ಕೋಲಾರ, ೨೧ ಸೆಪ್ಟೆಂಬರ್ (ಹಿ.ಸ) :
ಆ್ಯಂಕರ್ : ರಾಜ್ಯದಲ್ಲಿ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಗಣತಿಯ ನಮೂನೆಯ ಕ್ರಮ ಸಂಖ್ಯೆ ೯ ಕಾಲಂನ ಜಾತಿಯಲ್ಲಿ ಗೊಲ್ಲ ಮತ್ತು ಉಪಜಾತಿಯಲ್ಲಿ ಶಾಲಾ ದಾಖಲೆಗಳಲ್ಲಿ ಇದ್ದಂತೆ ಬರೆಸುವ ಮೂಲಕ ಸಮುದಾಯವು ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದು ರಾಜ್ಯ ಯಾದವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಜಿಲ್ಲಾ ಪ್ರತಿನಿಧಿ ಕೆ.ವಿ ಶ್ರೀನಿವಾಸ್ ಯಾದವ್ ಮನವಿ ಮಾಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಜಾತಿಯ ಕಾಲಂನಲ್ಲಿ ಗೊಲ್ಲ ಬರೆದು ಉಪಜಾತಿಯಲ್ಲಿ ಪ್ರತ್ಯೇಕವಾದ ವಿವರವನ್ನು ನಮೂದಿಸಬಾರದು ಗೊಲ್ಲ ಜಾತಿಯಲ್ಲಿ ಅನೇಕ ಉಪಜಾತಿಗಳನ್ನು ನಮೂದಿಸಲಾಗಿರುತ್ತದೆ. ಆದರೆ, ಮುಖ್ಯವಾದ ಜಾತಿ ಯಾವುದೆಂದು ಮನಗಂಡು, ಗೊಲ್ಲ ಎಂಬ ಜಾತಿಯನ್ನು ಮಾತ್ರ ಬರೆಯಿಸಬೇಕಿದೆ ಪ್ರತ್ಯೇಕ ಉಪಜಾತಿಗಳನ್ನು ಜಾತಿ ಕಾಲಂನಲ್ಲಿ ನಮೂದಿಸಿದಾಗ ನಮ್ಮ ಜಾತಿಯ ಸಂಖ್ಯೆ ಕಡಿಮೆಯಾಗಿ, ಮೀಸಲಾತಿ ಪ್ರಮಾಣ ಕಡಿಮೆಯಾಗುತ್ತದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗುವುದಿಲ್ಲ ಅದರಿಂದಾಗಿ ಜಾತಿಯಲ್ಲಿ ಗೊಲ್ಲ ಮಾತ್ರ ಬರೆಸಬೇಕು ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆ.೨೨ ರಿಂದ ಅ.೭ ರವರೆಗೆ ಜಾತಿ ಗಣತಿ ಕೈಗೊಳ್ಳಲಾಗಿದೆ ಅಧಿಕಾರಿಗಳು ಮನೆ ಮನೆ ಭೇಟಿ ನೀಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಗೊಲ್ಲ ಎಂದು ಬರೆಸುವುದರಿಂದ ರಾಜ್ಯ ಮಟ್ಟದಲ್ಲಿ ನಮ್ಮ ಜನಾಂಗದ ಜನಸಂಖ್ಯೆಯ ನಿಖರವಾದ ಮಾಹಿತಿ ಗೊತ್ತಾಗುತ್ತದೆ. ಇದರಿಂದಾಗಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಉಪಯೋಗಿಸಲು ಅನುಕೂಲವಾಗುತ್ತದೆ ಎಂದು ಶ್ರೀನಿವಾಸ್ ಯಾದವ್ ಮನವಿ ಮಾಡಿದರು.
ಚಿತ್ರ : ಶ್ರೀನಿವಾಸ್ ಯಾದವ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್