
ನವದೆಹಲಿ, 19 ಜನವರಿ (ಹಿ.ಸ.) :
ಆ್ಯಂಕರ್ : ಪ್ರಯಾಗ್‌ರಾಜ್‌ನಲ್ಲಿ ಮೌನಿ ಅಮವಾಸ್ಯೆಯಂದು ಸ್ನಾನಕ್ಕಾಗಿ ತೆರಳುತ್ತಿದ್ದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರನ್ನು ಪೊಲೀಸರು ತಡೆದ ಘಟನೆ ಹಾಗೂ ಅವರ ಶಿಷ್ಯರು ಮತ್ತು ಪೊಲೀಸರ ನಡುವೆ ನಡೆದ ಗಲಾಟೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದೆ.
ಸೋಮವಾರ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವಕ್ತಾರ ಪವನ್ ಖೇರಾ ಮಾತನಾಡಿ, ಈ ಘಟನೆಯು ಅತ್ಯಂತ ಖಂಡನೀಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದರು. ಇಡೀ ಕಾಂಗ್ರೆಸ್ ಪಕ್ಷವು ಸಂತರ ಬೆಂಬಲಕ್ಕೆ ನಿಂತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ಸಂಭವಿಸಿದ ಅವಮಾನದಿಂದ ದೇಶದಾದ್ಯಂತ ಭಕ್ತರು ಮತ್ತು ಸಂತ ಸಮುದಾಯ ನೋವು ಅನುಭವಿಸುತ್ತಿದೆ ಎಂದು ಖೇರಾ ಹೇಳಿದರು. ಘಟನೆಯ ನಂತರ ಶಂಕರಾಚಾರ್ಯರು ಉಪವಾಸ ಸತ್ಯಾಗ್ರಹಕ್ಕೆ ಇಳಿದಿದ್ದಾರೆ, ಆದರೆ ಸರ್ಕಾರದ ಯಾರೂ ಅವರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು.
ಮಾಘ ಮೇಳದಲ್ಲಿ ಸಾರ್ವಜನಿಕರೊಂದಿಗೆ ಸಂತರಿಗೆ ರಾಜ ಸ್ನಾನ ಮಾಡುವ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬರುತ್ತಿದ್ದು, ಅದು ಮೊಘಲರು ಮತ್ತು ಬ್ರಿಟಿಷರ ಕಾಲಕ್ಕಿಂತಲೂ ಹಿಂದಿನದು ಎಂದು ಖೇರಾ ಉಲ್ಲೇಖಿಸಿದರು. ಇದುವರೆಗೆ ಯಾರೂ ಸಂತರ ರಾಜ ಸ್ನಾನವನ್ನು ತಡೆದಿಲ್ಲ. ಆದರೆ ಇಂದಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಂತರು ಸ್ನಾನ ಮಾಡಲು ಅಡ್ಡಿಪಡಿಸಲಾಗುತ್ತಿದೆ ಎಂದು ಅವರು ಟೀಕಿಸಿದರು.
ಒಂದೆಡೆ ಸಂತರು ಸ್ನಾನ ಮಾಡಲು ತಡೆಹಾಕಲಾಗುತ್ತಿದರೆ, ಮತ್ತೊಂದೆಡೆ ಕುಂಭಮೇಳದಂತಹ ಮಹತ್ವದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀಮಂತರು ಮತ್ತು ಪ್ರಭಾವಿಗಳಿಗೆ ವಿಐಪಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದು ಅತ್ಯಂತ ಶೋಚನೀಯ ಮತ್ತು ದ್ವಂದ್ವ ನೀತಿಯಾಗಿದೆ ಎಂದು ಅವರು ಆರೋಪಿಸಿದರು.
“ನಾವು ಧರ್ಮದೊಂದಿಗೆ ರಾಜಕೀಯ ಮಾಡುವುದಿಲ್ಲ, ಅದನ್ನು ಸಹಿಸುವುದೂ ಇಲ್ಲ. ಮೌನಿ ಅಮವಾಸ್ಯೆಯಂದು ರಾಜ ಸ್ನಾನ ಮಾಡುವುದು ಅವಿಚ್ಛಿನ್ನ ಸಂಪ್ರದಾಯ. ಅದನ್ನು ನಿಲ್ಲಿಸಲು ಯಾರಿಗೂ ಹಕ್ಕಿಲ್ಲ” ಎಂದು ಪವನ್ ಖೇರಾ ಹೇಳಿದರು. ಈ ಘಟನೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಅವರು ಒತ್ತಾಯಿಸಿದರು.
ಇಡೀ ಕಾಂಗ್ರೆಸ್ ಪಕ್ಷವು ಸಂತರೊಂದಿಗೆ ನಿಂತಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಶೀಘ್ರದಲ್ಲೇ ಶಂಕರಾಚಾರ್ಯರನ್ನು ಭೇಟಿ ಮಾಡಿ ಆಡಳಿತದ ಮೇಲೆ ಒತ್ತಡ ಹೇರುವುದಾಗಿ ಖೇರಾ ತಿಳಿಸಿದರು.
ಗಮನಾರ್ಹವಾಗಿ, ಮೌನಿ ಅಮವಾಸ್ಯೆಯಂದು ಪ್ರಯಾಗ್‌ರಾಜ್‌ನಲ್ಲಿ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಪಲ್ಲಕ್ಕಿಯಲ್ಲಿ ಸ್ನಾನಕ್ಕೆ ತೆರಳುತ್ತಿದ್ದಾಗ, ಜನಸಂದಣಿಯನ್ನು ಉಲ್ಲೇಖಿಸಿ ಪೊಲೀಸರು ಪಲ್ಲಕ್ಕಿಯನ್ನು ಬಿಟ್ಟು ಕಾಲ್ನಡಿಗೆಯಲ್ಲಿ ಸಾಗುವಂತೆ ಮನವಿ ಮಾಡಿದ್ದರು. ಇದಕ್ಕೆ ಶಂಕರಾಚಾರ್ಯರು ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ಬೆಂಬಲಿಗರು ಮತ್ತು ಪೊಲೀಸರ ನಡುವೆ ಗಲಾಟೆ ನಡೆದಿದೆ. ಈ ಘಟನೆ ಬಳಿಕ ಕೋಪಗೊಂಡ ಶಂಕರಾಚಾರ್ಯರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa