ಬೆಂಗಳೂರು, 17 ಜುಲೈ (ಹಿ.ಸ.) :
ಆ್ಯಂಕರ್ : ಅಧಿಕ ಬಡ್ಡಿ ನೀಡುವುದಾಗಿ ಗ್ರಾಹಕರಿಗೆ ಆಮಿಷವೊಡ್ಡಿ ಸುಮಾರು ₹100 ಕೋಟಿ ರೂ. ವಂಚಿಸಲಾಗಿದೆ” ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹಲವೆಡೆ ಶಾಖೆ ಹೊಂದಿರುವ ಖಾಸಗಿ ಸಹಕಾರಿ ಸೊಸೈಟಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ವಿಜಯನಗರ, ಜಾಲಹಳ್ಳಿ, ಆರ್‌ಪಿಸಿ ಲೇಔಟ್ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ದಾಳಿ ನಡೆದಿದ್ದು, ಪಿಎಂಎಲ್‌ಎ (ಹಣ ವರ್ಗಾವಣೆ ತಡೆ ಕಾಯ್ದೆ) 2002ರ ಅಡಿಯಲ್ಲಿ ತನಿಖೆ ಮುಂದುವರಿದಿದೆ.
ವಿಲ್ಸನ್ ಗಾರ್ಡನ್‌ನಲ್ಲಿ ಕೇಂದ್ರ ಕಚೇರಿಯುಳ್ಳ ಸಹಕಾರಿ ಸೊಸೈಟಿ ಆಗಿದ್ದು, 1998ರಲ್ಲಿ ಪೀಣ್ಯದಲ್ಲಿ ಆರಂಭವಾಗಿ, ನಗರದ ಹಲವು ಭಾಗಗಳಲ್ಲಿ ಶಾಖೆಗಳನ್ನೆ ತೆರೆಯಲಾಗಿತ್ತು. ಇತರ ಬ್ಯಾಂಕುಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿ ನೀಡುವುದಾಗಿ ಹೇಳಿ ಸುಮಾರು 15,000ಕ್ಕೂ ಅಧಿಕ ಠೇವಣಿದಾರರಿಂದ ಕೋಟ್ಯಂತರ ರೂಪಾಯಿ ಹಣವನ್ನು ಸಂಗ್ರಹಿಸಲಾಗಿತ್ತು. ಈ ಹಣವನ್ನು ಮೂಲ ಉದ್ದೇಶಕ್ಕೆ ಬಳಸದೆ ಇತರ ವ್ಯವಹಾರಗಳಿಗೆ ಬಳಕೆ ಮಾಡಲಾಗಿದೆಯೆಂಬ ಗಂಭೀರ ಆರೋಪ ಕೇಳಿಬಂದಿತ್ತು.
ವಂಚನೆ ಪ್ರಕರಣದಲ್ಲಿ 5 ಜನರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿತ್ತು. ಸಿಸಿಬಿ 2022ರಲ್ಲಿಯೇ ಆ ಐವರನ್ನು ಬಂಧಿಸಿತ್ತು. ತನಿಖೆ ವೇಳೆ ಸಿಸಿಬಿ ಈ ಪ್ರಕರಣದ ಮಾಹಿತಿ ಆದಾಯ ತೆರಿಗೆಮತ್ತು ಜಾರಿ ನಿರ್ದೇಶನಾಲಯಕ್ಕೆ ನೀಡಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa