ಕ್ವೆಟ್ಟಾ, 29 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಮತ್ತೆ ಭಯೋತ್ಪಾದಕ ದಾಳಿಯ ಘಟನೆ ನಡೆದಿದೆ.
ಗುರುವಾರ ಪಂಜ್‌ಗುರ್ ಮತ್ತು ಕಚ್ಚಿ ಜಿಲ್ಲೆಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ನಡೆದ ಬಾಂಬ್ ಸ್ಫೋಟಗಳಲ್ಲಿ ಸುಬೇದಾರ್ ಅಬ್ದುಲ್ ರಜಾಕ್ ಸೇರಿದಂತೆ ಹಲವಾರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಕಚ್ಚಿ ಜಿಲ್ಲೆಯ ಕೋಲ್ಪುರ್ ಪ್ರದೇಶದಲ್ಲಿ, ರೈಲ್ವೆ ಹಳಿಯನ್ನು ತೆರವುಗೊಳಿಸುತ್ತಿದ್ದ ಬಾಂಬ್ ನಿಷ್ಕ್ರಿಯ ದಳದ ಮೇಲೆ ಸುಧಾರಿತ ಸ್ಫೋಟಕ ಸಾಧನ ದಾಳಿ ನಡೆದಿದೆ. ಅದೇ ಭಾಗದಲ್ಲಿ ಮತ್ತೊಂದು ದಾಳಿಯಲ್ಲಿ ಭದ್ರತಾ ಪಡೆಗಳ ವಾಹನ ಗುರಿಯಾಗಿದೆ.
ಇದೇ ರೀತಿ, ಪಂಜ್‌ಗುರ್ ಜಿಲ್ಲೆಯ ಪರೋಮ್ ಪ್ರದೇಶದಲ್ಲಿ, ತಪಾಸಣಾ ಕೇಂದ್ರದಿಂದ ಹೊರಟ ಭದ್ರತಾ ವಾಹನವನ್ನು ಐಇಡಿ ಸ್ಫೋಟದಲ್ಲಿ ಗುರಿಯಾಗಿಸಿಕೊಂಡಿದ್ದಾರೆ. ಈ ದಾಳಿಯಲ್ಲೇ ಸುಬೇದಾರ್ ರಜಾಕ್ ಸೇರಿದಂತೆ ಹಲವು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಕ್ವೆಟ್ಟಾದ ಮಿಯಾನ್ ಘುಂಡಿ ಪ್ರದೇಶದಲ್ಲಿ ಶಸ್ತ್ರಸಜ್ಜಿತ ದಾಳಿಕೋರರು ಪೊಲೀಸರನ್ನು ಒತ್ತೆಯಾಳಾಗಿಸಿಕೊಂಡು ಅವರ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡಿದ್ದಾರೆ. ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.
ಘಟನೆಯ ಕುರಿತು ಪಾಕಿಸ್ತಾನಿ ಅಧಿಕಾರಿಗಳು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದುವರೆಗೆ ಯಾವುದೇ ಸಂಘಟನೆಯೂ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿಲ್ಲ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa