ಚಿಟ್ನಹಳ್ಳಿಯಲ್ಲಿ ಅದ್ವಯ ಶೀರ್ಷಿಕೆಯಡಿ ಕೃಷಿ ಮಾಹಿತಿ ಕೇಂದ್ರ
ಚಿಟ್ನಹಳ್ಳಿಯಲ್ಲಿ ಅದ್ವಯ ಶೀರ್ಷಿಕೆಯಡಿ ಕೃಷಿ ಮಾಹಿತಿ ಕೇಂದ್ರ
ಚಿತ್ರ : ಕೋಲಾರ ತಾಲ್ಲೂಕಿನ ಸುಗಟೂರು ಹೋಬಳಿ ಚಿಟ್ನಹಳ್ಳಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ರೇಷ್ಮೇ ಕೃಷಿ ಮಹಾವಿದ್ಯಾಲಯ ಚಿಂತಾಮಣಿಯ ಅಂತಿಮ ವರ್ಷದ ಬಿ, ಎಸ್ಸಿ(ಆನ್ಸ್) ಕೃಷಿ ವಿಧ್ಯಾರ್ಥಿಗಳಿಂದ ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ನಡೆಯಿತು.


ಕೋಲಾರ, 0೫ ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೃಷಿ ಮಾಹಿತಿ ಕೇಂದ್ರದಲ್ಲಿರುವ ಹೊಸ ತಂತ್ರಜ್ಞಾನಗಳು ರೈತರ ಸಮಸ್ಯೆಗೆ ಪರಿಹಾರವನ್ನು ಒದಗಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ರೈತರು ವೀಕ್ಷಿಸಿ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ಡೀನ್ ಡಾ|| ವೆಂಕಟರಮಣ ಕರೆ ನೀಡಿದರು.

ಕೋಲಾರ ತಾಲ್ಲೂಕಿನ ಸುಗಟೂರು ಹೋಬಳಿ ಚಿಟ್ನಹಳ್ಳಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ರೇಷ್ಮೇ ಕೃಷಿ ಮಹಾವಿದ್ಯಾಲಯ ಚಿಂತಾಮಣಿಯ ಅಂತಿಮ ವರ್ಷದ ಬಿ, ಎಸ್ಸಿ(ಆನ್ಸ್) ಕೃಷಿ ವಿಧ್ಯಾರ್ಥಿಗಳಿಂದ ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ೨೦೨೫-೨೬ ಶಿಬಿರದಡಿ ಮಾಹಿತಿ ಕೇಂದ್ರ ಉದ್ಘಾಟನೆ ಹಾಗೂ ಅದ್ವಯ ಶೀರ್ಷಿಕೆಯಡಿ ವನಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಮಾದರಿ ವೀಕ್ಷಿಸಿದ ಅವರು, ರೈತರು ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಬೇಕೆಂದು ತಿಳಿಸಿ, ರೈತರು ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಆಹಾರವನ್ನು ಸೇವನೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

‘ಅದ್ವಯ’ ಎಂದರೆ ಜ್ಞಾನ ಪ್ರಸರಣ, ಏಕತೆಯನ್ನು ಸೂಚಿಸುವ ಪದ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೃಷಿ ವಿಸ್ತರಣೆ, ಮಣ್ಣು ವಿಜ್ಞಾನ, ಬೀಜ ವಿಜ್ಞಾನ, ಅನುವಂಶಿಯತೆ ಮತ್ತು ಸಸ್ಯ ತಳಿ, ಜೇನು ಕೃಷಿ, ಸೂಕ್ಷ್ಮಾಣು ಶಾಸ್ತ್ರ, ಬೇಸಾಯಶಾಸ್ತ್ರ, ಆಹಾರ ವಿಜ್ಞಾನ, ಅರಣ್ಯ ಕೃಷಿ, ರೋಗಶಾಸ್ತ್ರ, ಕೀಟಶಾಸ್ತ್ರ, ಅರ್ಥಶಾಸ್ತ್ರ, ರೇಷ್ಮೆ ಕೃಷಿ, ತೋಟಗಾರಿಕೆ, ಕೃಷಿ ಇಂಜಿನಿಯರಿಂಗ್ ಮತ್ತು ಪಶು ಸಂಗೋಪನೆ ಸಂಗೋಪನೆ ವಿಭಾಗದ ವಿಷಯಗಳ ಬಗ್ಗೆ ಮಾದರಿಗಳನ್ನು ತಯಾರಿಸಿ ವೀಕ್ಷಣೆಗೆ ಇಟ್ಟಿದ್ದರು.

ರೈತರು ರೇಷ್ಮೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ, ಹುಳು ಸಾಕಾಣಿಕೆಯಲ್ಲಿ ರೋಗಬಾಧೆ ತಡೆಗೆ ಅಗತ್ಯ ವಾತಾವರಣ ನಿರ್ಮಿಸಿ, ಹಿಪ್ಪುನೇರಳೆ ಬೆಳೆಯಲ್ಲೂ ಹೊಸ ತಂತ್ರಜ್ಞಾನ, ಉತ್ತಮ ತಳಿಗಳನ್ನು ಬೆಳೆಯುವ ಕಾಯಕ ಮಾಡಿ ಎಂದರು.

ಕೃಷಿ,ರೇಷ್ಮೆ ಕೃಷಿ ತಂತ್ರಜ್ಞಾನ ಬಳಸಿ ಮಾಡಿದರೆ ಎಂದಿಗೂ ನಷ್ಟದ ಹಾದಿ ಹಿಡಿಯದು, ರೈತರು ತಮ್ಮ ಕೃಷಿ ಪದ್ದತಿಗಳಲ್ಲಿಬದಲಾವಣೆ ತಂದುಕೊಳ್ಳಬೇಕು, ಬೆಳೆ ಪದ್ದತಿ ಅನುಸರಿಸಬೇಕು, ಒಂದೇ ಬೆಳೆಯನ್ನು ಭೂಮಿಯಲ್ಲಿ ಬೆಳೆದರೂ ಸರಿಹೋಗದು ಎಂದರು.

ಕಾರ್ಯಕ್ರಮದಲ್ಲಿ ಡಾ|| ನವೀನ್ ಡಿ ವಿ, ಡಾ||ಸಂಜೀವ್ ಕ್ಯಾತಪ್ಪನವರ್, ಡಾ||ನಳೀನ, ಡಾ||ವೆಂಕಟರವಣ ನಾಯಕ್ ಜಿ ವಿ, ಡಾ|| ಅನಿಲ್ ಕಾಂಬಳೆ, ಡಾ|| ರಾಜೇಶ ಸಿ ಎಂ, ಡಾ|| ಪೂಜಾ ಕೋಲಾರ ಉಪಸ್ಥಿತರಿದ್ದು, ಗಿಡಗಳನ್ನು ನೆಟ್ಟು ನೀರುಣಿಸುವುದರ ಮೂಲಕ ವನಮಹೋತ್ಸವವನ್ನು ಆಚರಣೆ ಮಾಡಲಾಯಿತು.

ಅರಣ್ಯ ಮತ್ತು ಪರಿಸರ ಅಧ್ಯಯನ ವಿಭಾಗದ ಡಾ|| ಸಂಜೀವ್ ಕ್ಯಾತಪ್ಪನವರ್ ಮಾತನಾಡಿ, ಮಹೋತ್ಸವದ ಬಗ್ಗೆ ಅರಿವು ಮೂಡಿಸಿದರು. ಉತ್ತಮ ಆರೋಗ್ಯಕ್ಕಾಗಿ ಸ್ವಚ್ಛ ಆಮ್ಲಜನಕ ಸೇವನೆ ಮಾಡಬೇಕು. ಅದಕ್ಕಾಗಿ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪರಿಸರವನ್ನು ಕಾಪಾಡಬೇಕು ಹಾಗೆ ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಸಂಯೋಜಕರಾದ ಡಾ|| ಎಂ ವಿ ಶ್ರೀನಿವಾಸ್ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಗಳ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿ ಶ್ಲಾಘನೆ ವ್ಯಕ್ತಪಡಿಸಿದರು. ರೇಷ್ಮೆ ಕೃಷಿ ವಿಭಾಗದ ಮುಖ್ಯಸ್ಥರಾದ ಡಾ||ರಾಮಕೃಷ್ಣ ನಾಯಕ್ ಮಾತನಾಡಿ, ಮಾಹಿತಿ ಕೇಂದ್ರವು ರೈತರ ಸಮಸ್ಯೆಗೆ ಪರಿಹಾರ ನೀಡುವುದರಲ್ಲಿ ತುಂಬಾ ಅವಶ್ಯಕವಾಗಿದೆ. ಡಾ|| ನಳೀನ ಸಿ ಎನ್ ಮಣ್ಣಿನ ಆರೋಗ್ಯ ಚೀಟಿಯನ್ನು ವಿತರಿಸಿ ಮಣ್ಣಿನಲ್ಲಿ ಕೊರತೆ ಇರುವ ಪೋಷಕಾಂಶಗಳ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿ, ಪೋಷಕಾಂಶಗಳ ಕೊರತೆಯನ್ನು ನೀಗಿಸುವುದರ ಬಗ್ಗೆ ಸಲಹೆ ನೀಡಿದರು.

ಮಾಹಿತಿ ಕೇಂದ್ರವನ್ನು ಚಿಟ್ನಹಳ್ಳಿ ಗ್ರಾಮದ ಎಲ್ಲ ಶಾಲಾ ಮಕ್ಕಳು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್, ಮುಖಂಡರಾದ ವಿಶ್ವನಾಥ್, ನಾಗರಾಜ್, ಸುಬ್ರಮಣಿ, ಪುರುಷೋತ್ತಮ್, ಚಂದ್ರಶೇಖರ್ ಅಧ್ಯಕ್ಷರು ಹಾಲು ಒಕ್ಕೂಟ ಚಿಟ್ನಹಳ್ಳಿ, ಸಿ.ಬಿ.ಆನಂದ್, ಅಶೋಕ, ಮಂಜಣ್ಣ ಹಾಗೂ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಲು ವಿದ್ಯಾರ್ಥಿಗಳಾದ ಸೋಹನ್, ಸೃಜನ್, ಸಿದ್ದುಬಾ, ಶ್ರೀ ವಿಷ್ಣುತೇಜ್, ಸುಹಾನ್, ಸುನಿಲ್ ಕುಮಾರ್, ಸನತ್ ಕುಮಾರ್, ಶ್ರೇಯ, ಸ್ಪೂರ್ತಿ, ಸೋನುಪ್ರಿಯ, ಶ್ವೇತ, ಶಾಂತಲಾ, ಶ್ವೇತ ಎನ್ ಆರ್ ಮತ್ತು ಸ್ಮಿತಾ ಶ್ರಮಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande