ಪರ್ಯಾಯ ಸಾರಿಗೆ ವ್ಯವಸ್ಥೆಗೆ ಕೋಲಾರ ಜಿಲ್ಲಾಡಳಿತ ಕ್ರಮ
ಕೆಎಸ್ಆರ್ಟಿಸಿ ನೌಕರರ ಮುಷ್ಕರದ ಹಿನ್ನೆಲೆ ಪರ್ಯಾಯ ಸಾರಿಗೆ ವ್ಯವಸ್ಥೆಗೆ ಕೋಲಾರ ಜಿಲ್ಲಾಡಳಿತ ಕ್ರಮ
ಚಿತ್ರ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಮುಷ್ಕರದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸಭೆ ನಡೆಸಿದರು.


ಕೋಲಾರ, 04 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿಗೆ ಮುಷ್ಕರಕ್ಕೆ ಕರೆ ನೀಡಿದ್ದು, ಒಂದು ವೇಳೆ ಆಗಸ್ಟ್ ೫ ರಿಂದ ಮುಷ್ಕರ ನಡೆದರೂ ಸಹ ಜಿಲ್ಲೆಯಲ್ಲಿನ ಸಾರಿಗೆ ಸೇವೆಯಲ್ಲಿ ವೆತ್ಯಯವಾಗದಂತೆ ಜಿಲ್ಲಾಡಳಿತ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ರವರು ವಿವಿಧ ಬೇಡಿಕೆಗಳನ್ನಿಟ್ಟು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಮಂತ್ರಿಗಳು ನಿಗಮಗಳ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳೊಂದಿಗೆ ಆಗಸ್ಟ್ ೫ರಂದು ಬೆಂಗಳೂರಿನಲ್ಲಿ ಮಾತುಕತೆ ನಡೆಸಲಿದ್ದು, ಮಾತುಕತೆ ಯಶಸ್ವಿಯಾಗಿ ಮುಷ್ಕರವನ್ನು ಸಂಘಟನೆಗಳು ಕೈ ಬಿಟ್ಟರೆ ನಿಗಮಗಳ ಸಾರಿಗೆ ವ್ಯವಸ್ಥೆಯು ಎಂದಿನಂತೆ ಯಥಾ ಸ್ಥಿತಿಯಲ್ಲಿ ಮುಂದುವರೆಯಲಿದೆ ಇಲ್ಲವಾದಲ್ಲಿ ಸಾರಿಗೆ ನಿಗಮಗಳ ವಾಹನಗಳ ಸಾರಿಗೆ ಸೌಕರ್ಯವು ಸ್ಥಗಿತಗೊಳ್ಳುವ ಸಂಭವವಿರುತ್ತದೆ ಆದ್ದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಪರ್ಯಾಯವಾಗಿ ಸಾರಿಗೆ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಒದಗಿಸಬೇಕಾಗಿರುತ್ತದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಾಯಿಸಲಾಗಿರುವ ಖಾಸಗಿ ವಾಹನಗಳು, ಒಪ್ಪಂದದ ವಾಹನಗಳು, ಖಾಸಗಿ ಸೇವಾ ವಾಹನಗಳು ಮತ್ತು ಶಾಲಾ ವಾಹನಗಳು ಸೇರಿದಂತೆ ವಾಹನಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ ವ್ಯವಸ್ಥೆ ಮಾಡಲಾಗಿರುತ್ತದೆ.

ಈ ವಾಹನಗಳು ನಿಗಮದ ಬಸ್ಸು ನಿಲ್ದಾಣಗಳಿಂದಲೇ ಕಾರ್ಯಾಚರಣೆ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ.ಒಪ್ಪಂದದ ವಾಹನಗಳನ್ನು ಕಾರ್ಯಚರಣೆ ಮಾಡಲು ಕ್ರಮವಹಿಸಲಾಗುವುದು. ಮ್ಯಾಕ್ಸಿಕ್ಯಾಬ್ ಮತ್ತು ಆಟೋ ಗಳನ್ನು ಉಪಯೋಗಿಸಿಕೊಂಡು ಜಿಲ್ಲೆಯ ಸ್ಥಳೀಯ ಗ್ರಾಮಗಳಿಂದ ಕಾರ್ಯಾಚರಣೆಯನ್ನು ಮಾಡಲಾಗುವುದು. ಈ ಎಲ್ಲ ಖಾಸಗಿ ವಾಹನಗಳಲ್ಲಿ ಕೆಎಸ್ಆರ್ಟಿಸಿ ವಾಹನಗಳ ದರಗಳನ್ನೇ ಪಾವತಿಸಿ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಮಾತನಾಡಿ ನಮ್ಮ ವಿಭಾಗದಲ್ಲಿ ೧೦೦ ಜನ ಗುತ್ತಿಗೆ ನೌಕರರು ಮತ್ತು ೬೫ ಜನ ತರಬೇತಿ ನೌಕರರನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಸುಮಾರು ೮೦ ಸರ್ಕಾರಿ ಬಸ್ಸುಗಳು ಮತ್ತು ೧೩೭ ಖಾಸಗಿ ಬಸ್ಸುಗಳು ಕಾರ್ಯನಿರ್ವಹಿಸಲಿವೆ ಜೊತೆಗೆ ಸ್ಥಳೀಯ ಕೈಗಾರಿಕಾ ಬಸ್ಸುಗಳನ್ನು ಸಾರ್ವಜನಿಕರ ಅನುಕೂಲಕ್ಕೆ ಬಳಸುವಂತೆ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿಯೂ ಸಾಧ್ಯವಾದಷ್ಟು ಬಸ್ಸುಗಳ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಮಾತನಾಡಿ ಜಿಲ್ಲೆಯಲ್ಲಿ ಸಾರಿಗೆ ನೌಕರರ ಮುಷ್ಕರ ನಡೆದರೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳ, ಕೆಎಸ್ಆರ್ಟಿಸಿಯ ವಿಭಾಗೀಯ ನಿಯಂತ್ರಕರು ಶ್ರೀನಾಥ್, ಡಿಟಿಓ ಮಂಜುನಾಥ್, ಶ್ರೀನಿವಾಸಯ್ಯ, ಪ್ರಾದೇಶಿಕ ಸಾರಿಗೆ ಅಧಿಕಾರಿ ವೇಣುಗೋಪಾಲ್ ರೆಡ್ಡಿ, ಭದ್ರತಾ ಅಧಿಕಾರಿ ಆನಂದ್ ಕುಮಾರ್,ಖಾಸಗಿ ಬಸ್ಸುಗಳ ಅಸೋಶಿಯೇಶನ್ ಪದಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರ

ು.

ಚಿತ್ರ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಮುಷ್ಕರದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸಭೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande