ಕೋಲಾರ, 0೫ ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗುರುಭವನನಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೨.೫೦ ಕೋಟಿ ಅನುದಾನ ನೀಡತ್ತೇವೆ ೨೦೨೭ ರೊಳಗೆ ಕಟ್ಟಡವನ್ನು ಪೂರ್ಣಗೊಳಿಸಿ ಕಾರ್ಯಕ್ರಮವನ್ನು ಅದೇ ಕಟ್ಟಡದಲ್ಲಿ ನಡೆಸಲಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯ ಶಿಕ್ಷಕ ಸಂಘಟನೆಗಳಲ್ಲಿನ ಗೊಂದಲ ಮತ್ತು ನಾನಾ ಕಾರಣಗಳಿಗಾಗಿ ಸುಮಾರು ಐದಾರು ಬಾರಿ ಶಂಕುಸ್ಥಾಪನೆ ಮಾಡಲಾಗಿರುವ ಗುರುಭವಕ್ಕೆ ಮುಂದೆ ಅಂತಹ ಪರಿಸ್ಥಿತಿ ಬರುವುದಿಲ್ಲ ವಾರದೊಳಗೆ ಅನುದಾನಕ್ಕೆ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಲಾಗುತ್ತದೆ ಸರ್ಕಾರಿ ನೌಕರರು ಹಾಗೂ ಶಿಕ್ಷಕರು ಸಹ ಒಂದು ಎರಡು ದಿನಗಳ ವೇತನವನ್ನು ಕೊಡುವಂತೆ ಮನವಿ ಮಾಡಿದರು.
ಶಿಕ್ಷಕರು ನೀಡುವ ಶಾಲಾ ದಾಖಲೆಗಳು ಮಹತ್ವದ್ದಾಗಿದೆ ಮಕ್ಕಳು ಭಯಪಡುವುದು ಮಾತ್ರ ಪೋಷಕರಿಗಿಂತ ಹೆಚ್ಚು ಶಿಕ್ಷಕರಿಗೆ. ಶಿಕ್ಷಕರಿಂದ ಸಾವಿರಾರು ವಿಚಾರ ಕಲಿಯಬಹುದು ಅವರು ಕೊಡುವ ಜ್ಞಾನ, ಬುದ್ದಿ, ಆಚಾರ ವಿಚಾರಗಳು ಬೇರೆ ಎಲ್ಲೂ ಸಿಗುವುದಿಲ್ಲ ಯಾವಾಗಲೂ ಗುರು ಶಿಷ್ಯರ ಸಂಬಂಧ ಗಟ್ಟಿಯಾಗಿರುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ನಾವು ಯಾರೂ ದೇವರನ್ನು ನೋಡಿಲ್ಲ. ತಂದೆ ತಾಯಿ ನಂತರ ಕಣ್ಣಿಗೆ ಕಾಣುವ ದೇವರು ಮಾತ್ರ ಶಿಕ್ಷಕರು. ವಿದ್ಯಾರ್ಥಿಗಳನ್ನು ಉತ್ತರ ಪ್ರಜೆಯಾಗಿ ತಯಾರಿಸುವ ಶಿಲ್ಪಿಗಳು. ಖಾಸಗಿ ಶಿಕ್ಷಣ ವ್ಯವಸ್ಥೆಗೆ ಮಾರು ಹೋಗುತ್ತಿದ್ದೇವೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ? ಏಕೆ ದಾಖಲಾತಿ ಕಡಿಮೆ ಆಗುತ್ತಿದೆ ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕು. ವಿವಿಧ ಕಾರ್ಯಕ್ರಮ ನೀಡಿದರೂ ದಾಖಲಾತಿ ಕಡಿಮೆ ಆಗುತ್ತಿದೆ. ಉತ್ತಮ ವಾತಾವರಣ ನಿರ್ಮಿಸುವ ಕೆಲಸವನ್ನು ಸರ್ಕಾರಿ ಶಾಲೆಗಳಲ್ಲಿ ನಡೆಯಬೇಕು, ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಓದಿದ ಎಷ್ಟೋ ದೊಡ್ಡ ಮಟ್ಟದ ಅಧಿಕಾರಿಗಳು ಇದ್ದು ಅವರಿಂದಲೂ ಸಹಾಯ ಪಡೆಯಬೇಕು ಸಾಧ್ಯವಾದರೆ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು, ಹಳೆ ವಿದ್ಯಾರ್ಥಿಗಳು ತಾವು ಓದಿದ ಶಾಲೆಗೆ ಸೌಲಭ್ಯ ಕಲ್ಪಿಸಿಕೊಡಬೇಕು. ಎಲ್ಲವನ್ನೂ ಸರ್ಕಾರ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಗುರು ಭವನ ನಿರ್ಮಾಣ ಮಾಡುವುದಾಗಿ ಪ್ರತಿ ಸಲ ಭರವಸೆ ನೀಡುತ್ತಿದ್ದೇವೆ. ಆರೇಳು ಬಾರಿ ಶಂಕುಸ್ಥಾಪನೆ ಮಾಡಿದ್ದೇವೆ. ನಾನು ೧೦ ಲಕ್ಷ ನೀಡಿದ್ದೇನೆ. ಸಂಸದರಾಗಿದ್ದ ಮುನಿಸ್ವಾಮಿ ೨೫ಲಕ್ಷ ನೀಡಿದ್ದಾರೆ ಆದರೆ ಸಮಸ್ಯೆಯಾಗಿ ಹಣ ಬಂದಿಲ್ಲ ನನ್ನ ಅನುದಾನದಲ್ಲಿ ಕೆಲಸ ಪ್ರಾರಂಭ ವಾಗಿದೆ ಮುಂದೆ ಅವಶ್ಯಕತೆ ಇರುವ ಅನುದಾನ ಕೊಡಿಸತ್ತೇವೆ ಜೊತೆಗೆ ಮತ್ತೆ ೧೦ ಲಕ್ಷ ನೀಡಲು ಸಿದ್ದ ಎಂದರು.
ಜಿಲ್ಲಾಧಿಕಾರಿ ಎಂ.ಆರ್. ರವಿ ಮಾತನಾಡಿ, ವೈದ್ಯರು ಕೆಟ್ಡವರಾಗಿದ್ದರೆ ಒಂದು ವ್ಯಕ್ತಿ ಸಾಯಬಹುದು. ಒಬ್ಬ ಎಂಜಿನಿಯರ್ ಕೆಟ್ಟವರಾದರೆ ಒಂದು ಕಟ್ಟಡ ಬೀಳಬಹುದು. ಆದ್ರೆ ಒಬ್ಬ ಶಿಕ್ಷಕ ಕೆಟ್ಟವರಾದರೆ ಇಡೀ ಸಮಾಜ ಕೆಟ್ಟದಾಗುತ್ತದೆ ಎಂದರು.
ಶಿಕ್ಷಕರಿಗೆ ಪ್ರತಿ ಕ್ಲಾಸ್ ಕೂಡ ಅಗ್ನಿ ಪರೀಕ್ಷೆ.ನಿರಂತರ ಕಲಿಕೆಯಲ್ಲಿ ತೊಡಗಬೇಕು. ಪಾಠ ಮಾಡುತ್ತಾ ಬೆಳೆಯಬೇಕು. ನನಗೆ ಶಿಕ್ಷಕರ ಬಗ್ಗೆ ಸಾತ್ವಿಕ ಕೋಪವಿದೆ. ಏಕೆಂದರೆ ಸಂದರ್ಶನ ಎದುರಿಸುವುದನ್ನು ಯಾರೂ ನನಗೆ ಹೇಳಿ ಕೊಡಲಿಲ್ಲ. ಪುಸ್ತಕ ಜ್ಞಾನಕ್ಕೆ ಸೀಮಿತವಾಗಿದೆ. ವ್ಯಕ್ತಿತ್ವ ಸುಧಾರಣೆಗೆ ಆದ್ಯತೆ ಕೊಡಬೇಕು. ಚಾರಿತ್ರ್ಯ ತುಂಬಬೇಕು. ವಿದ್ಯಾರ್ಥಿಗಳಿಗೆ ಪ್ರಪಂಚ ತೋರಿಸಬೇಕು. ಇಲ್ಲದಿದ್ದರೆ ತಮ್ಮ ಬೋಧನೆ ಯಶಸ್ವಿಯಾಗುವುದಿಲ್ಲ ಎಂದು ತಿಳಿಸಿದರು.
ಸರ್ಕಾರಿ ಶಾಲೆ ಮುಚ್ಚಲು ಕಾರಣ ಏಕೆ? ದಾಖಲಾತಿ ಕಡಿಮೆ ಏಕೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆದರೆ, ಪ್ರತಿಭೆ ಇರುವುದು ಸರ್ಕಾರಿ ಶಾಲೆಯಲ್ಲಿ ಮಾತ್ರ ಶಿಕ್ಷಕರ ಖಾಸಗಿ ವರ್ತನೆ ಕೂಡ ಚೆನ್ನಾಗಿರಬೇಕು. ಏಕೆಂದರೆ ವಿದ್ಯಾರ್ಥಿಗಳು, ಸಮಾಜ ಗಮನಿಸುತ್ತಿರುತ್ತದೆ ಎಂದು ನುಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಎಲ್ಲರೂ ಏನನ್ನಾದರೂ ಕೊಡಬೇಕಾದರೆ ಜಿಪುಣತನ ತೋರಿಸುತ್ತೇವೆ. ಆದರೆ, ಶಿಕ್ಷಕರು ಮಾತ್ರ ತಮ್ಮ ಇಡೀ ಜೀವನವನ್ನು ಚೌಕಾಶಿ ಮಾಡದೆ ವಿದ್ಯಾರ್ಥಿಗಳಿಗೆ ಮುಡಿಪಾಗಿಟ್ಟಿದ್ದಾರೆ. ಶಿಕ್ಷಕರು ಮರ ನೀಡುವ ಹಣ್ಣುಗಳಂತೆ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಸಾವಿರಾರು ಮಂದಿಗೆ ದಾರಿ ತೋರಿಸಿದವರು. ತೃಪ್ತಿದಾಯಕ ವೃತ್ತಿ. ತುಂಬಾ ಗೌರವ ಪಡೆಯುವ ವೃತ್ತಿ ಕೂಡ. ಪೋಷಕರನ್ನು ಬಿಟ್ಟರೆ ಅತಿ ಹೆಚ್ಚು ನೆನಪಿಸಿಕೊಳ್ಳುವುದು ಶಿಕ್ಷಕರನ್ನು ಎಂದರು.
ಒಂದು ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಮುಖ್ಯ ಕಾರಣ ಶಿಕ್ಷಕರು. ಮನುಷ್ಯ ಎಂಬ ಕಲ್ಲನ್ನು ಶಿಲೆಯಾಗಿ ಮಾಡುವುದು ಶಿಕ್ಷಕರು. ಹೀಗಾಗಿ ಶಿಕ್ಷಕರು ಯಾವಾಗಲೂ ಸರಿ ಇರುವುದನ್ನೇ ಮಾತನಾಡಬೇಕು. ನೀವು ಏನನ್ನು ಹೇಳುತ್ತೀರಿ ಅದನ್ನು ಕಲಿಯಬೇಕು. ನಿತ್ಯ ಅರ್ಧ ಗಂಟೆ ಮಕ್ಕಳಿಗೆ ಸಮಾಜಿಕ ಜ್ಞಾನದ ಬಗ್ಗೆ ಹೇಳಿಕೊಡಿ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಉತ್ತಮ ಸಮಾಜಕ್ಕಾಗಿ, ದೇಶದ ನಿರ್ಮಾಣಕ್ಕಾಗಿ ಬುನಾದಿ ಹಾಕುವವರು ಶಿಕ್ಷಕರು ಉನ್ನತ ಹುದ್ದೆಯಲ್ಲಿ ಇದ್ದರೂ ಸಹ ಗುರುಗಳು ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ ಎಂದರು.
ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್ ಮಾತನಾಡಿ, ಶಾಲಾ ಶಿಕ್ಷಣದಲ್ಲಿ ಎಐಗೆ ಆದ್ಯತೆ ನೀಡಲು ಕ್ರಮ ವಹಿಸಲಾಗುತ್ತಿದೆ. ಹಳೆ ವಿದ್ಯಾರ್ಥಿಗಳು ಶಾಲಾಭಿವೃದ್ಧಿಗೆ ಸಹಾಯ ಮಾಡಬೇಕು. ಸರ್ಕಾರದಿಂದ ಎಲ್ಲಾ ಸೌಲಭ್ಯ ನೀಡಲಾಗುತ್ತಿದೆ. ಎಲ್ಲರ ಉದ್ದೇಶ ಗುಣಾತ್ಮಕ ಶಿಕ್ಷಣ ನೀಡುವುದಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ನಮ್ಮ ಮೊದಲ ರೋಲ್ ಮಾಡೆಲ್ ಶಿಕ್ಷಕರು. ನನ್ನ ಕನ್ನಡ ಮೇಸ್ಟ್ರು ನನಗೆ ರೋಲ್ ಮಾಡೆಲ್ ಆಗಿದ್ದಾರೆ ತಂದೆ ತಾಯಿ ಬಿಟ್ಟರೆ ಅತಿ ಹೆಚ್ಚು ಗೌರವ ಕೊಡುವುದು ಶಿಕ್ಷಕರಿಗೆ ಮಾತ್ರ ಸರ್ಕಾರಿ ನೌಕರರು ಹೆಚ್ಚು ಶಿಕ್ಷಕರಾಗಿದ್ದಾರೆ. ಗುರುಭವನ ಬಾಕಿ ಉಳಿದಿದೆ . ಅದರ ನಿರ್ಮಾಣಕ್ಕೆ ಸಹಕಾರ ನೀಡುತ್ತೇವೆ. ಒಂದು ದಿನದ ವೇತನ ನೀಡಲು ಸಭೆ ನಡೆಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ೧೮ ಶಿಕ್ಷಕರನ್ನು ಹಾಗೂ ನಿವೃತ್ತಿ ಶಿಕ್ಷಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಬಿಇಒ ಮಧುಮಾಲತಿ ಸೇರಿದಂತೆ ಶಿಕ್ಷಕರ ಸಂಘಟನೆಗಳ ಪದಾಧಿಕಾರಿ ಗಳಾದ ಎಸ್.ಚೌಡಪ್ಪ, ಮುರಳಿ ಮೋಹನ್, ನಾಗರಾಜ್, ಮುನಿಯಪ್ಪ, ಅಪ್ಪೇಗೌಡ, ಶಿವಕುಮಾರ್, ಸಿ.ವಿ ನಾಗರಾಜ್ ಶಂಕರೇಗೌಡ, ರಮೇಶ್, ಮಂಜುಳಾ,ಮುಂತಾದವರು ಇದ್ದರು.
ಚಿತ್ರ : ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಜಿಲ್ಲೆಯಾದ್ಯಂತ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ೧೮ ಶಿಕ್ಷಕರನ್ನು ಹಾಗೂ ನಿವೃತ್ತಿ ಶಿಕ್ಷಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು,
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್