ವಿಜಯಪುರ, 04 ಆಗಸ್ಟ್ (ಹಿ.ಸ.) :
ಆ್ಯಂಕರ್ : ದೈಹಿಕ, ಮಾನಸಿಕ, ಸಾಮಾಜಿಕ, ಆರ್ಥಿಕ ಹಾಗೂ ನೈತಿಕತೆಯ ಸುಂದರ ಸಮಾಜ ನಿರ್ಮಿಸುವಲ್ಲಿ ಪ್ರತಿಯೊಬ್ಬರು ವ್ಯಸನ ಮುಕ್ತರಾಗಬೇಕೆಂದು ಇಲಕಲ್ಲ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮಿಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬಾಗಲಕೋಟೆಯ ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ, ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಲಿಂ.ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ದೇಹಕ್ಕೆ ಆರೋಗ್ಯಕ್ಕೆ ಮಾರಕವಾದ ದುಶ್ಚಟಗಳನ್ನು ಪ್ರಚೋದಿಸಲು ಪ್ರಖ್ಯಾತರು, ಸಿರಿವಂತರು ಹಾಗೂ ನಟರನ್ನು ಬಳಸಿಕೊಂಡು ಜಾಹೀರಾತುಗಳನ್ನು ಮಾಡುತ್ತಿದ್ದಾರೆ. ಇದರಿಂದ ಅವರು ಪ್ರಗತಿಯಾಗುತ್ತಾರೆ ಹೊರತು ಸಾಮಾನ್ಯ ಜನರು ರೋಗಗ್ರಸ್ಥರಾಗಿ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ದುರ್ಬಲರಾಗುತ್ತಾರೆ. ಇದಕ್ಕೆಲ್ಲ ಕೊನೆ ಹಾಡಬೇಕಾದರೆ ಮುಂದಿನ ಪ್ರಭಾವಿ ಪ್ರಜೆಗಳಾಗುವ ವಿದ್ಯಾರ್ಥಿಗಳಾದ ನೀವು ನಿಮ್ಮ ಕುಟುಂಬದಲ್ಲಿ ಪಾಲಕರು ಹಾಗೂ ಪರಿಸರದಲ್ಲಿ ದುಶ್ಚಟಕ್ಕೆ ಬಲಿಯಾದ ವ್ಯಕ್ತಿಯನ್ನು ತಿದ್ದುವ ಕಾರ್ಯವಾಗಬೇಕು. ನೀವು ದುಶ್ಚಟ ವಿರೋಧಿಯ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ದುಶ್ಚಟಗಳಿಂದಾದ ದುಷ್ಪರಿಣಾಮ ಜಾಗತಿಕ ಮಟ್ಟದ ಸಮಸ್ಯೆಯಾಗಿದೆ. ಅಮೇರಿಕಾದಲ್ಲಿ ಸಿಗರೇಟ್ ಸೇವನೆಯಿಂದ ರೋಗಗ್ರಸ್ಥರಾಗಿದ್ದನ್ನು ಜನರೇ ಗಮನಿಸಿ ಸ್ವಮನಸ್ಸಿನಿಂದ ಸಿಗರೇಟ ಸೇದುವದನ್ನು ಬಿಟ್ಟಿದ್ದರಿಂದ ಪ್ರತಿಷ್ಠಿತ 5 ಸಿಗರೇಟ್ ಕಂಪನಿಗಳು ಮುಚ್ಚಲ್ಪಟ್ಟಿವೆ. ನಮ್ಮ ರಾಜ್ಯದಲ್ಲಿಯು ಕೂಡ ಈ ಬದಲಾವಣೆ ಆಗಬೇಕಿದೆ ಎಂದರು.
ಪುಜ್ಯ ಮಹಾಂತ ಶಿವಯೋಗಿಗಳು ತಮ್ಮೆಲ್ಲ ಭಕ್ತರು ಆರೋಗ್ಯದಿಂದ ಇರಲಿ ಎಂಬ ಉದ್ದೇಶದಿಂದ ಭಕ್ತರಿಂದ ಯಾವ ಕಾಣಿಕೆಯನ್ನು ಬೇಡದೇ ಅವರು ತಮ್ಮ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ ಎಂದು ರಾಜ್ಯದಾದ್ಯಂತ ಅಭಿಯಾನ ಮಾಡಿ ಲಕ್ಷಾಂತರ ಜನರ ಕುಟುಂಬಗಳನ್ನು ಉಳಿಸಿದ್ದಾರೆ. ಪೂಜ್ಯರ ಸಾಧನೆ ಕಂಡು ಅವರ ಜನ್ಮ ದಿನದಂದು ಸರಕಾರ ವ್ಯಸನಮುಕ್ತ ದಿನಾಚರಣೆಯನ್ನಾಗಿ ಘೋಷಿಸಿದ್ದು, ಸ್ವಾಗತಾರ್ಹ ಎಂದರು.
ಬಾಗಲಕೋಟೆ-ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬರು ಮಹಾತ್ಮರ ವಚನಗಳನ್ನು ಹೇಳುತ್ತಾರೆ ಹೊರತು ಅವುಗಳನ್ನು ಪರಿಪಾಲಿಸುತ್ತಿಲ್ಲ. ಅದೇ ರೀತಿ ದುಶ್ಚಟಕ್ಕೆ ಬಲಿಯಾದವರು ಮತ್ತೊಬ್ಬರನ್ನು ಹೋಲಿಕೆ ಮಾಡುತ್ತಾರೆ ಹೊರತು ತಮ್ಮನ್ನು ತಾವು ವಿಮರ್ಶೆ ಮಾಡಿಕೊಳ್ಳುವದಿಲ್ಲ. ಆದರ್ಶದ ಮಾತುಗಳನ್ನು ಹೇಳಿದರೆ ಸಾಲದು ನಡೆದುಕೊಳ್ಳುವುದು ಮುಖ್ಯವಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಸಿ.ಮಿರ್ಜಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣವಂತರಾದರೆ ಸಾಲದು ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಹಾಗೂ ನೈತಿಕವಾಗಿ ಸದೃಢರಾದಾಗ ಮಾತ್ರ ಸಮಾಜಕ್ಕು, ಕುಟುಂಬಕ್ಕು ಉತ್ತಮ ಕೊಡುಗೆ ನೀಡಿದಂತಾಗುತ್ತದೆ. ಪೂಜ್ಯ ಮಹಾಂತ ಶ್ರೀಗಳು ತಮ್ಮ ಜೋಳಿಗೆಯಲ್ಲಿ ದುಶ್ಚಟಗಳನ್ನು ಹಾಕಿ ಎಂದು ರಾಜ್ಯದಾದ್ಯಂತ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ವಿದ್ಯಾರ್ಥಿಗಳು ದುಶ್ಚಟಗಳ ದುಷ್ಪರಿಣಾಮಗಳನ್ನು ಅರಿಯಬೇಕು ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ನಾಗರತ್ನಾ ಭಾವಿಕಟ್ಟಿ ಮಾಡತನಾಡಿ ನಾಡಿದಾದ್ಯಂತ ಪ್ರಸಿದ್ದಿ ಪಡೆದ ಮಠಗಳೇಲ್ಲ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಶಿಕ್ಷಣ ಸಂಸ್ಥೆ, ಅನಾಥಾಲಯ, ಗೋಶಾಲೆ ಮುಂತಾದವುಗಳನ್ನು ಪ್ರಾರಂಭಿಸಿದರೆ, ಚಿತ್ತರಗಿಯ ಪೂಜ್ಯ ಮಹಾಂತ ಶ್ರೀಗಳು ಯಾವುದೇ ಫಲಾಪೇಕ್ಷೆ ಇಲ್ಲದೇ ನಿಮ್ಮಲ್ಲಿರುವ ದುಶ್ಚಟಗಳನ್ನು ಜೋಳಿಗೆ ಹಾಕಿ ಎಂದು ಅಭಿಯಾನ ಪ್ರಾರಂಭಿಸಿದರು. ಈ ಅಭಿಯಾನ ಹುನಗುಂದ ತಾಲೂಕಿನಲ್ಲಿ ನಡೆದ ಘಟನೆ ಪೂಜ್ಯರ ಮನಸ್ಸಿನ ಮೇಲೆ ಪ್ರಭಾವ ಭೀರಿದ್ದರಿಂದ 1975 ರಲ್ಲಿ ದುಶ್ಚಟ ನಿರ್ಮೂಲನೆಗಾಗಿ ವ್ಯಸನಮುಕ್ತ ಸಮಾಜ ನಿರ್ಮಿಸುವ ಪಣತೊಟ್ಟು ತಮ್ಮ ಈಡೀ ಜೀವನ ಮುಡುಪಾಗಿಟ್ಟಿದ್ದಾರೆ ಎಂದರು.
ಪ್ರಾರಂಭದಲ್ಲಿ ಲಿಂ.ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ವ್ಯಸನಮುಕ್ತ ದಿನದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಬಸವ ಪ್ರಸಾದ ಶ್ರೀ, ಸಂಗನಬಸವ ಶ್ರೀ, ಬಸವರಾಜ ಶ್ರೀಗಳು ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕುಷ್ಟರೋಗ ನಿರ್ಮೂಲಾಧಿಕಾರಿ ಶಿವನಗೌಡ ಪಾಟೀಲ, ಜಿ.ಪಂ ಯೋಜನಾ ನಿರ್ದೇಶಕ ಎಂ.ಎಸ್.ಕಾಂಬಳೆ, ಡಿವಾಯ್‍ಎಸ್‍ಪಿ ಗಿರೀಶ ಬೋಜನ್ನವರ, ಜಿಲ್ಲಾ ವಾರ್ತಾಧಿಕಾರಿ ಕಸ್ತೂರಿ ಪಾಟೀಲ, ರಾಜ್ಯ ಮಾವು ಅಭಿವೃದ್ದಿ ನಿಗಮದ ಮಾಜಿ ನಿರ್ದೇಶಕ ಜಿ.ಎಸ್.ಗೌಡರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಂಕರಲಿಂಗ ದೇಸಾಯಿ ಸ್ವಾಗತಿಸಿ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande