ಕೋಲಾರ, ೦೩ ಜುಲೈ (ಹಿ.ಸ) :
ಆ್ಯಂಕರ್ : ದೇಶ ಸೇವೆ ಮಾಡುವ ಮನಸ್ಥಿತಿಯನ್ನು ವಿದ್ಯಾರ್ಥಿ ದೆಸೆಯಿಂದಲೇ ಮೈಗೂಡಿಸಿಕೊಂಡು ದೇಶ ಸೇವೆಗೆ ಸದಾ ಬದ್ದರಾಗಿರುವ ಸಂಕಲ್ಪ ಮಾಡೋಣ ಎಂದು ಭಾರತೀಯ ಸೇನೆಯ ನಿವೃತ್ತ ಲ್ಯಾನ್ಸ್ ಹವಿಲ್ದಾರ್ ಸತ್ಯ ಸಾಯಿ ಪ್ರಸನ್ನ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಬ್ರಾಹ್ಮಣ ಸಂಘದ ವತಿಯಿಂದ ಇಲ್ಲಿನ ಗಾಯತ್ರಿ ಪ್ರಾರ್ಥನಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕೋಲಾರ ನಗರದಲ್ಲಿರುವ ಎಲ್ಲ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದ ತಲಾ ಇಬ್ಬರು ಎಸ್ಸೆಸ್ಸೆಲ್ಸಿ ಸಾಧಕರು ಮತ್ತು ತಲಾ ಇಬ್ಬರು ದ್ವಿತೀಯ ಪಿಯುಸಿ ಸಾಧಕರನ್ನು ಪುರಸ್ಕರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದ ಸತ್ಯಸಾಯಿಪ್ರಸನ್ನ, ಶಿಸ್ತು, ಸಂಯಮ ಮತ್ತು ಸಮರ್ಪಣಾ ಭಾವ ಚಿಕ್ಕ ವಯಸ್ಸಿನಲ್ಲೇ ಕಲಿತು ದೇಶದ ಹಿತಕ್ಕಾಗಿ ಮತ್ತು ಸಮಾಜಕ್ಕೆ ಮಾದರಿಯಾಗಿ ಬದುಕುವ ಮನೋಭಾವ ಮಕ್ಕಳಲ್ಲಿ ಬೆಳೆಸುವ ಅಗತ್ಯವಿದೆ. ದೇಶಕ್ಕಾಗಿ ಸೈನಿಕರು ತಮ್ಮ ಜೀವವನ್ನೇ ಒತ್ತೆಯಿಟ್ಟು ಗಡಿಯಲ್ಲಿ ಹೋರಾಟ ಮಾಡುತ್ತಿದ್ದಾರೆ, ಅವರೇ ನಮ್ಮ ಬದುಕಿಗೆ ಪ್ರೇರಣೆಯಾಗಬೇಕು ಎಂದ ಅವರು, ಜಾತಿ,ಧರ್ಮ,ಭಾಷೆ ಎಲ್ಲಕ್ಕಿಂತ ದೇಶವೇ ಮೊದಲು ಎಂದು ನಾವು ಸಂಕಲ್ಪದೊAದಿಗೆ ಸಿದ್ದರಾಗಬೇಕು ಎಂದರು.
ಜಾತಿಗೊ0ದು ಪ್ರತಿಭಾ ಪುರಸ್ಕಾರ ಮಾಡುವ ಈ ದಿನಗಳಲ್ಲಿ ಬ್ರಾಹ್ಮಣ ಸಂಘ ಕೇವಲ ಪ್ರತಿಭೆಗಳನ್ನು ಮಾತ್ರ ನೋಡಿ ಪುರಸ್ಕರಿಸುತ್ತಿದೆ, ಅವರು ಯಾವುದೇ ಜಾತಿ,ಧರ್ಮವಾಗಿರಲು ಅವರಲ್ಲಿ ಸಾಧಕರನ್ನು ಮಾತ್ರ ನೋಡಿ ಗೌರವಿಸುವ ಇಂತಹ ಕೆಲಸ ಮಕ್ಕಳಲ್ಲಿ ಜಾತಿ, ಧರ್ಮದ ಬೇಧ ದೂರಮಾಡಲು ಸಹಕಾರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದೇವರಾಜ್ ಅರಸ್ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಸಮುದ್ಯತಾ, ಪ್ರಸ್ತುತ ಮಕ್ಕಳು ಎದುರಿಸುತ್ತಿರುವ ಸವಾಲುಗಳು ಹಾಗೂ ಒತ್ತಡ ನಿಯಂತ್ರಣಕ್ಕೆ ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದರು.
ಶಿಸ್ತು ಬದ್ಧ ಜೀವನ, ಸಮಯ ಪಾಲನೆ, ಸಹ ಚಟುವಟಿಕೆಗಳು ಮನಸ್ಸಿನ ಉದ್ವೇಗವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದ್ದು ವಿದ್ಯಾರ್ಥಿದೆಸೆಯಿಂದಲೇ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದರು.
ಇ0ದು ಮಕ್ಕಳಲ್ಲಿ ಮೊಬೈಲ್ ಗೀಳು ಮಿತಿ ಮೀರಿದೆ, ಇದರಿಂದ ಅವರು ಹಾದಿ ತಪ್ಪುತ್ತಿದ್ದಾರೆ ಎಂದ ಅವರು, ಸಾಧ್ಯವಾದಷ್ಟು ಮೊಬೈಲ್ ಕಡಿಮೆ ಬಳಕೆಗೆ ಪೋಷಕರು ಪ್ರೇರಣೆ ನೀಡಬೇಕು, ಪುಸ್ತಕ ಓದುವ ಅಭ್ಯಾಸ ಮಕ್ಕಳಲ್ಲಿ ಬೆಳೆಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಾಹ್ಮಣ ಸಂಘದ ಸಹ ಸಂಸ್ಥಾಪಕ ಜಿ.ಎಸ್. ಜಯತೀರ್ಥ, ಸಂಘ ನಡೆದು ಬಂದ ದಾರಿ, ಕಳೆದ ಮೂರು ದಶಕಗಳಿಂದ ಜಾತಿ, ಧರ್ಮಗಳನ್ನು ಮೀರಿ, ಆಯೋಜಿಸಲಾಗುತ್ತಿರುವ ಪ್ರತಿಭಾ ಪುರಸ್ಕಾರದ ಮಹತ್ವವನ್ನು ತಿಳಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಯನ್ನು ಮಾಡಿದ ಟಿವಿ೯ ವರದಿಗಾರ ರಾಜೇಂದ್ರ ಸಿಂಹ, ಮಡಿಲು ಶಾಲೆಯ ಸೌಮ್ಯ, ವಿಭೂತಿಪುರ ನಿವಾಸಿ ಜನಾರ್ಧನರವರನ್ನು ಸನ್ಮಾನಿಸಲಾಯಿತು.
ಚಿತ್ರ;ಕೋಲಾರದ ಬ್ರಾಹ್ಮಣ ಸಂಘದ ವತಿಯಿಂದ ಇಲ್ಲಿನ ಗಾಯತ್ರಿ ಪ್ರಾರ್ಥನಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕರನ್ನು ಪುರಸ್ಕರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್