ಕೊಪ್ಪಳ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಜ್ಞಾನದ ಕತ್ತಲಿನಿಂದ ಜ್ಞಾನದ ಬೆಳಕು ನೀಡುವವರೇ ಗುರುಗಳು. ನಮ್ಮ ಭವಿಷ್ಯವನು ರೂಪಿಸಿದ ಗುರುಗಳಿಗೆ ಒಂದು ಕಡೆಸೇರಿಸಬೇಕು ಗೌರವ ಸಮರ್ಪಿಸಬೇಕು ವಂದನೆಗಳನ್ನು ಸಲ್ಲಿಸಬೇಕು ಎನ್ನುವ ಭಾವ ಅತ್ಯಂತ ಸರಳ ಸಜ್ಜನಿಕೆಯ ಸಾತ್ವಿಕ ಜನರಲ್ಲಿ ಮಾತ್ರ ಬರಲು ಸಾಧ್ಯ ಎಂದು ಶ್ರೀ ಪ.ಪೂ ಶಿವರಾಮಕೃಷ್ಣನಂದ ಭಾರತಿ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಸಮೀಪದ ಭಾಗ್ಯನಗರ ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ 1987-88 ರಿಂದ 1997- 98 ನೇ ಸಾಲಿನ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೇವೆ. ಹಾಗಾಗಿ ಈ ಸಮಾಜದಿಂದ ಪಡೆದದ್ದನ್ನು ನಾವು ಮತ್ತೆ ಸಮಾಜಕ್ಕೆ ವಾಪಸ್ ನೀಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ತೀರಿಸಲೇಬೇಕು. ಸುಮಾರು 30 ವರ್ಷ ನಂತರವೂ ವಿದ್ಯೆ ಕಲಿಸಿದ ಗುರುವಿನ ಮಹತ್ವ ಅರಿತು, ಅವರಿಗೆ ವಂದಿಸುವ ಕಾರ್ಯ ಮಾದರಿಯಾಗಿದೆ. ಉಜ್ವಲ ಜೀವನ ನಿರ್ಮಿಸಬೇಕಾದರೆ ಗುರುವಿನ ಉತ್ತಮ ಮಾರ್ಗದರ್ಶನ ಅತ್ಯವಶ್ಯಕವಾಗಿದೆ’ ಎಂದರು.
ನಿವೃತ್ತ ಹಿರಿಯ ಶಿಕ್ಷಕ ನಿಂಗಪ್ಪ ಮಾತನಾಡಿ, ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಂತಹ ಸುಂದರ ಕ್ಷಣಗಳಿಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ’ ಎಂದರು.
ಹಳೇ ವಿದ್ಯಾರ್ಥಿಗಳ ಶಿಕ್ಷಕಿ ಶಾರದಾ ಮಾತನಾಡಿ, ನಮ್ಮ ವೃತ್ತಿ ಜೀವನದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದೊಂದೇ ನಮಗೆ ಗುರಿಯಾಗಿತ್ತು. ಯಾವ ಮಕ್ಕಳು ಕಲಿಕೆಯಲ್ಲಿ ಮುಂದಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೇಗೆ ಪ್ರಗತಿ ಹೊಂದಿಸಬೇಕು. ಅವರಲ್ಲಿರುವ ಕೌಶಲ್ಯಗಳನ್ನು ಮುಖ್ಯವಾಹಿನಿಗೆ ಹೇಗೆ ತರಬೇಕು. ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಬೇಕು ಎನ್ನುವುದೊಂದೆ ಆಸೆಯಾಗಿರುತ್ತದೆ. ಭವಿಷ್ಯ ರೂಪಿಸಿಕೊಂಡು ಕೆಲವರು ಉತ್ತಮ ಸತ್ಪ್ರಜೆಗಳಾಗುತ್ತಾರೆ. ಕೆಲವರು ಕೃಷಿಕರು, ವಕೀಲರು, ವ್ಯವಹಾರಿಕರು, ಉಪಾದ್ಯಾಯರು, ಸರಕಾರಿ ಇಲಾಖೆಯಲ್ಲಿ ನೌಕರರು ಹೀಗೆ ಹಲವಾರು ಕ್ಷೇತ್ರದಲ್ಲಿ ಸೇರಿಹೋಗಿರುತ್ತಾರೆ. ಅವರನ್ನೆಲ್ಲರನ್ನು ಒಗ್ಗೂಡಿಸಿಕೊಂಡು ನಿಮ್ಮ ಶಾಲಾ ದಿನಗಳನ್ನು ಮೆಲುಕು ಹಾಕುವಂತಹ ಸುಂದರ ವೇದಿಕೆಯನ್ನು ಸೃಜಿಸಿ ಗುರುಗಳಿಗೆ ಗೌರವಿಸುತ್ತಿರುವುದು ನಿಜಕ್ಕೂ ಪೂರ್ವಜನ್ಮದ ಪುಣ್ಯವೆಂದು ಭಾವಿಸುತ್ತೇವೆ. ಶಿಷ್ಯರು ಎಷ್ಟೇ ದೊಡ್ಡವರಾದರೂ ನಮಗೆ ಅವರು ಮಕ್ಕಳಂತೆಯೇ ಭ್ರಾಸವಾಗುತ್ತದೆ. ಅದೇ ಗುರುಶಿಷ್ಯರ ಸಂಬಂಧ ಈ ಸಂಬಂಧ ಹೀಗೆ ಇರಲಿ, ಪ್ರತಿಯೊಬ್ಬರು ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕು. ಭವಿಷ್ಯದಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದು ಹೇಳಿದರು.
ಹಳೆಯ ವಿದ್ಯಾರ್ಥಿಗಳು 30 ವರ್ಷಗಳ ಹಿಂದಿನ ನೆನಪನ್ನು ಮೆಲುಕು ಹಾಕಿದರು. ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸತ್ಕರಿಸಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್