಂಡಹಳ್ಳಿ ನಾಗೇಶ್, ಅಡ್ಡಗಲ್ ನರೇಶ್, ನರಸಿಂಹಪ್ಪ, ಗಡ್ಡೂರು ಪ್ರಕಾಶ್, ಬೈರಕೂರು ರಾಮಾಂಜಿ, ಕೆಜಿಎಫ್ ರಮೇಶ್ ನಾಯಕ್, ಮೇಡಹಾಳ ಮುನಿಅಂಜಿ, ಗರುಡನಹಳ್ಳಿ ಪಿಳ್ಳಪ್ಪ, ಸಂಪತ್, ಸಂಗೊಂಡಹಳ್ಳಿ ಪಿಳ್ಳಪ್ಪ, ಬೆಳ್ಳೂರು ತಿರುಮಲೇಶ್, ಈನೆಲ ಜಲ ವೆಂಕಟಾಚಲಪತಿ, ಟಿ.ಕೆ ನಾಗರಾಜ್, ವಾಸು, ಸಿಂಗಹಳ್ಳಿ ಮುರಳಿ ನಾಯಕ್, ತಾಳಕುಂಟೆ ನವೀನ್, ರಾಮಪ್ಪ, ಶಂಕರಪ್ಪ, ಕಲ್ಲಂಡೂರು ನಾರಾಯಣಸ್ವಾಮಿ, ರವಿ, ಗೋವಿಂದ, ತಿಮ್ಮರಾಮಪ್ಪ, ಮೇಡಹಾಳ ಮಂಜು, ರಾಜು ಮುಂತಾದವರು ಇದ್ದರು.

ಚಿತ್ರ : ಕೋಲಾರ ತಹಸೀಲ್ದಾರ್ ನಯನ ವಿರುದ್ದ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಕೋಲಾರ ತಹಶಿಲ್ದಾರ್ ಕಛೇರಿ ಮುಂದೆ ಬೃಹತ್ ಪ್ರತಿಭಟನೆ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande