
ನವದೆಹಲಿ, 15 ಜನವರಿ (ಹಿ.ಸ.) :
ಆ್ಯಂಕರ್ : ಭಾರತೀಯ ಸೇನಾಧಿಕಾರಿ, ಕನ್ನಡತಿ ಸ್ವಾತಿ ಶಾಂತಕುಮಾರ್ ಅವರು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಪ್ರಶಸ್ತಿ ಗೆಲ್ಲುವ ಮೂಲಕ ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶ್ಲಾಘಿಸಿದ್ದಾರೆ.
ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯೊಂದಿಗೆ ಸಮಾನ ಪಾಲುದಾರರು, ಶಾಶ್ವತ ಶಾಂತಿ ಎಂಬ ಯೋಜನೆಗಾಗಿ ಬೆಂಗಳೂರಿನವರೇ ಆಗಿರುವ ಭಾರತೀಯ ಸೇನಾಧಿಕಾರಿ ಮೇಜರ್ ಸ್ವಾತಿ ಶಾಂತಕುಮಾರ್ 2025ರ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಪ್ರಶಸ್ತಿ ಗೆದ್ದು ದೇಶದ ಜತೆಗೆ ಕನ್ನಡ ನಾಡಿನ ಹೆಮ್ಮೆಯ ನಾರಿಯಾಗಿ ಹೊರ ಹೊಮ್ಮಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮೇಜರ್ ಸ್ವಾತಿ ಅವರು ಸಂಘರ್ಷ ಪೀಡಿತ ದೇಶದಲ್ಲಿ ಸುಮಾರು 5000ಕ್ಕೂ ಹೆಚ್ಚು ಮಹಿಳೆಯರಿಗೆ ಸುರಕ್ಷಿತೆ ಒದಗಿಸಿ, ದೇಶದ ಶಾಂತಿಪಾಲನೆ ಜತೆಗೆ ಮಹಿಳೆಯರ ಸಬಲೀಕರಣಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆಂದು ಜೋಶಿ ಕೊಂಡಾಡಿದ್ದಾರೆ.
ಕೆಲವು ಕಠಿಣ ಸವಾಲಿನ ಪರಿಸ್ಥಿತಿಗಳಲ್ಲಿ ದಕ್ಷತೆ ಮೆರೆದು ಸಮುದಾಯದ ನಂಬಿಕೆಯನ್ನು ಬಲಪಡಿಸಿದ್ದಾರೆ. ವಿಶ್ವಸಂಸ್ಥೆ ಪ್ರಶಸ್ತಿಗೆ ಪಾತ್ರರಾಗುವ ಮೂಲಕ ಭಾರತೀಯ ನಾಯಕತ್ವಕ್ಕೆ ಜಾಗತಿಕವಾಗಿ ಗೌರವ-ಮನ್ನಣೆ ದೊರಕಿಸಿಕೊಟ್ಟಿದ್ದಲ್ಲದೆ, ಇಡೀ ವಿಶ್ವಕ್ಕೇ ಕನ್ನಡ ನಾಡಿನ ಕೀರ್ತಿಯನ್ನು ಪಸರಿಸಿದ ಹೆಮ್ಮೆಯ ಕನ್ನಡತಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸ್ವಾತಿ ಶಾಂತಕುಮಾರ್ ಅವರು ತೋರಿದ ಈ ಸಾಧನೆ ಜಾಗತಿಕ ವೇದಿಕೆಯಲ್ಲಿ ಭಾರತೀಯ ಮಹಿಳೆಯರ ಧೈರ್ಯ, ಬದ್ಧತೆ ಮತ್ತು ಶಾಂತಿ ನಿರ್ಮಾಣಕ್ಕೆ ಸಾಕ್ಷಿಯಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa