ಮುದ್ದೇನಹಳ್ಳಿ ವಿವಿಯೊಂದಿಗೆ ಉತ್ತರ ವಿವಿ ಒಡಂಬಡಿಕೆ
ಮುದ್ದೇನಹಳ್ಳಿ ವಿವಿಯೊಂದಿಗೆ ಉತ್ತರ ವಿವಿ ಒಡಂಬಡಿಕೆ
ಚಿತ್ರ - ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಅಳವಡಿಕೆ ಕುರಿತಂತೆ ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯ ಮಾನವಾಭ್ಯುದಯ ವಿಶ್ವವಿದ್ಯಾಲಯದ ಸಂಸ್ಥಾಪಕ ಮಧುಸೂದನ್ ಸಾಯಿ ಅವರ ಸಮ್ಮುಖದಲ್ಲಿ ಉತ್ತರ ವಿವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಒಡಬಂಡಿಕೆ ಮಾಡಿಕೊಂಡರು.


ಕೋಲಾರ, 0೬ ಸೆಪ್ಟೆಂಬರ್ (ಹಿ.ಸ) :

ಆ್ಯಂಕರ್ : ಶಿಕ್ಷಣ ಅಕ್ಷರ ಕೌಶಲ್ಯಾಭಿವೃದ್ದಿಗೆ ಸೀಮಿತವಾಗದೇ ಜತೆಯಲ್ಲೇ ಮಾನವೀಯ ಮೌಲ್ಯಗಳನ್ನು ಕಲಿಸುವಂತಾದರೆ ಮಾತ್ರ ಸುಂದರ, ಸೌಹಾರ್ದತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ಅಭಿಪ್ರಾಯಪಟ್ಟರು.

ಬೆಂಗಳೂರು ಉತ್ತರ ವಿವಿ ವತಿಯಿಂದ ಮುದ್ದೇನಹಳ್ಳಿಯ ಮಾನವಾಭ್ಯುದಯ ವಿಶ್ವವಿದ್ಯಾಲಯದಲ್ಲಿ ನಡೆದ ಸಭೆಯಲ್ಲಿ ಉತ್ತರ ವಿವಿ ವ್ಯಾಪ್ತಿಯಲ್ಲಿ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸುವ ಕುರಿತಂತೆ ಒಡಂಬಡಿಕೆ ಮಾಡಿಕೊಂಡು ಅವರು ಮಾತನಾಡುತ್ತಿದ್ದರು.

ಮುದ್ದೇನಹಳ್ಳಿಯ ಮಾನವಾಭ್ಯುದಯ ವಿಶ್ವವಿದ್ಯಾಲಯದ ಸಂಸ್ಥಾಪಕ ಮಧುಸೂದನ್ ಸಾಯಿ ಅವರ ಸಮ್ಮುಖದಲ್ಲಿ ಉತ್ತರ ವಿವಿ ಕುಲಪತಿ ಪ್ರೊ. ನಿರಂಜನ ಹಾಗೂ ಮುದ್ದೇನಹಳ್ಳಿಯ ಮಾನವಾಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶ್ರೀಕಂಠ ಒಡಬಂಡಿಕೆ ಮತ್ತು ಒಪ್ಪಂದಗಳ ವಿನಿಮಯ ಮಾಡಿಕೊಂಡರು.

ಇದರಿಂದ ಬೆಂಗಳೂರು ಉತ್ತರ ವಿವಿಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಮಾನವೀಯ ಮೌಲ್ಯಗಳ ಅಳವಡಿಕೆಗೆ ಒತ್ತು ನೀಡುವುದಾಗಿ ತಿಳಿಸಿದರು.

ಆಧುನಿಕತೆ, ತಂತ್ರಜ್ಞಾನದ ಅಭಿವೃದ್ದಿಯಾಗುತ್ತಿದ್ದಂತೆ ಸುಶಿಕ್ಷಿತರೂ ಇಂದು ದಾರಿ ತಪ್ಪಿರುವುದನ್ನು ಕಂಡಿದ್ದೇವೆ, ನಮ್ಮ ಸಂಸ್ಕೃತಿ, ಸಂಸ್ಕಾರ, ಹೆತ್ತವರನ್ನು ಗೌರವಿಸುವ ಮನಸ್ಥಿತಿ ದೂರವಾಗುತ್ತಿದೆ ಎಂದು ವಿಷಾದಿಸಿದರು.

ವಿದ್ಯೆಗೆ ವಿನಯವೇ ಭೂಷಣ ಎನ್ನುವ ಮಾತಿದೆ, ಆದರೆ ಇಂದು ವಿದ್ಯೆಯೊಂದಿಗೆ ಮಾನವೀಯ ಮೌಲ್ಯಗಳಿದ್ದರೆ ಭೂಷಣ ಎನ್ನುವಾತಾಗಿದೆ, ಎಷ್ಟೇ ಸುಶೀಕ್ಷಿತರಾದರೂ, ಉನ್ನತ ಹುದ್ದೆಗೇರಿದರೂ, ಮಾನವೀಯತೆ ಇಲ್ಲವಾದಲ್ಲಿ ಏನು ಪ್ರಯೋಜನ, ಅಂತಹವರಿಂದ ಸಮಾಜ ಏನುತಾನೇ ನಿರೀಕ್ಷಿಸಲು ಸಾಧ್ಯ ಎಂದರು.

ಹೆತ್ತವರನ್ನು ವೃದ್ದಾಶ್ರಮಗಳಿಗೆ ಕಳುಹಿಸುವ ಸಂಸ್ಕೃತಿ ಹೋಗಬೇಕು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಬರುವಂತಾಗಬೇಕು ಎಂದ ಅವರು, ಈ ನಿಟ್ಟಿನಲ್ಲಿ ಇಂದು ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಅಳವಡಿಕೆ ಹೆಚ್ಚು ಸೂಕ್ತವೆನಿಸಿದೆ ಎಂದರು.

ಈ ಸಂದರ್ಭದಲ್ಲಿ ಎರಡೂ ವಿವಿಗಳ ಮುಖ್ಯಸ್ಥರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande