ಎಂ.ಬಿ.ಬಿ.ಎಸ್ ಕೋರ್ಸಿಗೆ 50 ಹೆಚ್ಚುವರಿ ಸೀಟುಗಳು ಮಂಜೂರು
ವಿಜಯಪುರ, 05 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರಕ್ಕೆ 2025-26ನೇ ಶೈಕ್ಷಣಿಕ ವರ್ಷದಲ್ಲಿ ಎಂ.ಬಿ.ಬಿ.ಎಸ್ ಕೋರ್ಸಿಗೆ 50 ಹೆಚ್ಚುವರಿ ಸೀಟುಗಳು ಮಂಜೂರ
ಎಂಬಿಬಿಎಸ್


ವಿಜಯಪುರ, 05 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರಕ್ಕೆ 2025-26ನೇ ಶೈಕ್ಷಣಿಕ ವರ್ಷದಲ್ಲಿ ಎಂ.ಬಿ.ಬಿ.ಎಸ್ ಕೋರ್ಸಿಗೆ 50 ಹೆಚ್ಚುವರಿ ಸೀಟುಗಳು ಮಂಜೂರಾಗಿವೆ. ಇದರಿಂದಾಗಿ ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನಲ್ಲಿ ಈ ಬಾರಿ ಒಟ್ಟು 250 ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಸಿಗಲಿದೆ.

ಕಾಲೇಜು ಈ ವರ್ಷದ ಜನೇವರಿಯಲ್ಲಿ ಹೆಚ್ಚುವರಿ ಸೀಟು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿತ್ತು. ಅದರಂತೆ ಜೂನ್ 2025ರಲ್ಲಿ ನ್ಯಾಶನಲ್ ಮೆಡಿಕಲ್ ಕಮಿಷನ್(National Medical Commission) ಅಧಿಕಾರಿಗಳು ಕಾಲೇಜು ಮತ್ತು ಆಸ್ಪತ್ರೆಗೆ ಆಗಮಿಸಿ ಇಲ್ಲಿ ಲಭ್ಯವಿರುವ ಮೂಲಭೂತ ಸೌಲಭ್ಯಗಳು, ವೈದ್ಯಕೀಯ ಸಲಕರಣೆಗಳು, ಅರ್ಹ ತಜ್ಞವೈದ್ಯರು, ನರ್ಸಿಂಗ್ ಸಿಬ್ಬಂದಿ, ರೋಗಿಗಳ ದಾಖಲಾತಿ ಹಾಗೂ ಇನ್ನಿತರ ಸೌಲಭ್ಯಗಳ ಕುರಿತು ಮೌಲ್ಯಮಾಪನ ನಡೆಸಿ ವರದಿ ಸಲ್ಲಿಸಿದ್ದರು.

ಈ ವರದಿಯನ್ನು ಪರಿಗಣಿಸಿ ದೆಹಲಿಯ ನ್ಯಾಶನಲ್ ಮೆಡಿಕಲ್ ಕಮಿಷನ್ ಹೆಚ್ಚುವರಿಯಾಗಿ 50 ಎಂ.ಬಿ.ಬಿ.ಎಸ್ ಸೀಟುಗಳನ್ನು ಮಂಜೂರು ಮಾಡಿದೆ. ಇದರಿಂದಾಗಿ ಬಿ.ಎಲ್.ಡಿ.ಇ ಡೀಮ್ಡ್ ವಿವಿಯ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜು ಹೆಚ್ಚುವರಿ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಪ್ರಾಯೋಗಿತ ತರಬೇತಿ ಮತ್ತು ಹೊಸದಾಗಿ ವೈದ್ಯರನ್ನಾಗಿ ತಯಾರು ಮಾಡಿ ಉತ್ತರ ಕರ್ನಾಟಕದ ರೋಗಿಗಳಿಗೆ ಹೆಚ್ಚಿನ ಆರೋಗ್ಯ ಸೇವೆ ಒದಗಿಸಲು ಅನುಕೂಲವಾಗಿದೆ.

ಅಷ್ಟೇ ಅಲ್ಲ, ಈಗಾಗಲೇ ಎಂಡಿ, ಎಂ.ಎಸ್., ಎಂ.ಸಿ.ಎಚ್, ಡಿಎಂ ಸೇರಿದಂತೆ 24ಕ್ಕೂ ಹೆಚ್ಚು ನಾನಾ ಸ್ನಾತಕೋತ್ತರ ವಿಭಾಗಗಳಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದ್ಯಯನ ಮಾಡುತ್ತಿದ್ದಾರೆ.

ನ್ಯಾಶನಲ್ ಮೆಡಿಕಲ್ ಕಮಿಷನ್ ಹೊಸದಾಗಿ 50 ಸೀಟುಗಳನ್ನು ಮಂಜೂರು ಮಾಡಿರುವುದಕ್ಕೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಕುಲಾಧಿಪತಿ ಬಸನಗೌಡ ಎಂ. ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಹಂಗಾಮಿ ಕುಲಪತಿ ಡಾ. ಅರುಣ ಚಂ. ಇನಾಮದಾರ, ಸಂತಸ ವ್ಯಕ್ತಪಡಿಸಿದ್ದು, ಈ ಸೀಟುಗಳು ಮಂಜೂರಾಗಲು ಶ್ರಮಿಸಿದ ಕಾಲೇಜಿನ ಕಾಲೇಜಿನ ನಿಕಟಪೂರ್ವ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ವಿವಿಯ ಅಧಿಕಾರಿಗಳು, ಆಸ್ಪತ್ರೆಯ ವೈದ್ಯರು, ಕಾಲೇಜಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ಆರ್‌ ವಿ‌. ಕುಲಕರ್ಣಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ‌.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande