ಕೋಲಾರ, ೨೫ ಜುಲೈ(ಹಿ.ಸ) :
ಆ್ಯಂಕರ್ : ಕರ್ನಾಟಕದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಆಧುನಿಕೀರಿಸಲು ಸರ್ಕಾರ ಸ್ಮಾರ್ಟ್ ಪಿಡಿಎಸ್ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಬೇಕಾಗಿರುವ ಮೂಲಸೌಕರ್ಯಗಳ ಸ್ಥಾಪನೆ ಹಾಗೂ ನಿರ್ವಹಣೆಗೆ ೩೫ ಕೋಟಿ ಅನುದಾನವನ್ನು ನೀಡಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿಯವರಿಗೆ ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮನವಿ ಸಲ್ಲಿಸಿದರು.
ಸ್ಮಾರ್ಟೀಕರಣದ ಮೂಲಕ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಆಧುನಿಕೀರಿಸುವ ಯೋಜನೆಯಡಿ ಅಂಗಡಿಗಳಲ್ಲಿ ಇಲೆಕ್ಟ್ರಾನಿಕ್ ತೂಕದ ಯಂತ್ರಗಳು ಹಾಗೂ ಪಾಯಿಂಟ್ ಆಫ್ ಸೇಲ್ ಸಾಧನಗಳ ಏಕೀಕರಣವನ್ನು ಜಾರಿಗೊಳಿಸುವುದು ಮುಖ್ಯ ಉದ್ದೇಶವಾಗಿದೆ. ಈ ಕ್ರಮವು ಪಿಡಿಎಸ್ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ತಂತ್ರಜ್ಞಾನ ಆಧಾರಿತ ಸೇವೆಗಳ ಮಾರ್ಗವಾಗಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಭಾರತ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ ರೂ ೨೧ ಸಬ್ಸಿಡಿಯನ್ನು ರಾಜ್ಯಗಳಿಗೆ ನೀಡುವ ಮೂಲಕ ಈ ಯೋಜನೆಗೆ ಬಲ ನೀಡುತ್ತಿದೆ. ಆದರೆ, ಈ ಮೊತ್ತವನ್ನು ಚಿಲ್ಲರೆ ಆಯುಕ್ತದ ಭಾಗವಾಗಿ ಪರಿಗಣಿಸಲಾಗುತ್ತಿದೆ ಎಂಬ ಅಸಮಾಧಾನವನ್ನು ಅಂಗಡಿ ಡೀಲರ್‌ಗಳ ಸಂಘವು ವ್ಯಕ್ತಪಡಿಸಿದೆ. ನಿಜವಾದ ತಾಂತ್ರಿಕ ವೆಚ್ಚ ಮತ್ತು ನಿರ್ವಹಣೆಗೆ ಈ ಮೊತ್ತ ಸಾಕಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ತಾಂತ್ರಿಕ ಸಹಾಯದ ಕೊರತೆ ಹಾಗೂ ನಿರ್ವಹಣಾ ಸವಾಲುಗಳನ್ನು ನಿಭಾಯಿಸಲು, ಡೀಲರ್‌ಗಳ ಸಂಘವು ಈ ಕಾರ್ಯವಿಧಾನವನ್ನು ಕೇಂದ್ರಿಕೃತ ರೀತಿಯಲ್ಲಿ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಈ ಹಿನ್ನೆಲೆಯಲ್ಲಿ ರಾಜ್ಯವು ರೂ೩೫ ಕೋಟಿ ಮೊತ್ತದ ಅನುದಾನಕ್ಕಾಗಿ ಕೇಂದ್ರ ಆಹಾರ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಅನುದಾನ ನೀಡಲು ಕೋರಿದರು.
ಈ ಅನುದಾನದಿಂದ ಸಾಫ್ಟ್‌ವೇರ್‌ನ ಪರಿಣಾಮಕಾರಿ ಜಾರಿಗೆ, ಸಾಧನಗಳ ಖರೀದಿ, ನಿರ್ವಹಣೆ ಹಾಗೂ ರಾಜ್ಯದಾದ್ಯಂತ ಪಿಡಿಎಸ್ ವ್ಯವಸ್ಥೆಯ ಸಮರ್ಥೀಕರಣಕ್ಕೆ ಸಹಕಾರವಾಗಲಿದೆ ಎಂದು ತಿಳಿಸಿದರು.
ಆಹಾರ ಭದ್ರತಾ ಕಾಯ್ದೆಯಡಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನಿಗದಿಪಡಿಸಿರುವ ಫಲಾನುಭವಿಗಳ ಗರಿಷ್ಠ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ವ್ಯಾಪ್ತಿಯಲ್ಲಿನ ಫಲಾನುಭವಿಗಳ ಗರಿಷ್ಟ ಮಿತಿಯನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಪ್ರಸ್ತುತ ಎನ್‌ಎಫ್‌ಎಸ್‌ಎ ಅಡಿಯಲ್ಲಿ ರಾಜ್ಯದಲ್ಲಿ ೪,೦೧,೯೩,೦೦೦ ಫಲಾನುಭವಿಗಳಿದ್ದಾರೆ . ಇದು ೨೦೧೧ರ ಜನಗಣತಿಯ ಆಧಾರದ ಮೇಲೆ ನಿಗದಿಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ೭೫% ಮತ್ತು ನಗರ ಪ್ರದೇಶಗಳಲ್ಲಿ ೫೦% ಜನಸಂಖ್ಯೆ ಒಳಗೊಂಡಿದೆ. ಆದರೆ ಕಳೆದ ಒಂದು ದಶಕದಲ್ಲಿ ರಾಜ್ಯದ ಜನಸಂಖ್ಯೆ ಹಾಗೂ ಕುಟುಂಬಗಳ ವಿಭಜನೆಯಾಗಿರುವ ಹಿನ್ನಲೆಯಲ್ಲಿ ಈ ಗರಿಷ್ಠ ಮಿತಿಯನ್ನು ನವೀಕರಿಸಲು ಅಗತ್ಯವಾಗಿದೆ.
ಇದರ ಹೊರೆತಾಗಿ ರಾಜ್ಯ ಸರ್ಕಾರ ೧೭.೫ ಲಕ್ಷ ಕಾರ್ಡ್ ಗಳನ್ನು ವಿತರಿಸಿದ್ದು ೪೫ ಲಕ್ಷ ಫಲಾನುಭವಿಗಳ ಒಳಗೊಂಡಿದೆ ಈ ಫಲಾನುಭವಿಗಳಿಗೆ ಪ್ರತಿ ತಿಂಗಳು ೧೦ಕೆಜಿ.ಆಹಾರ ಧಾನ್ಯಗಳವೆಚ್ಚವನ್ನು ರಾಜ್ಯ ಸರ್ಕಾರದಿಂದ ಬರಿಸಲಾಗುತ್ತಿದೆ.
೨೦೨೩ರಲ್ಲಿ ಮಾತ್ರವೇ ೨.೯೫ ಲಕ್ಷ ಹೊಸ ಕಾರ್ಡ್ ಅರ್ಜಿಗಳು ಬಂದಿವೆ. ಇದರಲ್ಲಿ ಈಗಾಗಲೇ ೧.೬೫ ಲಕ್ಷ ಕಾರ್ಡ್‌ಗಳನ್ನು ಮಂಜೂರು ಮಾಡಲಾಗಿದೆ. ೧.೯೦ ಲಕ್ಷ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಮತ್ತು ಇನ್ನೂ ೨.೬ ಲಕ್ಷ ಅರ್ಜಿಗಳು ಪರಿಶೀಲನೆಯ ಪ್ರಕ್ರಿಯೆಯಲ್ಲಿವೆ.
ಇನ್ನು ಶಾಸಕರು, ಸಂಸದರು ಹಾಗೂ ಸಾರ್ವಜನಿಕರಿಂದ ನಿರಂತರವಾಗಿ ಹೊಸ ಪಡಿತರ ಕಾರ್ಡ್‌ಗಳ ಬೇಡಿಕೆಗೆ ಮನವಿ ಬಂದಿದ್ದು ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಎನ್‌ಎಫ್‌ಎಸ್‌ಎ ಫಲಾನುಭವಿಗಳ ಮಿತಿಯನ್ನು ೪.೦೧ ಕೋಟಿ ಯಿಂದ ೪.೬೦ ಕೋಟಿ ಯ ಗರಿಷ್ಟ ಮಿತಿ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿಸಲ್ಲಿಸಿದ್ದು, ಅಗತ್ಯ ಕ್ರಮವಹಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಿದರು.
ಚಿತ್ರ : ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸ್ಮಾರ್ಟೀಕರಣಕ್ಕಾಗಿ ೩೫ ಕೋಟಿ ರೂ ಅನುದಾನ ನೀಡಲು ಕೇಂದ್ರ ಸರ್ಕಾರಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಮನವಿ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್