
ಜೈಪುರ, 15 ಜನವರಿ (ಹಿ.ಸ.) :
ಆ್ಯಂಕರ್ : ಭಾರತೀಯ ಸೇನೆಯ 78ನೇ ಸೇನಾ ದಿನದ ಮೆರವಣಿಗೆಯನ್ನು ರಾಜಸ್ಥಾನದ ಜೈಪುರದ ಜಗತ್ಪುರದ ಮಹಲ್ ರಸ್ತೆಯಲ್ಲಿ ಸೇನಾ ಪ್ರದೇಶದ ಹೊರಗೆ ಮೊದಲ ಬಾರಿಗೆ ಆಯೋಜಿಸಲಾಯಿತು.
ಐತಿಹಾಸಿಕ ಮೆರವಣಿಗೆಯನ್ನು ವೀಕ್ಷಿಸಲು ರಸ್ತೆ ಎರಡೂ ಬದಿಗಳಲ್ಲಿ ಸಾವಿರಾರು ನಾಗರಿಕರು ಜಮಾಯಿಸಿದ್ದು, ಸೇನೆಯ ಆಧುನಿಕ ಶಕ್ತಿ ಹಾಗೂ ಸಾಂಪ್ರದಾಯಿಕ ಶೌರ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಪಡೆದರು.
ಮೆರವಣಿಗೆಯಲ್ಲಿ ಬ್ರಹ್ಮೋಸ್ ಕ್ಷಿಪಣಿ, ಪಿನಾಕಾ ಮಲ್ಟಿ–ಬ್ಯಾರೆಲ್ ರಾಕೆಟ್ ಲಾಂಚರ್ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳ ಪ್ರದರ್ಶನ ನಡೆಯಿತು.
ಅಪಾಚೆ ದಾಳಿ ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಹಾರಾಟ ನಡೆಸಿ ತಮ್ಮ ಯುದ್ಧ ಸಾಮರ್ಥ್ಯವನ್ನು ಪ್ರದರ್ಶಿಸಿದರೆ, ಹೆಲಿಕಾಪ್ಟರ್‌ಗಳಿಂದ ಹೂವಿನ ದಳ ಸುರಿಸಿ ಜನಮನ ಸೆಳೆಯಲಾಯಿತು.
ಆಪರೇಷನ್ ಸಿಂಧೂರ್‌ನಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿಗಳ ಪ್ರದಾನದೊಂದಿಗೆ ಮೆರವಣಿಗೆ ಆರಂಭವಾಯಿತು.
ಈ ಸಂದರ್ಭದಲ್ಲಿ 1ನೇ ಪ್ಯಾರಾ ಸ್ಪೆಷಲ್ ಫೋರ್ಸ್‌ನ ಹುತಾತ್ಮ ಲ್ಯಾನ್ಸ್ ನಾಯಕ್ ಪ್ರದೀಪ್ ಕುಮಾರ್ ಅವರ ತಾಯಿ ಪ್ರಶಸ್ತಿ ಸ್ವೀಕರಿಸುವ ವೇಳೆ ಅಸ್ವಸ್ಥರಾಗಿದ್ದು, ಸ್ಥಳದಲ್ಲಿದ್ದ ಸೇನಾ ವೈದ್ಯಕೀಯ ತಂಡ ತಕ್ಷಣ ಚಿಕಿತ್ಸೆ ನೀಡಿ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿತು.
ನಂತರ ಶೌರ್ಯ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟ ಅಧಿಕಾರಿಗಳು ಪೆರೇಡ್ ಕಮಾಂಡರ್‌ಗೆ ಗೌರವ ಸಲ್ಲಿಸಿದರು.
ಪರಮ ವೀರ ಚಕ್ರ, ಅಶೋಕ ಚಕ್ರ ಮತ್ತು ಮಹಾವೀರ ಚಕ್ರ ಪುರಸ್ಕೃತ ಅಧಿಕಾರಿಗಳು ಮೆರವಣಿಗೆಯನ್ನು ಮುನ್ನಡೆಸಿದರು.
ಮಹಲ್ ರಸ್ತೆಯ ಜೀವನ್ ರೇಖಾ ಆಸ್ಪತ್ರೆ ಚೌಕದಿಂದ ಬಾಂಬೆ ಆಸ್ಪತ್ರೆ ಚೌಕದವರೆಗೆ ಸುಮಾರು ಮೂರು ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಮೆರವಣಿಗೆ ನಡೆಯಿತು. ಸಾರ್ವಜನಿಕರ ಅನುಕೂಲಕ್ಕಾಗಿ 18 ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಭಾರತೀಯ ಸೇನೆಯ 46 ಮೀಟರ್ ಉದ್ದದ ಮಾಡ್ಯುಲರ್ ಸೇತುವೆಯನ್ನೂ ಪ್ರದರ್ಶಿಸಲಾಯಿತು.
ಇದು ನದಿಗಳು ಮತ್ತು ಆಳವಾದ ಕಂದಕಗಳನ್ನು ತ್ವರಿತವಾಗಿ ದಾಟಲು ಉಪಯುಕ್ತವಾಗಿದೆ. ನೇಪಾಳ ಸೇನಾ ಬ್ಯಾಂಡ್ ಮೆರವಣಿಗೆಯಲ್ಲಿ ಭಾಗವಹಿಸಿ ಭಾರತ–ನೇಪಾಳ ಮಿಲಿಟರಿ ಸ್ನೇಹದ ಸಂದೇಶವನ್ನು ಸಾರಿತು.
ವಿಶ್ವದ ಏಕೈಕ ಸಕ್ರಿಯ ಕುದುರೆ ಸವಾರಿ ಅಶ್ವದಳ ರೆಜಿಮೆಂಟ್ ಆಗಿರುವ 61ನೇ ಅಶ್ವದಳವೂ ಮೆರವಣಿಗೆಯ ಆಕರ್ಷಣೆಯಾಗಿತ್ತು.
1953ರಲ್ಲಿ ಸ್ಥಾಪಿತವಾದ ಈ ದಳ ಇತಿಹಾಸದ ಕೊನೆಯ ಅಶ್ವಾರೋಹಿ ದಾಳಿಯನ್ನು ಮುನ್ನಡೆಸಿದ ಹೆಗ್ಗಳಿಕೆಯನ್ನು ಹೊಂದಿದೆ. ಮೆರವಣಿಗೆಯಲ್ಲಿ ರಾಜಸ್ಥಾನಿ ಸಂಸ್ಕೃತಿ ಮತ್ತು ಪರಂಪರೆಯ ಛಾಯೆಯೂ ಸ್ಪಷ್ಟವಾಗಿ ಮೂಡಿಬಂತು.
ಸೇನಾ ದಿನದ ಈ ಭವ್ಯ ಪೆರೇಡ್‌ಗೆ ಮಿಜೋರಾಂ ರಾಜ್ಯಪಾಲ ಜನರಲ್ ವಿ.ಕೆ. ಸಿಂಗ್ ಮುಖ್ಯ ಅತಿಥಿಯಾಗಿದ್ದರು.
ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ, ರಾಜಸ್ಥಾನ ರಾಜ್ಯಪಾಲ ಹರಿಭಾವು ಬಾಗ್ಡೆ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಹಿರಿಯ ಸೇನಾ ಅಧಿಕಾರಿಗಳು ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa