ಕೋಲಾರ, 0೬ ಸೆಪ್ಟೆಂಬರ್ (ಹಿ.ಸ) :
ಆ್ಯಂಕರ್ : ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಗೆ ಕೂಡಲೇ ಸಚಿವರನ್ನು ನೇಮಕ ಮಾಡಿ ಮುಂದಿನ ವಾಲ್ಮೀಕಿ ಜಯಂತಿಯನ್ನು ಅವರ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮವನ್ನು ನಡೆಸುವಂತೆ ಒತ್ತಾಯಿಸಿ ಸೆ.೧೦ ರಂದು ಬೆಂಗಳೂರಿನ ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖಾ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಕೋಟೆ ಶ್ರೀನಿವಾಸ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸುಮಾರು ಎಂಟು ತಿಂಗಳ ಹಿಂದೆ ಸಚಿವರಾಗಿದ್ದ ಬಿ.ನಾಗೇಂದ್ರ ಅವರನ್ನು ಕುತಂತ್ರದಿಂದ ಇಡಿ ದಾಳಿಯಲ್ಲಿ ಸಿಲಿಕಿಸಿ ಮಂತ್ರಿ ಸ್ಥಾನವನ್ನು ಕಳೆದುಕೊಳ್ಳಲಾಗಿದೆ ಅಂದಿನಿಂದಲೂ ಇಲಾಖೆಯ ಸಚಿವರ ಸ್ಥಾನವು ಖಾಲಿಯಿದ್ದು ಸಾಕಷ್ಟು ಬಾರಿ ಸಮುದಾಯದ ಮುಖಂಡರು ಒತ್ತಾಯ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಯಾರನ್ನು ಕೂಡ ನೇಮಕ ಮಾಡಿಲ್ಲ ರಾಜ್ಯದ ಎಸ್ಟಿ ಮೀಸಲಿನ ೧೪ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ಗೆದ್ದಿದ್ದು ಕಾಂಗ್ರೆಸ್ ಸರ್ಕಾರದ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಾಲ್ಮೀಕಿ ಸಮುದಾಯವು ವಹಿಸಿದೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ನಾಲ್ಕನೇ ಸ್ಥಾನವನ್ನು ಹೊಂದಿರುವ ವಾಲ್ಮೀಕಿ ಸಮುದಾಯವು ಎಲ್ಲಾ ಹಂತದಲ್ಲಿ ಸರ್ಕಾರಕ್ಕೆ ಬೆಂಬಲವನ್ನು ನೀಡಲಾಗಿದೆ ಕೂಡಲೇ ವಾಲ್ಮೀಕಿ ಕಲ್ಯಾಣ ಮಂಡಳಿಯ ಸಚಿವರನ್ನು ನೇಮಕ ಮಾಡಬೇಕು ಬೆಂಗಳೂರಿನ ಯಾವುದಾದರೂ ಒಂದು ಮೆಟ್ರೋ ರೈಲು ನಿಲ್ದಾಣಕ್ಕೆ ವಾಲ್ಮೀಕಿ ಅವರ ಹೆಸರು ನಾಮಕರಣ ಮಾಡಬೇಕು ಜೊತೆಗೆ ಬೆಂಗಳೂರು ಹೃದಯ ಭಾಗದಲ್ಲಿ ಬೃಹತ್ ಪ್ರತಿಮೆ ನಿರ್ಮಾಣ ಮಾಡಬೇಕು ಜನಸಂಖ್ಯೆಗೆ ಅನುಗುಣವಾಗಿ ವಾಲ್ಮೀಕಿ ಸಮುದಾಯಕ್ಕೆ ಸರಿಯಾದ ಅನುದಾನ ಹಂಚಿಕೆ ಮಾಡಬೇಕು ಇಲ್ಲದೇ ಹೋದರೆ ವಾಲ್ಮೀಕಿ ಜಯಂತಿಯನ್ನು ಬಹಿಷ್ಕಾರ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಮಹಿಳಾ ಒಕ್ಕೂಟದ ರಾಜ್ಯ ಅಧ್ಯಕ್ಷೆ ಮಂಜುಳಾ ಶ್ರೀನಿವಾಸ್ ಮಾತನಾಡಿ ಕಾಂಗ್ರೆಸ್ ಸರ್ಕಾರದಿಂದ ವಾಲ್ಮೀಕಿ ಸಮುದಾಯಕ್ಕೆ ಆಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಬೇಕು ನಿಗಮ ಮಂಡಳಿಯಲ್ಲಿ ಸರಿಯಾದ ರೀತಿಯಲ್ಲಿ ಕೆಲಸಗಳು ಆಗುತ್ತಿಲ್ಲ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜವಾಬ್ದಾರಿ ವಹಿಸಬೇಕು ವಾಲ್ಮೀಕಿ ಸುಮುದಾಯದ ಪ್ರಭಾವಗಳನ್ನು ಕಾಣದ ಕೈಗಳನ್ನು ಬಳಸಿಕೊಂಡು ಮೂಲೆಗುಂಪು ಮಾಡಲು ಹೊರಟಿದ್ದಾರೆ ಇದರ ವಿರುದ್ದ ಸಮುದಾಯದ ಮುಖಂಡರು ಎಚ್ಚರಿಕೆ ವಹಿಸಬೇಕಾಗಿದೆ ಎಂದರು
ವಾಲ್ಮೀಕಿ ಸಮುದಾಯದ ಮುಖಂಡರಾದ ಕೋಟೆ ನಾಗರಾಜ್, ಹನುಮಂತಪ್ಪ, ಸಂತೋಷ್, ವೆಂಕಟಸ್ವಾಮಿ, ನರಸಿಂಹ, ಶ್ರೀನಿವಾಸ್, ಮುಂತಾದವರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್