ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ ಉತ್ತಮ ಸ್ಪಂದನೆ : ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ
ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ ಉತ್ತಮ ಸ್ಪಂದನೆ ; ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ
ಚಿತ್ರ : ಕೋಲಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆನಡೆಸಿ ನಂತರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಧ್ಯಮಗೋಷ್ಠಿಯಲ್ಲಿ ಮಾತನಾಡಿದರು.


ಕೋಲಾರ, ೩೦ ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಶೇಕಡ ೩೫ ರಷ್ಟು ಪೂರ್ಣ ಗೊಂಡಿದ್ದು, ನಿನ್ನೆ ಒಂದೇ ದಿನ ೩೬ ಸಾವಿರ ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

ಕೋಲಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಪ್ರತಿ ತಾಲೂಕಿನಲ್ಲಿ ತಹಶೀಲ್ದಾರ್ ಒಳಗೊಂಡ ಗಣತಿದಾರರ ತಂಡಕ್ಕೆ ಪ್ರತಿ ದಿನ ೧೦ ಸಾವಿರ ಮನೆಗಳ ಸಮೀಕ್ಷೆ ನಡೆಸಲು ಗುರಿ ನೀಡಲಾಗಿತ್ತು, ಆದರೆ ಆ ನಿರೀಕ್ಷತ ಮಟ್ಟದಲ್ಲಿ ಸಾಧಿಸಿಲ್ಲ. ಕೆಲವು ಶಿಕ್ಷಕರು ಒಂದೇ ದಿನ ೪೧ ಮನೆಗಳ ಸಮೀಕ್ಷೆ ಮಾಡಿದ್ದಾರೆ. ಸರ್ಕಾರ ನಿಗದಿಪಡಿಸಿರುವ ದಿನಾಂಕ ಅಕ್ಟೋಬರ್ ೭ ರ ಒಳಗೆ ಸಮಿಕ್ಷೆ ಕಾರ್ಯ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ಮನೆಮನೆಗೆ ಸಮೀಕ್ಷೆ ಜೊತೆಗೆ ಸಾರ್ವಜನಿಕರು ನೇರವಾಗಿ ಸ್ವಯಂಪ್ರೇರಿತರಾಗಿ ಭಾಗವಹಿಸಲು ಸಿಟಿಜನ್ ಪೋರ್ಟಲ್ ಸಿದ್ದಪಡಿಸಲಾಗಿದೆ. ಪೋರ್ಟಲ್ ಗೆ ಭೇಟಿ ನೀಡಿ ಮಾಹಿತಿ ನೀಡುವ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ಸಮೀಕ್ಷೆಯಲ್ಲಿ ಕಂಡು ಬರುವ ಲೋಪ- ತಾಂತ್ರಿಕ ಸಮಸ್ಯೆಗಳನ್ನು ತಾಂತ್ರಿಕ ತಜ್ಞರು ಸರಿಪಡಿಸವ ಕಾರ್ಯ ಮಾಡುತ್ತಿದ್ದಾರೆ. ನೆಟ್ ವರ್ಕ್ ಸಮಸ್ಯೆಯಿರುವ ಗಡಿಭಾಗದ ಪ್ರದೇಶಗಳಲ್ಲಿ ಯಾರೂ ಸಮೀಕ್ಷೆಯಿಂದ ಹೊರಗೆ ಉಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರಿ ಕಟ್ಟಡಗಳಲ್ಲಿ ಶಿಬಿರ ಏರ್ಪಡಿಸಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಕ್ರಮವಹಿಸಲಾಗಿದೆ. ಮುಳಬಾಗಿಲು ತಾಲೂಕಿನಲ್ಲಿ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದು, ಅಲ್ಲೂ ಸಹ ಶೀಬಿರ ಏರ್ಪಡಿಸಲು ಕ್ರಮವಹಿಸಲಾ ಗುವುದು.

ಸಮೀಕ್ಷೆಯಲ್ಲಿ ಶೇಕಡ ೧೦೦ ರಷ್ಟು ಭಾಗವಹಿಸಲು ಹಿಂದುಳಿದ ಆಯೋಗದಿಂದ ಎಲ್ಲಾ ರೀತಿಯ ಅಗತ್ಯ ಕ್ರಮವಹಿಸಲಾಗಿದೆ ಎಂದರು.

ಪ್ರತಿ ೨೦ ಜನ ಗಣತಿದಾರರಿಗೆ ಒಬ್ಬರು ಸೂಪರ್ ವೈಸರ್ ನ್ನು ನೇಮಿಸಲಾಗಿದೆ. ಬ್ಲಾಗಳಿಗೆ ತಹಶೀಲ್ದಾರರು ಶಿಕ್ಷಕರನ್ನು ನಿಯೋಜಿಸಿದ್ದ, ವ್ಯವಸ್ಥಿತವಾಗಿ ಸಾಕಷ್ಟು ವೇಗವಾಘಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಸಮೀಕ್ಷಾ ಕಾರ್ಯಕ್ಕೆ ನಿಯೋಜನೆಯಾ ಗಿರುವ ಗಣತಿದಾರರು ಈ ವರೆಗೆ ಸಮೀಕ್ಷಾ ಕಾರ್ಯವನ್ನು ಮಾಡದೆ ಇದ್ದರೆ ಅಂತಹವರ ಮಾಹಿತಿಯನ್ನು ಆನ್ ಲೈನ್ ಮೂಲಕವೇ ಪಡೆದು ನೋಟೀಸ್ ಜಾರಿ ಮಾಡಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗಿದೆ. ಸಮೀಕ್ಷಾ ಕಾರ್ಯಕ್ಕೆ ನಿಯೋಜನೆಯಾಗಿರುವ ಯಾವುದೇ ಅಧಿಕಾರಿಗಳು, ಗಣತಿದಾರರು ಅಥವಾ ಸಿಬ್ಬಂದಿ ಅಸಹಕಾರ ತೋರಿದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮಕ್ಕೆ ಒಳಪಡಿಸಲು ಸೂಚಿಸಲಾಗಿದೆ ಎಂದರು.

ಯಾವುದೇ ನೆಪ ಹೇಳದೆ ತಮಗೆ ನಿಯೋಜಿತವಾಗಿರುವ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿನಿತ್ಯದ ಗುರಿ ಯನ್ನು ಸಾಧಿಸಬೇಕು. ಸಮೀಕ್ಷಾ ಕಾರ್ಯವನ್ನು ಅಕ್ಟೋಬರ್ ೭ ರೊಳಗಾಗಿ ಪೂರ್ಣ ಗೊಳಿಸುವಂತೆ ಮಾನ್ಯ ಮುಖ್ಯಮಂತ್ರಿಗಳು ವಿಡಿಯೋ ಸಂವಾದ ಸಭೆಯಲ್ಲಿ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದು. ನಗರ ಪ್ರದೇಶ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಗ್ರಾಮಾಂತರ ಪ್ರದೇಶದಲ್ಲಿ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ದಿನನಿತ್ಯ ಸಮೀಕ್ಷಾ ಕಾರ್ಯದ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ. ಸಮೀಕ್ಷಾ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದರೆ ತುರ್ತು ಕ್ರಮಗಳನ್ನು ಕೈಗೊಂಡು ಚುರುಕುಗೊಳಿಸುವ ಕಾರ್ಯವನ್ನು ಮಾಡಬೇಕು. ಈ ನಿಟ್ಟಿನಲ್ಲಿ ತಹಶೀಲ್ದಾರ್ ಅವರು ತಾಲ್ಲೂಕು ಮಟ್ಟದಲ್ಲಿ ನಿಗಾವಹಿಸಲು ಸೂಚನೆ ನೀಡಿದರು.

ಗಣತಿದಾರರು ಗಣತಿ ಕಾರ್ಯಕ್ಕೆ ಹೋದಾಗ ಯಾವುದಾದರೂ ಮನೆಗಳು ಬೀಗ ಹಾಕಿದ್ದರೆ ಅಂತಹ ಮನೆಗಳ ಮುಂಭಾಗದಲ್ಲಿ ಗಣತಿದಾರರು ಬಂದು ಹೋಗಿದ್ದಾರೆ ಎಂಬುದನ್ನು ತಿಳಿಸಿಕೊಡಲು ಸ್ಟಿಕ್ಕರ್ಗಳನ್ನು ಅಂಟಸಿ ತಮ್ಮ ದೂರವಾಣಿ ವಿವರವನ್ನು ಸ್ಟಿಕ್ಕರ್ ಮೇಲೆ ಬರೆದು ಸಂಪರ್ಕಿಸಲು ತಿಳಿಸಲಾಗಿದೆ. ಜಿಲ್ಲೆಯಲ್ಲಿ ಶೇಕಡ೩೫% ಮನೆಗಳ ಗಣತಿ ಕಾರ್ಯ ಮುಗಿದಿದ್ದು ಇನ್ನೂ ೮ ದಿನಗಳಲ್ಲಿ ಗಣತಿ ಕಡ್ಡಾಯವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಗಡಿ ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆ ಇರುವುದರಿಂದ ಶ್ರೀನಿವಾಸಪುರ ತಾಲ್ಲೂಕಿನ ಸುಮಾರು ೭ ಗ್ರಾಮಗಳಲ್ಲಿ ಶಿಬಿರಗಳನ್ನು ನಡೆಸುವ ಮೂಲಕ ಗಣತಿ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದ್ದು ೨೫೬ ಕುಟುಂಬಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಗಣತಿಕಾರ್ಯವನ್ನು ಮುಗಿಸಿರುವ ಗಣತಿದಾರರಿಗೆ ಜಿಲ್ಲಾಡಳಿತ ವತಿಯಿಂದ ಅಭಿನಂದಿಸಲಾಯಿತು. ಪ್ರತಿಯೊಬ್ಬ ಗಣತಿದಾರರಿಗೂ ೧೨೫ ಕುಟುಂಬಗಳನ್ನು ನೀಡಿದ್ದು ಅದರಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕು ಗಳ ೯ ಗಣತಿದಾರರು ತಮ್ಮ ಸಮೀಕ್ಷೆಯನ್ನು ಮುಗಿಸಿದ್ದು ಇನ್ನು ಹೆಚ್ಚಿನ ಮನೆಗಳನ್ನು ಕೊಟ್ಟರೆ ಸಮೀಕ್ಷೆ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪಿ ಭಾಗೇವಾಡಿ, ಅಪರ ಜಿಲ್ಲಾಧಿಕಾರಿ ಮಂಗಳ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಗೀತಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆನಡೆಸಿ ನಂತರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande