ಕೊಪ್ಪಳ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಅತ್ಯಂತ ಮಹತ್ವವಿದ್ದು, ಪ್ರತಿಯೊಬ್ಬರು ಹೆಚ್ಚಿನ ಪ್ರಮಾಣದಲ್ಲಿ ಶೇ.100 ರಷ್ಟು ಮತದಾನ ಮಾಡಿದಾಗ ನಾವು ಭಾರತ ಸಂವಿಧಾನಕ್ಕೆ ಗೌರವ ಕೊಟ್ಟಂತಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಹೇಳಿದ್ದಾರೆ.
ಅವರು ಸೋಮವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ದಿನಾಚರಣೆಯನ್ನು ಪ್ರತಿ ವರ್ಷ ಒಂದೊಂದು ಶೀರ್ಷಿಕೆಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ``ನನ್ನ ಮತ ನನ್ನ ಹಕ್ಕು'' ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನವು ಬಹಳ ವಿಶೇಷವಾದ ದಿನವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಬಹಳ ಜವಾಬ್ದಾರಿಯುತವಾಗಿದ್ದು, ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು ಮತದಾನಕ್ಕೆ ದೊಡ್ಡ ಶಕ್ತಿಯನ್ನು ನೀಡಿದ್ದರು.
ನಮ್ಮ ದೇಶದಲ್ಲಿ ಮೊದಲು ರಾಜ ಮಹರಾಜರ ಕಾಲದಲ್ಲಿ ಕೆಲವೇ ಕೆಲವು ಜನರಿಗೆ ಮತದಾನ ಸೀಮಿತವಾದಂತಹ ವ್ಯವಸ್ಥೆಗಳಿದ್ದವು. ಭಾರತ ಸಂವಿಧಾನ ರಚನೆಯಾದ ನಂತರ ನಮ್ಮ ದೇಶದಲ್ಲಿನ ಎಲ್ಲಾ ರಾಜ್ಯಗಳಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಎಲ್ಲರಿಗೂ ಮತದಾನದ ಹಕ್ಕು ನೀಡಲಾಯಿತು. ವಿಶೇಷವಾಗಿ ಮಹಿಳೆಯರಿಗೂ ಹಕ್ಕನ್ನು ಒದಗಿಸಿ ದೇಶಕ್ಕೆ ಅಪಾರ ಕೊಡುಗೆ ಕೊಟ್ಟಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಪ್ರತಿಯೊಂದು ಸಮಾಜದವರು ನೆನಪಿಸಿಕೊಳ್ಳಬೇಕು. ನಾನು ಸಹ ಈ ರಾಜ್ಯದ ಮಂತ್ರಿಯಾಗಿ, ಶಾಸಕನಾಗಿರುವುದಕ್ಕೆ ಬಾಬಾ ಸಾಹೇಬರು ಕೊಟ್ಟ ಕೊಡುಗೆಯಾಗಿದೆ ಎಂದರು.
ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಸುಂದರ ಮತ್ತು ಅದ್ಬುತವಾಗಿದೆ. ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣೆಗಳಿಗೆ ಅವಕಾಶವಿದೆ. ಆದರೆ, ಇಂದು ವೈಯಕ್ತಿಕವಾಗಿ ಟೀಕೆ ಟಿಪ್ಪಣೆಗಳಾಗುತ್ತಿವೆ. ಅರ್ಥಗರ್ಭಿತ ಮತ್ತು ಸಾಮರಸ್ಯವಾದಂತಹ ಟೀಕೆ ಟಿಪ್ಪಣೆಗಳು ಆಗಬೇಕಿವೆ. ದೇಶದಲ್ಲಿ ಜಾತಿ, ಧರ್ಮಗಳ ಬಗ್ಗೆ ಚರ್ಚೆಯಾಗದೇ ಅಭಿವೃದ್ಧಿಗಳ ಬಗ್ಗೆ ಚರ್ಚೆಗಳಾಗಬೇಕು. ದೇಶದಲ್ಲಿ ಈ ಹಿಂದೆ 25 ವರ್ಷ ಇದ್ದವರಿಗೆ ಮಾತ್ರ ಮತದಾನ ಹಕ್ಕಿತ್ತು. ಆದರೆ, ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ದಿ. ರಾಜೀವ್ ಗಾಂಧಿ ಅವರು ಈ ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡುವುದುರ ಜೊತೆಗೆ ದೇಶದ ಯುವಕರಿಗೆ ಮತದಾನದ ಹಕ್ಕನ್ನು 18ನೇ ವರ್ಷಕ್ಕೆ ಇಳಿಕೆ ಮಾಡಿ, ಯುವಜನತೆ ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ಮತದಾನದ ಹಕ್ಕು ಎಲ್ಲರ ಜವಾಬ್ದಾರಿಯಾಗಿದ್ದು, 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ತಮ್ಮ ಮತ ಚಲಾಯಿಸಬೇಕು. ಸಂವಿಧಾನ, ಪ್ರಜಾಪ್ರಭುತ್ವದ ಅರಿವು ಎಲ್ಲರಿಗೂ ಅತ್ಯವಶ್ಯಕವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಪ್ರತಿವರ್ಷ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಗುತ್ತಿದೆ ಎಂದು ಹೇಳಿದರು.
ರಾ.ಬ.ಕೊ.ವಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಪ್ರಜಾಪ್ರಭುತ್ವ ಈ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಸಿಕ್ಕಿರುವ ಅಧಿಕಾರ ಎಂದರೆ ತಪ್ಪಾಗಲಾರದು. ಡಾ.ಬಿ.ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಈ ದೇಶಕ್ಕೆ ಕೊಟ್ಟಿರುವ ಒಂದು ಮಹತ್ವದ ಕೊಡುಗೆಯಾಗಿದೆ. ನಮ್ಮ ದೇಶದಲ್ಲಿ ಸಾವಿರಾರು ಜಾತಿ-ಜನಾಂಗಗಳು ಇದ್ದರೂ ಪ್ರತಿಯೊಬ್ಬರು ಸಹೋದರ ಭ್ರಾತೃತ್ವದಿಂದ ಬಾಳುತ್ತಿದ್ದಾರೆ. ನಮ್ಮ ದೇಶದಲ್ಲಿ ಫ್ರೇಂಚರು, ಡಚ್ಚರು, ಬ್ರಿಟೀಷರು ಸೇರಿದಂತೆ ಅನೇಕರು ಆಳಿ, ನಮ್ಮ ದೇಶದಲ್ಲಿನ ವಿಪರೀತ ಸಂಪತ್ತನ್ನು ಲೂಟಿ ಮಾಡಿದರು. ಆದರೆ, ಅವರಿಂದ ನಮ್ಮ ಸಂಸ್ಕøತಿ ಮತ್ತು ಸಾಹಿತ್ಯವನ್ನು ಲೂಟಿ ಮಾಡಲು ಸಾಧ್ಯವಾಗಲಿಲ್ಲ. ಅಂತಹ ಬಹುತ್ವದ ಸಂಸ್ಕøತಿ ಮತ್ತು ಸಾಹಿತ್ಯ ನಮ್ಮ ದೇಶದ್ದಾಗಿದೆ ಎಂದು ನಾವು ಹೆಮ್ಮೆ ಪಡಬೇಕು ಎಂದರು.
`ನಮ್ಮ ಮತ ನಮ್ಮ ಹಕ್ಕು' ಎಂಬುವುದು ನಮ್ಮೆಲ್ಲರ ಬಹು ದೊಡ್ಡ ಜವಾಬ್ದಾರಿಯಾಗಿದೆ. ದೇಶದ ಆರ್ಥಿಕತೆ ಮತ್ತು ಏಳ್ಗೆಯನ್ನು ನಾವು ಉತ್ತಮವಾಗಿ ಕಾಣಬೇಕು ಎಂದರೆ, ನಮಗೆ ಡಾ.ಬಿ.ಆರ್ ಅಂಬೇಡ್ಕರ್ ಅವರು ಕೊಟ್ಟಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಚಲಾಯಿಸಬೇಕಾಗುತ್ತದೆ. ದೇಶ ಮತ್ತು ರಾಜ್ಯದ ಬೆಳವಣಿಗೆಯನ್ನು ಮತದಾನದ ಹಕ್ಕಿನ ಮೂಲಕ ಬದಲಾವಣೆ ಮಾಡಲು ಸಾಧ್ಯ. ದೇಶದಲ್ಲಿ ಯಾವುದೇ ಚುನಾವಣೆ ನಡೆದರು ಹೆಚ್ಚು ಜನರು ಮತ ಚಲಾಯಿಸುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ 100ಕ್ಕೆ 100 ರಷ್ಟು ಮತದಾನ ಮಾಡಲು ಎಲ್ಲರೂ ಪ್ರಯತ್ನಿಸಬೇಕು. ಒಂದೊಂದು ಮತ ಕೂಡಾ ಬಹಳ ಮಹತ್ವವನ್ನು ಹೊಂದಿದೆ ಹಾಗಾಗಿ ಪ್ರತಿಯೊಬ್ಬ ಪ್ರಜೆಯೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಾತನಾಡಿ, ಭಾರತವು ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಜನರಿಂದ ಜನರಿಗಾಗಿ ಜನರೆ ನಡೆಸುವ ಸರ್ಕಾರವಾಗಿದೆ. ಈ ಸಂದರ್ಭದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಸ್ಮರಿಸಬೇಕಿದೆ. ಅಂಬೇಡ್ಕರ್ ಸಂವಿಧಾನದ ಆಶಯವನ್ನು ನಾವೆಲ್ಲರೂ ಪಾಲನೆ ಮಾಡಬೇಕಿದೆ. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕಿದೆ. ಹಳ್ಳಿಗಳಲ್ಲಿ ಹೆಚ್ಚಿನ ಮತದಾನವಾದರೆ ನಗರ ಪ್ರದೇಶಗಳಲ್ಲಿ ಪ್ರಜ್ಞಾವಂತ ಜನರೇ ಕಡಿಮೆ ಮತದಾನ ಮಾಡುತ್ತಾರೆ. ಈ ಹಿಂದೆ ನಡೆದ ಚುನಾವಣೆಗಳಲ್ಲಿ ಶೇ. 60 ಹಾಗೂ 70 ಪ್ರತಿಶತ ಮಾತ್ರ ಮತದಾನವಾಗಿದೆ ಹಾಗಾಗಿ ಎಲ್ಲರೂ ಶೇ. 100 ಪ್ರತಿಶತ ಮತ ಚಲಾಯಿಸಬೇಕೆಂದು ಹೇಳಿದರು.
ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಅವರು ಮಾತನಾಡಿ, ಭಾರತದಲ್ಲಿ ಹಲವಾರು ಜಾತಿ, ಧರ್ಮಗಳಿದ್ದರು ಪ್ರತಿಯೊಬ್ಬರಿಗು ತಮ್ಮ ಹಕ್ಕುಗಳನ್ನು ಚಲಾಯಿಸಲು ನಮ್ಮ ಸಂವಿಧಾನದಲ್ಲಿ ಅವಕಾಶ ನೀಡಿದೆ. ಸಂವಿಧಾನ ಇಲ್ಲದಿದ್ದರೆ ನಮಗೆ ಮಾತನಾಡುವ ಹಕ್ಕು ಇರುತ್ತಿರಲಿಲ್ಲ. ಇಲ್ಲಿ ಸಾವಿರಾರು ಜಾತಿ ಧರ್ಮಗಳಿದ್ದರು ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳುತ್ತಿದ್ದೆವೆ. ಎಲ್ಲರೂ ಶಿಕ್ಷಣವಂತರಾದಾಗ ಮಾತ್ರ ನಮ್ಮ ರಾಷ್ಟ್ರ ಇನ್ನೂ ಬಲಿಷ್ಠವಾಗುತ್ತದೆ. ಅಂಬೇಡ್ಕರ್ ಅವರು ದೇವರ ರೂಪದಲ್ಲಿ ಬಂದು ಬಲಿಷ್ಠ ಸಂವಿಧಾನವನ್ನು ರಚಿಸಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದರು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,
ಪ್ರಜಾಪ್ರಭುತ್ವ ದಿನಾಚರಣೆ ಆಚರಿಸುವ ಕುರಿತು 2007 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ 2008 ರಿಂದ ಆಚರಣೆ ಮಾಡುತ್ತ ಬರಲಾಗುತ್ತಿದೆ. ಇದು 18ನೇಯ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಗಿದ್ದು, ಈ ವರ್ಷದ ಧ್ಯೇಯವಾಕ್ಯ `ನನ್ನ ಮತ ನನ್ನ ಹಕ್ಕು' ಎಂಬುದಾಗಿದೆ.
ಪ್ರಜಾಪ್ರಭುತ್ವ ದಿನದ ಉದ್ದೇಶ ಎಲ್ಲರಿಗೂ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಾನ ಹಕ್ಕುಗಳನ್ನು ನೀಡುವುದಾಗಿದೆ. ನಮ್ಮ ದೇಶದ ಸಂವಿಧಾನದಲ್ಲಿ ಯಾವುದೇ ಜಾತಿ, ಧರ್ಮ, ವರ್ಗ ತಾರತಮ್ಯ ಮಾಡದೆ ಎಲ್ಲರಿಗೂ ಮತದಾನದ ಹಕ್ಕನ್ನು ನೀಡಿದೆ. ದೇಶದಲ್ಲಿ ಶೇ. 67 ಪ್ರತಿಶತ ಮತದಾನವಾಗುತ್ತಿದ್ದು, ಇನ್ನೂ 33 ಪ್ರತಿಶತ ಜನರು ಮತದಾನದಿಂದ ದೂರ ಉಳಿಯುತ್ತಾರೆ. ಹಾಗಾಗಿ ಎಲ್ಲರೂ ಮತದಾನ ಮಾಡಬೇಕೆಂಬ ಉದ್ದೇಶದಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಎಲ್ಲರೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ತಿಳಿದುಕೊಳ್ಳಬೇಕೆಂದು ಹೇಳಿದರು.
ಕೊಪ್ಪಳ ಗವಿಸಿದ್ದೇಶ್ವರ ಕಾಲೇಜಿನ ಉಪನ್ಯಾಸಕರಾದ ಬಸವರಾಜ ಹಿರೇಮಠ ಅವರು ಪ್ರಜಾಪ್ರಭುತ್ವ ದಿನಾಚರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಅಜ್ಜಪ್ಪ ಸೊಗಲದ ಅವರು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಶಾಲಾ-ಕಾಲೇಜುಗಳ ಮಕ್ಕಳಿಗೆ ಹಮ್ಮಿಕೊಂಡ ಚಿತ್ರಕಲಾ ಸ್ಪರ್ಧೆ, ಪೆÇೀಟೋಗ್ರಫಿ ಹಾಗೂ ಭಾಷಣ ಸ್ಪರ್ಧೆಗಳ ಕರಪತ್ರಗಳನ್ನು ಇದೇ ಸಂದರ್ಭದಲ್ಲಿ ಗಣ್ಯರಿಂದ ಬಿಡುಗಡೆಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುμÁ್ಠನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಅಜ್ಜಪ್ಪ ಸೊಗಲದ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಾಗೃತಿ ಜಾಥಾ : ಪ್ರಜಾಪ್ರಭುತ್ವ ದಿನದ ಅಂಗವಾಗಿ ಅಂದು ಬೆಳಿಗ್ಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾಡಳಿತ ಭವನದವರೆಗೆ ಸೈಕಲ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್