ಬಳ್ಳಾರಿ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಶಾಸಕ, ಮಾಜಿ ಸಚಿವ ಬಿ. ನಾಗೇಂದ್ರ ಅವರ ಅಭಿಮಾನಿಗಳು ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ತೊಡಗಿರುವಾಗ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣದ ತನಿಖೆಯ ಮುಂದುವರೆದ ಭಾಗವಾಗಿ ಸಿಬಿಐನ 10 ಅಧಿಕಾರಿಗಳು ಬಳ್ಳಾರಿ ಮಹಾನಗರ ಪಾಲಿಕೆಯ ಬಿಜೆಪಿಯ ಕಾರ್ಪೊರೇಟರ್, ಬಿ. ನಾಗೇಂದ್ರ ಅವರ ಆಪ್ತ ಎನ್. ಗೋವಿಂದರಾಜುಲು ಅವರ ಮನೆಯ ಮೇಲೆ ಸೋಮವಾರ ದಾಳಿ ನಡೆಸಿ, ತನಿಖೆ ನಡೆಸಿದ್ದಾರೆ.
ಬಿ. ನಾಗೇಂದ್ರ ಮತ್ತು ಎನ್. ಗೋವಿಂದರಾಜುಲು ಅವರು ಆಪ್ತರು. ಬಿ. ನಾಗೇಂದ್ರ ಅವರು ಬೆಂಗಳೂರಿನ ಎಂಆರ್‍ವಿ ಲೇಔಟ್‍ನಲ್ಲಿ ಎನ್. ಗೋವಿಂದರಾಜುಲು ಅವರ ಮಾಲೀಕತ್ವದಲ್ಲಿದ್ದ ಗೆಸ್ಟ್‍ಹೌಸ್ ಅನ್ನು ಕರೀದಿ ಮಾಡಿದ್ದರು. ಈ ಕರೀದಿ ಪ್ರಕ್ರಿಯೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್ ಅವರ ಖಾತೆಯಿಂದ ಎನ್. ಗೋವಿಂದರಾಜುಲು ಅವರ ಖಾತೆಗೆ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಆಗಿರುವುದನ್ನು ಸಿಬಿಐ ಅಧಿಕಾರಿಗಳು ಪತ್ತೆ ಮಾಡಿದ್ದರು.
ಪ್ರಕರಣದ ಕುರಿತು ಎನ್. ಗೋವಿಂದರಾಜುಲು ಅವರನ್ನು ವಿಚಾರಣೆ ನಡೆಸಿದ್ದು, ಹೆಚ್ಚಿನ ತನಿಖೆಗಾಗಿ ಸಿಬಿಐನ 10 ಅಧಿಕಾರಿಗಳ ತಂಡವು ಸೋಮವಾರ ನಸುಕಿನ 6 ಗಂಟೆಯಿಂದ ಎನ್. ಗೋವಿಂದರಾಜುಲು ಅವರ ಮನೆಯಲ್ಲಿ ತನಿಖೆ ಮತ್ತು ವಿಚಾರಣೆ ನಡೆಸಿದೆ. ಈ ತನಿಖೆಯು ಸಂಜೆ 7 ಗಂಟೆ ಆದರೂ ಮುಂದುವರೆದಿತ್ತು.
ಎನ್. ಗೋವಿಂದರಾಜುಲು ಅವರ ತಂದೆ ಎನ್. ಕುಮಾರಸ್ವಾಮಿ (ಎಗ್ ಕುಮಾರಸ್ವಾಮಿ) ಅವರು ಕೋಳಿ ತತ್ತಿ ಮಾರಾಟದಿಂದ ಪ್ರಸಿದ್ಧಿ ಪಡೆದಿದ್ದು, ಸರ್ವ ಪಕ್ಷಗಳ ಆಪ್ತರು. ತಂದೆ - ಮಗ ಇಬ್ಬರೂ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ತೊಡಗಿದ್ದು, ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸಿದ್ದಾರೆ ಎನ್ನಲಾಗಿದೆ.
ಹುಟ್ಟುಹಬ್ಬದ ಆಚರಣೆ
ಶಾಸಕ ಬಿ. ನಾಗೇಂದ್ರ ಅವರ ಅಭಿಮಾನಿಗಳು ಮತ್ತು ಆಪ್ತರು ತಮ್ಮ ಮುಖಂಡರ ಹುಟ್ಟುಹಬ್ಬದ ಅಂಗವಾಗಿ ವೃದ್ಧಾಶ್ರಮದಲ್ಲಿ ಅನ್ನದಾನ, ವಸ್ತ್ರದಾನ, ರಕ್ತದಾನ ಮತ್ತು ದೇವಸ್ಥಾನಗಳಲ್ಲಿ ವಿಶೇಷ ಪೂಜೆ - ಪ್ರಾರ್ಥನೆ ಸಲ್ಲಿಸಿವ ಮೂಲಕ ಶ್ರೇಯಸ್ಸನ್ನು ಕೋರಿದ್ದಾರೆ.
ಶಾಸಕ ಬಿ ನಾಗೇಂದ್ರ ಅವರ ಗೃಹ ಕಚೇರಿಯಲ್ಲಿ ಚಂಡಿಕಾ ಹೋಮ, ಹವನ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದಿದ್ದು, ಬಳ್ಳಾರಿ ನಗರ ಶಾಸಕ ಭರತರೆಡ್ಡಿ, ಬಗರ್ ಹುಕುಂ ಸಮಿತಿ ಅಧ್ಯಕ್ಷ ತಿಮ್ಮನಗೌಡ, ಬೆಣಕಲ್ಲು ಬಸವರಾಜಗೌಡ, ಮೀನಳ್ಳಿ, ಚಂದ್ರಶೇಖರ್, ಸಂಗನಕಲ್ಲು ವಿಜಯ್ ಕುಮಾರ್, ಪೇರಂ ವಿಕ್ಕಿ, ಜನತಾಬಜಾರ್ ನಿರ್ದೇಶಕರಾದ ವೆಂಕಟೇಶ ಹೆಗಡೆ, ಅಲ್ಲೀಪುರ ವೆಂಕಟಸ್ವಾಮಿ, ಚಾನಾಳ್ ಶೇಖರ್, ಮಂಜುಳಾ ನೇಕಾರ್ ಸೇರಿ ಅನೇಕರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್