ಕೋಲಾರ, ೦೩ ಜುಲೈ (ಹಿ.ಸ) :
ಆ್ಯಂಕರ್ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಲಾರ ತಾಲೂಕು ಶಾಖೆಯಲ್ಲಿನ ಗೊಂದಲಗಳಿಗೆ ರಾಜ್ಯ ಸಂಘ ತೆರೆ ಎಳೆದಿದ್ದು, ಸಂಘದ ತಾಲ್ಲೂಕು ಅಧ್ಯಕ್ಷರನ್ನಾಗಿ ಎಸ್.ನಾರಾಯಣಸ್ವಾಮಿ ಪ್ರಧಾನ ಕಾರ್ಯದರ್ಶಿಯಾಗಿ ವಿ.ಸೋಮಶೇಖರ್ ಸೇರಿದಂತೆ ಪದಾಧಿಕಾರಿಗಳನನ್ನು ಆಯ್ಕೆ ಮಾಡಿ ಅನುಮೋದನೆ ನೀಡಿರುವ ಕುರಿತಾದ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ಅವರಿಗೆ ನೀಡಲಾಯಿತು.
ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ರಾಜ್ಯ ಸಂಘದ ಅಧಿಕೃತ ಪತ್ರವನ್ನು ಹಸ್ತಂತರಿಸಿ ರಾಜ್ಯ ಸಂಘದ ನಿರ್ದೇಶನದಂತೆ ಸದರಿ ಪದಾಧಿಕಾರಿಗಳು ಸಂಘಟನೆಯಲ್ಲಿ ಮುಂದುವರೆಯಲಿದ್ದಾರೆ ಮತ್ತು ಇಲಾಖೆಯ ಶೈಕ್ಷಣಿಕ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ತಾಲ್ಲೂಕು ಮಟ್ಟದ ಕಾರ್ಯಕ್ರಮಗಳಿಗೆ ನೂತನ ಪದಾಧಿಕಾರಿಗಳನ್ನು ಪರಿಗಣಿಸುವಂತೆ ಮನವಿ ಮಾಡಿದರು.
ರಾಜ್ಯ ಸಂಘದ ಪತ್ರದಂತೆ ಅಧ್ಯಕ್ಷರಾಗಿ ಎಸ್.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ವಿ.ಸೋಮಶೇಖರ್, ಖಜಾಂಚಿಯಾಗಿ ಟಿ.ಎನ್.ಅಶ್ವತಪ್ಪ, ಗೌರವಾಧ್ಯಕ್ಷರಾಗಿ ನಾಗರಾಜ್, ಉಪಾಧ್ಯಕ್ಷರಾಗಿ ಸಿ ನಾರಾಯಣಸ್ವಾಮಿ, ಮಹೀಳಾ ಉಪಾಧ್ಯಕ್ಷರಾಗಿ ಬಿ.ಎನ್.ಭಾಗ್ಯಮ್ಮ ಕಾರ್ಯದರ್ಶಿಯಾಗಿ ಎನ್.ಕೃಷ್ಣಪ್ಪ ಸಹಕಾರ್ಯದರ್ಶಿಯಾಗಿ ಬಿ ಮುನಿರಾಜು ಸಂಘಟನಾ ಕಾರ್ಯದರ್ಶಿಯಾಗಿ ಸಿ.ರುದ್ರಮ್ಮರನ್ನು ಆಯ್ಕೆ ಮಾಡಿ ಪಟ್ಟಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅನುಮೋದನೆ ನೀಡಿದೆ.
ನೂತನ ಪದಾಧಿಕಾರಿಗಳು ಮಾತನಾಡಿ ರಾಜ್ಯ ಸಂಘ ನಮಗೆ ಅವಕಾಶ ಕಲ್ಪಿಸಿದ್ದು, ಶಿಕ್ಷಕರ ಸಂಘಟನೆ ಬಲಗೊಳಿಸುವುದರ ಜತೆಗೆ ಶಿಕ್ಷಕರ ವೇತನ ಬಟವಾಡೆ, ಸೇವಾ ಪುಸ್ತಕ ನಿರ್ವಹಣೆ, ವೈದ್ಯಕೀಯ ಬಿಲ್ಲುಗಳ ಪಾವತಿ ಮತ್ತಿತರ ಎಲ್ಲಾ ಸಮಸ್ಯೆಗಳಿಗೂ ಸಂಘಟಿತಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ವೆಂಕಟಾಚಲಪತಿಗೌಡ ಮತ್ತು ಯು.ಗೋವಿಂದ್ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಸಂಘ ಕೈಗೊಳ್ಳುವ ನಿರ್ಧಾರಗಳಿಗೆ ನಮ್ಮ ಸಂಪೂರ್ಣ ಸಹಕಾರವಿದ್ದು, ಒಟ್ಟಾಗಿ ನಡೆಯೋಣ ಶಿಕ್ಷಕರ ಕುಂದುಕೊರತೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸೋಣ ಎಂದು ತಿಳಿಸಿದರು.
ನೂತನ ಪದಾಧಿಕಾರಿಗಳು ತಮ್ಮ ಆಯ್ಕೆಗೆ ಅನುಮೋದನೆ ನೀಡಿದ ರಾಜ್ಯ ಸಂಘದ ಅಧ್ಯಕ್ಷ ನಾಗೇಶ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಸಹಕಾರ್ಯದಶಿಆð ಚೇತನ್, ಅನಿಲ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಅಶ್ವಥ್ ನಾರಾಯಣಗೌಡ, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಹಾಗೂ ಸಹಕರಿಸಿದ ಎಲ್ಲ ಶಿಕ್ಷಕರಿಗೂ, ಸ್ನೇಹಿತರಿಗೂ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಹಿತೈಷಿಗಳಾದ ಭದ್ರೆಗೌಡ, ಇಬ್ರಾಹಿಂ ಖಾನ್, ಅಶ್ವತ್ಥಪ್ಪ, ಕೃಷ್ಣಪ್ಪ, ಸೋಮೇಗೌಡ, ಶಾಂತಮ್ಮ, ಅಮರನಾಥ್, ಎಸ್.ಶ್ರೀರಾಂ, ರಮೇಶ್‌ಬಾಬು, ಸುರೇಶ್‌ಬಾಬು, ಬೈರೇಗೌಡ, ಶ್ರೀನಿವಾಸಪ್ಪ, ಮುನಿಭೈರಪ್ಪ, ವೆಂಕಟೇಶ್‌ಮೂರ್ತಿ, ನಲಿ ಕಲಿ ನಾರಾಯಣಸ್ವಾಮಿ, ಇನ್ನೂ ಮುಂತಾದ ಶಿಕ್ಷಕರುಗಳು ಹಾಜರಿದ್ದು, ನೂತನ ಪದಾಧಿಕಾರಿಗಳನ್ನು ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಅಭಿನಂದಿಸಿದರು.
ಚಿತ್ರ ; ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಲಾರ ತಾಲೂಕು ಶಾಖೆಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್