ಕೋಲಾರ, ೩೦ ಸೆಪ್ಟಂಬರ್ (ಹಿ.ಸ.) :
ಆ್ಯಂಕರ್ : ರಾಜಕೀಯ ಪಕ್ಷಗಳು ಸುಧಾರಣೆಯಾಗ ಬೇಕು. ಅದಕ್ಕೂ ಮೊದಲು ಸಮಾಜದ ಬೇರೆಬೇರೆ ಕ್ಷೇತ್ರಗಳು ಸುಧಾರಣೆಯಾಗ ಬೇಕು.ಜನರ ಬದಕು ಸುಧಾರಣೆಯಾಗಲು ವಿವಿದ ಕ್ಷೇತ್ರಗಳ ಸುಧಾರಣೆಯಾಗದ ಹೊರತು ಚುನಾವಣೆಗಳಲ್ಲಿ ಅಮೂಲಾಗ್ರ ಸುಧಾರಣೆ ಸಾಧ್ಯವಿಲ್ಲವೆಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅಭಿಪ್ರಾಯಟ್ಟರು.
ಕೋಲಾರದಲ್ಲಿ ಲಂಚ ಮುಕ್ತ ಕರ್ನಾಟಕ ವೇದಿಕೆಯ ಆಶ್ರಯದಲ್ಲಿ ನಡೆದ ಚುನಾವಣಾ ಸುಧಾರಣೆಗಳ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಂಗ,ಶಾಸಕಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ಪ್ರಜಾಪ್ರಭುತ್ವದ ಆಧಾರ ಸ್ಥಂಬಗಳಾಗಿವೆ. ರಾಜಕೀಯ ವ್ಯವಸ್ಥೆ ಕೇವಲ ಸಮಾಜದ ಪ್ರತಿಬಿಂಬ ಆಗಿದೆ. ಬರಗಾಲ ಬರಲಿ ಮಳೆಗಾಲ ಬರಲಿ ಕಾರ್ಯಾಂಗದಲ್ಲಿ ಕಾರ್ಯನಿರ್ವಹಿಸುವವರಿಗೆ ಒಂದನೇ ತಾರೀಖು ಸಂಬಳ ಪಾವತಿಯಾಗುತ್ತದೆ.ಆದರೆ ಶಾಸಕಾಂಗಕ್ಕೆ ಕೇವಲ ಏದು ವರ್ಷದ ಅವಧಿ ಇರುತ್ತದೆ. ಜನರು ನ್ಯಾಯಾಂಗದ ಬಗ್ಗೆ ವಿಶ್ವಾಸ ಹೊಂದಿದ್ದಾರೆ.ಮಾಧ್ಯಮ ಕ್ಷೇತ್ರ ಜನಾಭಿಪ್ರಾಯ ಮೂಡಿಸುತ್ತದೆ.ಎಲ್ಲ ಕ್ಷೇತ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ಸಾಧ್ಯ ಎಂದರು.
ಕೆ.ಎ.ಆರ್. ಎಸ್. ಪಕ್ಷದ ಗೌರವ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಚುನಾವಣೆಗಳ ಸುಧಾರಣೆ ಅಗತ್ಯವಿದೆ.ಕಳೆದ ೧೯೫೨ರ ಸಾರ್ವತ್ರಿಕ ಚುನಾವಣೆಗಳನಂತರ ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಿಗೆ ನಿರಂತರವಾಗಿ ೫ ವರ್ಷಗಳಿಗೊಮ್ಮೆ ಚುನಾವಣೆಗಳು ನಡೆಯುತ್ತಿವೆ.ತುರ್ತು ಪರಿಸ್ಥಿತಿ ಹಾಗು ಅವಧಿಗೆ ಮುನ್ನ ಲೋಕ ಸಭೆ ಮತ್ತು ವಿಧಾನ ಸಭೆಗಳನ್ನು ವಿಸರ್ಜಿಸಿದಾಗ ಮಾತ್ರ ಚುನಾವಣೆಗಳು ೫ ವರ್ಷಗಳಿಗೊಮ್ಮೆ ಚುನಾವಣೆಗಳು ನಡೆಯಲಿಲ್ಲ.ಈ ಹಿಂದೆ ಚುನಾವಣೆಗಳು ನ್ಯಾಯ ಸಮ್ಮತವಾಗಿ ನಡೆಯುತ್ತಿದ್ದವು.ಅದರೆ ಕಾಲ ಬದಲಾದಂತೆ ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯುತ್ತಿಲ್ಲ. ಹಣ ಬಲ, ತೋಳ್ಬಲ ,ಜಾತಿ ಮತ್ತು ಕೋಮುವಾದ ಚುನಾವಣಾಗಳ ಮೇಲೆ ಪ್ರಭಾವ ಬೀರುತ್ತಿವೆ ಎಂದರು.
ಬಲಿಷ್ಠ ಜಾತಿಗಳಲ್ಲಿ ಪ್ರಾಮಾಣಿಕರಿದ್ದರು ಹಣವಿಲ್ಲದೆ ಚುನಾವಣೆಗಳನ್ನು ಎದುರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾಧಿಸಿದರು. ಯಾವುದೇ ಜಾತಿಯವರು ಆಗಿರಲಿ ಹಣ ವೆಚ್ಚ ಮಾಡದೆ ಚುನಾವಣೆಗಳನ್ನು ಎದುರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.ಚುನಾವಣೆಗಳಲ್ಲಿ ಹಣ ಚೆಲ್ಲಿ ಅಕ್ರಮಗಳನ್ನು ನಡೆಸಯವವರು ಶಾಸನ ಸಭೆಗಳಿಗೆ ಆಯ್ಕೆಯಾಗುತ್ತಿದ್ಧಾರೆ. ಚುನಾವಣಾ ಆಯೋಗ ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ.ಆಳುವ ಪಕ್ಷದ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದೆ ಎಂದರು.
ಚುನಾವಣಾ ಅಕ್ರಮಗಳನ್ನು ಆಯೋಗ ತಡೆಯುತ್ತಿಲ್ಲ. ಹಣವೇ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುವ ಕಾರಣ ಪ್ರಾಮಾಣಿಕ ವ್ಯಕ್ತಿಗಳು ಹಾಗು ಸಂಪನ್ಮೂಲಗಳು ಇಲ್ಲದ ವ್ಯಕ್ತಿಗಳು ಸಕ್ರೀಯ ರಾಜಕಾರಣ ಮಾಡಲು ಮತ್ತು ಚುನಾವಣೆಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ.ರಾಜ್ಯ ಚುನಾವಣಾ ಆಯೋಗ ಅತ್ಯಂತ ದುರ್ಬಲವಾಗಿದೆ.ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿಗಳು ,ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸುವಂತೆ ರಾಜ್ಯ ಹೈಕೋರ್ಟ್ ಹಲವು ಸಲ ರಾಜ್ಯ ಚುನಾವಣಾ ಆಯೋಗಕ್ಕೆ ಛೀಮಾರಿ ಹಾಕಿದೆ.ಆದರೆ ರಾಜ್ಯ ಸರ್ಕಾರದ ತಾಳಕ್ಕೆ ತಕ್ಕಂತೆ ನಡೆಯುವ ರಾಜ್ಯ ಚುನಾವಣಾ ಆಯೋಗ ಇದುವರೆಗೂ ಚುನಾವಣೆಗಳನ್ನು ನಡೆಸಿಲ್ಲ ಎಂದರು.
ಜಿಲ್ಲಾ ಪಂಚಾಯಿತಿಗಳು,ತಾಲ್ಲೂಕು ಪಂಚಾಯಿತಿಗಳು ಹಾಗು ಬಿ.ಬಿ.ಎಂ.ಪಿ.ಗೆ ಚುನಾವಣೆಗಳು ನಡೆದರೆ ಮೂರನೇ ಸ್ಥರದ ನಾಯಕರು ಬೆಳೆಯುತ್ತಾರೆ ಎಂದು ಅಭಿಪ್ರಾಯಪಟ್ಟರು. ಚುನಾವಣೆಗಳಲ್ಲಿ ಅಕ್ರಮಗಳು ಮತದಾರರ ಪಟ್ಟಿಯ ನೋಂದಣಿಯಿಂದಲೇ ಆರಂಭವಾಗುತ್ತವೆ. ಎರಡು ಕಡೆ ಮತದಾರರ ಪಟ್ಟಿಯಲ್ಲಿ ನೊಂದಣಿಯಾಗಿ ಮತ ಚಲಾಯಿಸುತ್ತಾರೆ ಎಂದರು.
ಮತದಾರರ ಪಟ್ಟಿಗೆ ಆಧಾರ್ ಜೋಡಣೆ ಮಾಡಬೇಕೆಂಬ ಪ್ರಯತ್ನಗಳು ನಡೆಯುತ್ತಿವೆ.ಯು.ಪಿ.ಎ ಸರ್ಕಾರ ಅಧಿಕಾರದಲ್ಲಿದ್ದಾಗ ಆಧಾರ್ ವಿಶಿಷ್ಠ ಗುರುತು ಜಾರಿಗೆ ತರಲಾಯಿತು.ಆದರೆ ಅಂದು ಬಿ.ಜೆ.ಬಿ ಬಲವಾಗಿ ವಿರೋಧಿಸಿತು.ಮತದಾರರ ಪಟ್ಟಿಯಲ್ಲಿನ ಲೋಪದೋಷಗಳು ಮತ್ತು ಅಕ್ರಮಗಳನ್ನು ತಡೆಯಲು ಇಂದು ಮತದಾರರ ಪಟ್ಟಿಗೆ ಆಧಾರ್ ಜೋಡಣೆ ಅಗತ್ಯವೆಂದು ಬಿ.ಜೆ.ಪಿ ಪ್ರತಿಪಾದಿಸುತ್ತಿದೆ.ಮತದಾನದ ಹಕ್ಕನ್ನು ನಿರಾಕರಿಸುವ ಪಿತೂರಿ ನಡೆಯುತ್ತಿದೆ ಎಂದು ರೆಡ್ಡಿಯವರು ಆತಂಕ ವ್ಯಕ್ತಪಡಿಸಿದರು.
ಸಾಮಾಜಿಕ ಹೋರಾಟಗಾರ ಬೆಲ್ಲಕೊಂಡ ರಮೇಶ್ ಮಾತನಾಡಿ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಮತಪಡೆದವರನ್ನು ಆಯ್ಕೆಯಾದ ಜನಪ್ರತಿನಿಧಿ ಎಂದು ಘೋಷಿಸಲಾಗುತ್ತದೆ.ವಾಸ್ತವವಾಗಿ ಅವರಿಗೆ ಇಡೀ ಮತದಾರರ ಬೆಂಬಲವಿರುವುದಿಲ್ಲ.ಅಂತಹ ಜನಪ್ರತಿನಿಧಿಗೆ ನಮ್ಮನ್ನು ಆಳುವ ಅಧಿಕಾರ ಬರುತ್ತದೆ.ಕೆಲಸ ಮಾಡದವರನ್ನು ವಾಪಸ್ ಕರೆಸಿಕೊಳ್ಳಯವ ಅಧಿಕಾರ ಜನರಿಗೆ ಇರಬೇಕು. ಅಂತಹ ಅಧಿಕಾರ ಜನರಿಗೆ ನೀಡಲು ವಿಧೇಯಕವನ್ನು ಜಾರಿಗೆ ತರಬೇಕು ಎಂದರು.
ಚುನಾವಣಾ ಆಯೋಗಕ್ಕೆ ಆಯುಕ್ತರನ್ನು ನೇಮಕ ಮಾಡುವ ಅಧಿಕಾರ ಆಡಳಿತ ಪಕ್ಷ ಹೊಂದಿದೆ. ಆಯುಕ್ತರನ್ನು ಪ್ರಧಾನ ಮಂತ್ರಿಗಳು, ವಿರೋಧ ಪಕ್ಷದ ನಾಯಕರು ಹಾಗು ಸುಪ್ರೀಮ್ ಕೋರ್ಟ್‌ನ ಮುಖ್ಯ ನಾಯಾಧೀಶರ ಸಮಿತಿ ನೇಮಕ ಮಾಡುತ್ತದೆ. ಆದರೆ ಆಡಳಿತ ಪಕ್ಷಕ್ಕೆ ನಿಷ್ಠರಾಗಿರುವ ವ್ಯಕ್ತಿಗಳನ್ನು ನೇಮಕ ಮಾಡಲಾಗುತ್ತದೆ.ಇದರಿಂದಾಗಿ ಚುನಾವಣಾ ಆಯೋಗ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಿಲ್ಲವೆಂದರು.
ಕೋಲಾರ ಜಿಲ್ಲಾ ಕೆ.ಆರ್.ಎಸ್ ಪಕ್ಷದ ಜಿಲ್ಲಾ ಅಧ್ಯಕ್ಷೆ ಇಂದಿರಾ ಮಾತನಾಡಿ ನಾಯಕತ್ವ ಬೆಳೆಸಲು ಕೆ.ಆರ್.ಎಸ್. ಪಕ್ಷ ಅವಕಾಶ ಕಲ್ಪಿಸಿದೆ.ಪಕ್ಷ ನ್ಯಾಯ ಧರ್ಮದ ಹಾದಿಯಲ್ಲಿ ಕೆಲಸ ಮಾಡುತ್ತಿದೆ.ನಮ್ಮ ಹೋರಾಟದಿಂದಾಗಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಗುರುತಿನ ಕಾರ್ಡ್ ಧರಿಸುತ್ತಾರೆ.ಇದರಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ದಳ್ಳಾಳಿಗಳನ್ನು ಹೊರಹಾಕಲು ಸಾಧ್ಯವೆಂದರು.
ಪೋಲೀಸರು ಪ್ರಶ್ನೆ ಮಾಡುವ ಧೈರ್ಯವನ್ನು ನಮ್ಮ ಪಕ್ಷದ ಕಾರ್ಯಕರ್ತರು ಹೊಂದಿದ್ದಾರೆ.ಒಳ್ಳೆಯ ಸಮಾಜ ನಿರ್ಮಾಣ ಮಾಡುವುದು ನಮ್ಮ ಗುರಿ ಆಗಿದೆ ಎಂದರು. ಮಾಹಿತಿ ಹಕ್ಕು ಹೋರಾಟಗಾರ ಮಂಜುನಾಥ್ ಮಾತನಾಡಿ ಕೆಲವು ಅಧಿಕಾರಿಗಳು ಉಧ್ಧೇಶಪೂರ್ವಕವಾಗಿ ಮಾಹಿತಿ ನೀಡಲು ನಿರಾಕರಿಸುತ್ತಾರೆ. ಆದರೆ ಅಂತಹ ಅಧಿಕಾರಿಗಳ ವಿರುಧ್ಧ ಮೇಲ್ಮನವಿ ಸಲ್ಲಿಸಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಂಚ ಮುಕ್ತ ಕರ್ನಾಟಕ ವೇದಿಕೆಯ ಅಧ್ಯಕ್ಷ ವಿ.ಆರ್ .ಮರಾಟೆ,ವಕೀಲರಾದ ರತ್ನ ಗೌಡ,ಲಂಚ ಮುಕ್ತ ವೇದಿಕೆಯ ಕಾರ್ಯದರ್ಶಿ ನರಸಿಂಹ ಮೂರ್ತಿ ,ಖಜಾಂಚಿ ಸುಬ್ರಮಣಿ. ಜಿಲ್ಲಾಧ್ಯಕ್ಷ ಮಂನಜು ನಾಥ್ ,ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ , ಉಪಾಧ್ಯಕ್ಷೆ ಪದ್ಮಾವತಿ ,ಕೋಲಾರ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಯುವ ಧ್ವನಿ ವೆಂಕಟೇಶ್ ಭಾಗವಹಿಸಿದ್ದರು.
ಚಿತ್ರ; ಲಂಚ ಮುಕ್ತ ಕರ್ನಾಟಕ ವೇದಿಕೆಯ ಆಶ್ರಯದಲ್ಲಿ ನಡೆದ ಚುನಾವಣೆಗಳ ಸುಧಾರಣೆಯ ಬಗ್ಗೆ ನಡೆದ ವಿಚಾರ ಸಂಕಿರಣವನ್ನು ಮಾಜಿ ಸಭಾಪತಿ ವಿ.ಆರ್ .ಸುದರ್ಶನ್ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್