ಟೋಕಿಯೋ, 29 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಜಪಾನ್ ಭೇಟಿಯ ಅಂಗವಾಗಿ ಟೋಕಿಯೊ ತಲುಪಿದರು. ಅಲ್ಲಿ ವಾಸಿಸುವ ಭಾರತೀಯ ಸಮುದಾಯದವರು ಆತ್ಮೀಯವಾಗಿ ಅವರನ್ನು ಸ್ವಾಗತಿಸಿದರು.
ಮೋದಿಯವರು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರನ್ನು ಇಂದು ಮಧ್ಯಾಹ್ನ ಭೇಟಿಯಾಗಿ, ರಕ್ಷಣಾ ಹಾಗೂ ಆರ್ಥಿಕ ಸಹಕಾರವನ್ನು ಬಲಪಡಿಸುವ ಪರಿಷ್ಕೃತ ಜಂಟಿ ಘೋಷಣೆಗೆ ಸಹಿ ಹಾಕಲಿದ್ದಾರೆ. ಈ ದಾಖಲೆ ಭದ್ರತೆ, ರಕ್ಷಣಾ ಉದ್ಯಮ ಮತ್ತು ಆರ್ಥಿಕ ಭದ್ರತೆ ಕ್ಷೇತ್ರಗಳನ್ನು ಒಳಗೊಂಡಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಮೋದಿ, ಜಪಾನ್‌ನ ಮುಂದುವರಿದ ತಂತ್ರಜ್ಞಾನ ಮತ್ತು ಭಾರತದ ಪ್ರಮಾಣವನ್ನು ಸಂಯೋಜಿಸುವ ಮೂಲಕ ವಿಶ್ವಾಸಾರ್ಹ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯನ್ನು ನಿರ್ಮಿಸುತ್ತೇವೆ ಎಂದರು.
ಮುಂಬೈ–ಅಹಮದಾಬಾದ್ ನಡುವೆ ಜಾರಿಯಲ್ಲಿರುವ ಅತಿ ವೇಗದ ರೈಲು ಯೋಜನೆಗೆ ಶಿಂಕಾನ್ಸೆನ್ ವ್ಯವಸ್ಥೆ ಅಳವಡಿಸಲಾಗುವುದು. ಭವಿಷ್ಯದಲ್ಲಿ ಭಾರತದಲ್ಲಿ 7,000 ಕಿಮೀ ಹೈಸ್ಪೀಡ್ ರೈಲು ಜಾಲವನ್ನು ನಿರ್ಮಿಸುವ ಗುರಿಯಿದೆ ಎಂದೂ ಮೋದಿ ತಿಳಿಸಿದ್ದಾರೆ.
ಸಭೆಯ ನಂತರ ಇಬ್ಬರು ನಾಯಕರ ಜಂಟಿ ಪತ್ರಿಕಾಗೋಷ್ಠಿ ಮತ್ತು ಭೋಜನ ಕೂಟವಿದೆ. ಆಗಸ್ಟ್ 30ರಂದು ಮೋದಿ ಚೀನಾಕ್ಕೆ ತೆರಳುವ ಮೊದಲು ಜಪಾನ್‌ನ ಸೆಮಿಕಂಡಕ್ಟರ್ ಕಾರ್ಖಾನೆ ಪರಿಶೀಲಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa