ಕೋಳಿ ಸಾಕಾಣಿಕೆ ಕೃಷಿಯೆಂದು ಪರಿಗಣಿಸಲು ಒತ್ತಾಯಿಸಿ ಪ್ರತಿಭಟನೆ
ಕೋಳಿ ಸಾಕಾಣಿಕೆ ಕೃಷಿಯೆಂದು ಪರಿಗಣಿಸಲು ಒತ್ತಾಯಿಸಿ ಪ್ರತಿಭಟನೆ
ಚಿತ್ರ : ಕೋಳಿ ಸಾಕಾಣಿಕೆಯನ್ನು ಕೃಷಿಯೆಂದು ಪರಿಗಣಿಸಲು ಒತ್ತಾಯಿಸಿ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೋಲಾರ ತಾಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.


ಕೋಲಾರ, ೧೮ಆಗಸ್ಟ್ (ಹಿ.ಸ.) :

ಆ್ಯಂಕರ್ : ಕೋಳಿ ಸಾಕಾಣಿಕೆಯನ್ನು ಕೃಷಿಯೆಂದು ಪರಿಗಣಿಸಿ, ಕುಕ್ಕುಟ ಉದ್ಯಮದ ಸಮರ್ಪಕ ನಿರ್ವಹಣೆಗೆ ಭೂ ಕಂದಾಯ ಕಾಯ್ದೆ೧೯೬೪ರ ಕಾನೂನು ರೂಪಿಸಬೇಕು ಜೊತೆಗೆ ಕೋಳಿ ಸಾಕಾಣಿಕೆ ದರ ಕೆಜಿಗೆ ೧೨ ರೂ ಪರಿಷ್ಕರಿಸಲು ಅಗತ್ಯ ಕ್ರಮ ವಹಿಸಲು ರಾಜ್ಯ ಸರ್ಕಾರವನ್ನು ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸುಗಟೂರು ಶ್ರೀಧರ್ ರೆಡ್ಡಿ ಮಾತನಾಡಿ, ಕೋಳಿ ಸಾಕಾಣಿಕೆಯನ್ನು ಕೃಷಿಯೆಂದು ಪರಿಗಣಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಹಲವು ಬಾರಿ ದುಂಡು ಮೇಜಿನ ಸಭೆ, ಹೋರಾಟ ನಡೆಸಿದ್ದೇವೆ. ಕೋಳಿ ಸಾಕಾಣಿಕೆದಾರರ ಬೇಡಿಕೆಗಳ ಸಂಬಂಧ ಪಶು ಸಂಗೋಪನಾ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೇವೆ ಆದರೂ ಯಾವುದೇ ರೀತಿಯ ಕ್ರಮ ವಹಿಸಿಲ್ಲ. ಕೂಡಲೇ ರಾಜ್ಯ ಸರ್ಕಾರವು ಕುಕ್ಕುಟ ಉದ್ಯಮದ ಬಗ್ಗೆ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಕುಕ್ಕುಟ ಉದ್ಯಮ ನಡೆಸುತ್ತಿದ್ದು, ವಿವಿಧ ಹಂತದಲ್ಲಿ ಸುಮಾರು ೩ ಕೋಟಿ ಮಂದಿಗೆ ಉದ್ಯೋಗ ಅವಕಾಶಗಳನ್ನು ನೀಡಲಾಗಿದೆ. ಕಂಪನಿಗಳ ಪರವಾದ ನಿಯಮಗಳನ್ನು ಕೈಬಿಟ್ಟು ಕೋಳಿ ಸಾಕಾಣಿಕೆದಾರರನ್ನು ಉಳಿಸಿ ಪ್ರೋತ್ಸಾಹಿಸಿ ಸೌಲಭ್ಯ ಒದಗಿಸುವ ಕೆಲಸವನ್ನು ಆಳುವ ಸರ್ಕಾರಗಳು ಮಾಡಬೇಕಾಗಿದೆ ಎಂದು ಮನವಿ ಮಾಡಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಹಿಡಿದು ಹಿಂದೆ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಕುಮಾರಸ್ವಾಮಿ ಸರ್ಕಾರದವರೆಗೂ ಹಲವು ಬಾರಿ ಮನವಿ ಮಾಡಿದರೂ ಕಾನೂನು ರೂಪಿಸಿಲ್ಲ. ಬೇಡಿಕೆಗಳ ಸಂಬಂಧ ಪಶು ಸಂಗೋಪನಾ ಇಲಾಖೆ, ಕೋಳಿ ಸಾಕಾಣಿಕೆದಾರರು ಮತ್ತು ಕಂಪನಿಗಳ ನೇತೃತ್ವದಲ್ಲಿ ಸಭೆ ನಡೆದರು ಮರಿ ಸರಬರಾಜು, ಕನಿಷ್ಠ ಸಾಕಾಣಿಕೆ ದರ, ಪಾವತಿ ಸೇರಿದಂತೆ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಳಿ ಸಾಕಾಣಿಕೆದಾರರ ಪರವಾಗಿ ಸಿದ್ದಪಡಿಸಿರುವ ಕರಡನ್ನು ರಾಜ್ಯ ಸರ್ಕಾರವು ಇವತ್ತಿನ ಅಧಿವೇಶನದಲ್ಲಿ ಮಂಡಿಸಬೇಕು. ರೈತರ ಜೀವನೋಪಾಯವನ್ನು ರಕ್ಷಿಸಬೇಕು ಇಲ್ಲದೇ ಹೋದರೆ ರಾಜ್ಯಾದ್ಯಂತ ದೊಡ್ದ ಮಟ್ಟದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ಉಪ ತಹಶಿಲ್ದಾರ್ ಅವರಿಗೆ ಮನವಿ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಕೋಳಿ ಸಾಕಾಣಿಕೆದಾರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಅಧ್ಯಕ್ಷ ಜೆ.ಸಿ.ಮಂಜುನಾಥ್, ತಾಲೂಕು ಅಧ್ಯಕ್ಷ ವೆಂಕಟೇಶಪ್ಪ, ರಾಜ್ಯ ರೈತ ಸಂಘದ ಕಾರ್ಯಾದ್ಯಕ್ಷ ಅಬ್ಬಣಿ ಶಿವಪ್ಪ, ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ವಿ ನಾರಾಯಣರೆಡ್ಡಿ ಕೋಳಿ ಸಂಘದ ಪದಾಧಿಕಾರಿಗಳಾದ ಗಿರೀಶ್ ಗೌಡ, ಪಿ.ಶ್ರೀನಿವಾಸ್, ನಟರಾಜ್, ಕಿರಣ್, ರಮೇಶ್, ಅಂಬರೀಶ್ ಮುಂತಾದವರು ಇದ್ದರು.

ಚಿತ್ರ : ಕೋಳಿ ಸಾಕಾಣಿಕೆಯನ್ನು ಕೃಷಿಯೆಂದು ಪರಿಗಣಿಸಲು ಒತ್ತಾಯಿಸಿ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೋಲಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande