ಕೋಲಾರ,೨೦ಸೆಪ್ಟೆಂಬರ್ (ಹಿ.ಸ.)ಆಂಕರ್ : ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುತ್ತಾರೆ, ಉತ್ತಮ ಪ್ರಜೆಗಳು ಉತ್ತಮ ರಾಷ್ಟ್ರವನ್ನು ನಿರ್ಮಿಸುತ್ತಾರೆ ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ಬದುಕಿನ ಶಿಕ್ಷಣವನ್ನು ನೀಡಿ ಎಂದು ರೋಟರಿ ಜಿಲ್ಲೆ ಕಲ್ಪವೃಕ್ಷ ಯೋಜನೆ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಅಭಿಪ್ರಾಯಪಟ್ಟರು.
ಕತ್ತಲೆಯಿಂದ ಜ್ಞಾನದ ಬೆಳಕಿನ ಕಡೆಗೆ ಸಾಗಲು ಶಿಕ್ಷಣವು ಮುಖ್ಯವಾಗಿದೆ, ಅದು ವ್ಯಕ್ತಿಯನ್ನು ಅಜ್ಞಾನ, ಭಯ ಮತ್ತು ಗೊಂದಲಗಳಿಂದ ಮುಕ್ತಗೊಳಿಸಿ ಪ್ರಬುದ್ಧತೆ ಮತ್ತು ತಿಳುವಳಿಕೆಯ ಮಾರ್ಗವನ್ನು ತೋರಿಸುತ್ತದೆ. ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡುವ ಜೊತೆಗೆ ಪಠ್ಯೇತರವಾಗಿ ದೇಶದಲ್ಲಿ ನಡೆಯುತ್ತಿರುವ ಸಾಮಾಜಿಕ, ರಾಜಕೀಯ, ಧರ್ಮಗಳಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಮೂಲಕ ಬದುಕಿನ ಶಿಕ್ಷಣವನ್ನು ನೀಡಿ ಎಂದರು. ಭವ್ಯ ಭಾರತ ಹಾಗೂ ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಶ್ರಮ, ತ್ಯಾಗ ದೊಡ್ಡದು ಎಂದು ಶ್ಲಾಘಿಸಿದರು.
ರೋಟರಿ ಮೂಲಶಿಕ್ಷಣ ಮತ್ತು ಸಾಕ್ಷರತೆ ನಿರ್ದೇಶಕಿ ಲಕ್ಷ್ಮೀ ಶಾಸ್ತ್ರಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾನು ಮೂಲತಃ ಕೋಲಾರ ಜಿಲ್ಲೆಯವರು, ಕೋಲಾರಿಗೆ ಬಂದು ಉತ್ತಮ ಶಿಕ್ಷಕರಿಗೆ ಅವಾರ್ಡ್ ನೀಡುತ್ತಿರುವುದು ತುಂಬಾ ಸಂತೋಷವಾಗುತ್ತದೆ ಎಂದರು. ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಕಡೆಗೆ ಸಾಗಲು ಗುರುವಿನ ಪಾತ್ರ ಮಹತ್ವವಾದದ್ದು, ಶಿಕ್ಷಕರ ಪ್ರಾಮುಖ್ಯತೆಯನ್ನು ಗುರುತಿಸಿ ೨೦೧೪ರಿಂದ ಅತ್ಯುತ್ತಮ ಶಿಕ್ಷಕರುಗಳನ್ನು ಆಯ್ಕೆ ಮಾಡಿ ನೇಷನ್ ಬಿಲ್ಡರ್ ಅವಾರ್ಡ್ ನೀಡಿ ಸನ್ಮಾನಿಸಿಕೊಂಡು ಬರುತ್ತಿದ್ದು, ಶಿಕ್ಷಕರುಗಳನ್ನು ಗುರುತಿಸಿ ಸನ್ಮಾನ ಮಾಡಿದರೆ ಇಡೀ ಸಮಾಜವನ್ನು ಗೌರವಿಸಿದಂತೆ ಎಂದು ತಿಳಿಸಿದರು.
ರೋಟರಿ ಶಿಕ್ಷಕರ ಅವಾರ್ಡ್ ಕಮಿಟಿ ಅಧ್ಯಕ್ಷ ಸಿ.ಆರ್.ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಅಂಕಗಳಿಸಿ ಪಾಸಾದರೇ ಸಾಲದು ಬದುಕಿನಲ್ಲಿ ಪಾಸಾಗುವಂತೆ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಗೆ ಶಿಕ್ಷಕರ ಮಾರ್ಗದರ್ಶನ ಅವಶ್ಯಕ. ಗುರುವಿಲ್ಲದೇ ಗುರಿ ಮುಟ್ಟಲು ಸಾಧ್ಯವಿಲ್ಲ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಭಾವನಾತ್ಮಕ ಸಂಬಂಧವಿರಬೇಕು. ಇದರಿಂದ ವಿದ್ಯಾರ್ಥಿಗಳ ಕಲಿಕಾ ಶಕ್ತಿಯು ಹೆಚ್ಚುತ್ತದೆ ಎಂದು ತಾವು ಶಿಕ್ಷಕನಾಗಿ, ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಬಡ ವೈದ್ಯಕೀಯ ವಿಧ್ಯಾರ್ಥಿಗೆ ಧನಸಹಾಯ ಹಾಗೂ ಎಸ್ಎಸ್ಎಲ್ಸಿ ಮಕ್ಕಳಿಗೆ ಪ್ರಶ್ನೆ ಕೋಠಿ ೨೦೨೫-೨೬ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಆಯ್ಕೆಯಾದ ೬೦ ಅತ್ಯುತ್ತಮ ಶಿಕ್ಷಕರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ ೩೧೯೧ ಜೋನ್ ಪದಾಧಿಕಾರಿಗಳಾದ ರೋಟೇರಿಯನ್ ಹೆಚ್.ರಾಮಚಂದ್ರಪ್ಪ, ಎಲ್.ರಾಮಕೃಷ್ಣಪ್ಪ, ಡಾ.ರಾಜೇಂದ್ರ ಮೌನಿ, ಎಸ್.ಸುಧಾಕರ್, ಬಿ.ಶಿವಕುಮಾರ್, ಸ್ಕೌಟ್ ಬಾಬು, ರವೀಂದ್ರನಾಥ್ ನಾರಾಯಣ್, ಡಾ.ಮುರಳಿಧರ್, ನಾಗನಂದ್ ಕೆಂಪರಾಜ್, ರೋಟರಿ ಕಾರಿಡಾರ್ ಜೋನ್ ಅಧ್ಯಕ್ಷರಾದ ಎಸ್.ಎಂ.ಚಂದ್ರಶೇಖರ್, ಕೆ.ವಿ.ಸುಬ್ರಮಣಿ, ಎಂ.ಶಂಕರಪ್ಪ, ಕೆ.ಹೆಚ್.ನಾಗರಾಜ್, ಶ್ರೀನಿವಾಸ ರೆಡ್ಡಿ, ಕೆ.ಬಾಬು, ಶಿಲ್ಪ, ಚೌಡಪ್ಪ ಹಾಗೂ
ಪದಾಧಿಕಾರಿಗಳಾದ ಕೆ.ಎನ್.ಎನ್ ಪ್ರಕಾಶ್, ವೆಂಕಟರಮಣಪ್ಪ, ಶ್ರೀನಾಥ್, ರಾಜ್ಕುಮಾರ್, ಬಿ.ಕೆ.ದೇವರಾಜ್, ರಮೇಶ್ ಕುಮಾರ್, ಆರ್.ಅಶೋಕ್ ಕುಮಾರ್, ಸೋಮಶೇಖರ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್