ಕೋಲಾರ, ೨೪ ಸೆಪ್ಟಂಬರ್ (ಹಿ.ಸ.) :
ಆ್ಯಂಕರ್ : ಯಾವುದೇ ವ್ಯಕ್ತಿಯನ್ನು ಬಲ ವಂತವಾಗಿ ತಮ್ಮ ಅನುಕೂಲಕ್ಕಾಗಿ ದುಡಿಸಿ ಕೊಳ್ಳುವುದು, ಆ ವ್ಯಕ್ತಿಗೆ ಸರ್ಕಾರ ನಿಗದಿಪಡಿಸಿದ ಕೂಲಿಗಿಂತ ಕಡಿಮೆ ನೀಡುವುದು ಹಾಗೂ ಸೌಲಭ್ಯ ನಿರಾಕರಿಸುವುದು ಕಾನೂನು ಬಾಹಿರವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ನಟೇಶ್ ಆರ್.ಹೇಳಿದರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮುಕ್ತಿ ಒಕ್ಕೂಟ ಕರ್ನಾಟಕ, ಶಾಂತ ಜೀವ ಜ್ಯೋತಿ ಬೆಂಗಳೂರು ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಬುಧವಾರ ನಡೆದ ಮಾನವ ಕಳ್ಳ ಸಾಗಣೆ ನಿರ್ಮೂಲನೆ ಮತ್ತು ಜೀತ ಪದ್ಧತಿ ತಡೆಗಟ್ಟುವಲ್ಲಿ ಪತ್ರಕರ್ತರರ ಪಾತ್ರ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ಜೀತ ಕಾರ್ಮಿಕರು ವಂಚಿತರಾಗದಂತೆ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ ಎಂದರು.
ಮಾನವ ಕಳ್ಳ ಸಾಗಣೆ ನಿರ್ಮೂಲನೆ ಮತ್ತು ಜೀತ ಪದ್ಧತಿ ತಡೆಗಟ್ಟುವಲ್ಲಿ ನಾಲ್ಕನೇ ಅಂಗವಾದ ಪತ್ರಿಕಾಂಗವೂ ಕೈ ಜೋಡಿಸಿ ಸಹಕರಿಸಬೇಕು ಎಂದು ಕೋರಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪತ್ರಕರ್ತರಿಗೆ ಮಾನವೀಯ ಅಂತಃಕರಣ ಇರಬೇಕು. ಆಗ ಮಾನವ ಕಳ್ಳ ಸಾಗಣೆ, ಜೀತ ಪದ್ಧತಿ, ಬಾಲಕಾರ್ಮಿಕ ಪದ್ಧತಿ ಸಮಸ್ಯೆಗೆ ಧ್ವನಿಯಾಗಬಹುದು ಎಂದರು.
ಪ್ರತಿ ಮನುಷ್ಯನಿಗೆ ಬದುಕು ಹಕ್ಕು ಇದೆ. ಇದು ಮಾನವ ಹಕ್ಕು ಕೂಡ. ಸ್ವಾಭಿಮಾನದಿಂದ ಆತ್ಮಾಭಿಮಾನದಿಂದ ಬದುಕು ಹಕ್ಕು ಕೂಡ. ನಮ್ಮಿಂದ ಬೇರೆಯವರಿಗೆ, ಬೇರೆಯವರಿಂದ ನಮಗೆ ತೊಂದರೆ ಆಗಬಾರದು ಎಂಬುದೇ ಕಾನೂನು. ಕಾನೂನುಗಳು ಎಷ್ಟರ ಮಟ್ಟಿಗೆ ಜಾರಿ ಆಗುತ್ತಿವೆ ಎಂಬುದು ಕೂಡ ಮುಖ್ಯ. ಎಷ್ಟೋ ಇಲಾಖೆಗಳಲ್ಲಿ ಹೊರಗುತ್ತಿಗೆ ಪದ್ಧತಿ ಇದೆ. ಅವರಿಗೆ ಸರ್ಕಾರಿ ಇಲಾಖೆಗಳಲ್ಲೇ ಕನಿಷ್ಠ ವೇತನ ನೀಡುತ್ತಿಲ್ಲ. ಪಿಎಫ್, ಇಎಸ್ಐ ಸೇರಿದಂತೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ವಿಷಾದಿಸಿದರು.
ಹೊಟ್ಟೆ ತುಂಬಲು ಬೇಕಾದ ವೇತನವನ್ನಾ ದರೂ ಕೊಡಬೇಕು. ಅವರ ಹೆಸರಿನಲ್ಲಿ ಯಾರೋ ಗುತ್ತಿಗೆದಾರ ಬೆಳೆಯುತ್ತಿದ್ದಾನೆ. ನಮ್ಮ ಇಲಾಖೆಗಳು, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕೈಗಾರಿಕಾ ಇಲಾಖೆ ಏನು ಮಾಡುತ್ತಿವೆ ಎಂದು ಪ್ರಶ್ನಿಸಿದರು. ಕಣ್ಣಿಗೆ ಕಾಣುವಂತೆ ಜೀತ ಪದ್ಧತಿ ಇದೆ, ಮಾನವ ಕಳ್ಳಸಾಗಣೆ ನಡೆಯುತ್ತಿದೆ. ಬಾಲಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಇವರ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಬೇಕಿದೆ. ಜೊತೆಗೆ ಈ ಬಗ್ಗೆ ಸಮಾಜದಲ್ಲಿ ಚರ್ಚೆ ನಡೆಯಬೇಕಿದೆ. ಇಲಾಖೆಗಳು ನಿಗಾ ಇಡಬೇಕು ಎಂದರು.
ಕ್ರಷರ್ಗಳಲ್ಲಿ ನೂರಾರು ಮಂದಿ ದುಡಿಯುತ್ತಿದ್ದಾರೆ. ಅಲ್ಲಿ ಪದೇಪದೇ ಬಂಡೆ ಬಿದ್ದು ಕಾರ್ಮಿಕರು ಮೃತ ಪಡುತ್ತಿದ್ದಾರೆ. ಸತ್ತ ಸಂದರ್ಭದಲ್ಲೂ ಆತನ ಕುಟುಂಬದವರಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ಇಂಥ ಪ್ರಕರಣಗಳು ಜೀತ ಪದ್ಧತಿ, ಮಾನವ ಕಳ್ಳಸಾಗಣೆ ಆಗುವುದಿಲ್ಲವೇ ಎಂಬುದರ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಗಮನ ಸಂಸ್ಥೆಯ ಶಾಂತಮ್ಮ, ಮುಕ್ತಿ ಒಕ್ಕೂಟದ ಸಂಚಾಲಕಿ ಬೃಂದಾ ಅಡಿಗೆ, ಕಾತ್ಯಾಯಿನಿ ಚಾಮರಾಜ್ ಮಾತನಾಡಿದರು. ಸಂವಾದ ಕೂಡ ನಡೆಯಿತು. ಜೀತ ಪದ್ಧತಿಯಿಂದ ಪಾರಾಗಿ ಬಂದು ಬದುಕು ಕಟ್ಟಿಕೊಂಡಿರುವ ಮಹಿಳೆಯೊಬ್ಬರು ತಮ್ಮ ಅನುಭವ ಹಂಚಿಕೊಂಡರು.
ಶಾಂತ ಜೀವ ಜ್ಯೋತಿ ನಿರ್ದೇಶಕ ಪಿ.ಷಣ್ಮುಗ ಸುಂದರಮ್, ಕಾರ್ಯದರ್ಶಿ ಆದರ್ಶ, ಜಿಲ್ಲಾ ಸಂಯೋಜಕ ಮಂಜುನಾಥ್ ಎಸ್. ಹಾಗೂ ಪತ್ರಕರ್ತರು ಇದ್ದರು.
ಚಿತ್ರ ; ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮುಕ್ತಿ ಒಕ್ಕೂಟ ಕರ್ನಾಟಕ, ಶಾಂತ ಜೀವ ಜ್ಯೋತಿ ಬೆಂಗಳೂರು ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಬುಧವಾರ ನಡೆದ ಮಾನವ ಕಳ್ಳ ಸಾಗಣೆ ನಿರ್ಮೂಲನೆ ಮತ್ತು ಜೀತ ಪದ್ಧತಿ ತಡೆಗಟ್ಟುವಲ್ಲಿ ಪತ್ರಕರ್ತರರ ಪಾತ್ರ ಕುರಿತ ಕಾರ್ಯಾಗಾರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ನಟೇಶ್ ಆರ್. ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್