ಕೋಲಾರ , 15 ಜುಲೈ (ಹಿ.ಸ.) :
ಆ್ಯಂಕರ್ : ಜಿಲ್ಲಾ ಪಂಚಾಯಿತಿಯ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ (ದಿಶಾ) ಸಭೆಯು ಕೋಲಾರ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಸಂಸದ ಎಂ. ಮಲ್ಲೇಶ್ ಬಾಬು ಅಧ್ಯಕ್ಷತೆಯಲ್ಲಿ ನಡೆಯಿತು.
ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಜತೆಗೆ, ರಾಜ್ಯ ಸರ್ಕಾರದ ಕಾರ್ಯಕ್ರಮಗಳು, ಕಾಮಗಾರಿಗಳ ಪರಿಶೀಲನೆ, ಹಿಂದಿನ ಸಭೆಯ ಅನುಪಾಲನೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಕೆಲ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಕೊಂಡಾಡಿದ ಸಂಸದ ಎಂ.ಮಲ್ಲೇಶ್ ಬಾಬು ಕೆಲ ಅಧಿಕಾರಿಗಳ ಕಾರ್ಯವೈಖರಿಗೆ ಕಿಡಿಕಾರಿದರು. ವಿವಿಧ ಕೆಲಸ ಕಾರ್ಯಗಳ ಕುರಿತು ಕೆಲ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ಅವರು ನೀಡಿದರು.
ರೈಲ್ವೆ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿರುವ ಬಗ್ಗೆ ಅವರು ಸಭೆಯಲ್ಲಿದ್ದ ಕಿರಿಯ ಹಂತದ ರೈಲ್ವೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕೋಲಾರ ಜಿಲ್ಲೆ ನಿರಾಶೆ ಮಾಡಿರುವುದು ಸಭೆಯಲ್ಲಿ ಚರ್ಚೆಯಾಯಿತು.
ಈ ಬಗ್ಗೆ ಸಂಸದ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ವಿಮರ್ಶೆಗೆ ಗುರಿಯಾಗಿಸಿದರು.
ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಶಿಕ್ಷಣ ಎಂದರೆ ಬರಿ ಕಟ್ಟಡಗಳ ನಿರ್ಮಾಣವಲ್ಲ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಟೀಕಿಸಿದರು.
ಈ ವರೆಗೆ ಆಗಿರುವುದನ್ನು ಬಿಟ್ಟು ಮುಂದೆ ಆಗಬೇಕಾದ್ದನ್ನು ಗಮನಿಸಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ತಾಕೀತು ಮಾಡಿದರು.
ರಾಷ್ಟ್ರೀಯ ಹೆದ್ದಾರಿ-೭೫ರಲ್ಲಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಮಾರ್ಚ್ ೨೦೨೫ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಬೇಕಾದ ಕಾಮಗಾರಿಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಇದರಿಂದಾಗಿ ರಸ್ತೆ ಅಪಘಾತಗಳಾಗುತ್ತಿವೆ ಎಂದು ಸಂಸದರು ಸಭೆಗೆ ತಿಳಿಸಿದರು.
ಜಿಲ್ಲಾಧಿಕಾರಿ ಡಾ. ರವಿ ಅವರು ಮಾತನಾಡಿ ಮಾನ್ಯ ಉಸ್ತುವಾರಿ ಸಚಿವರ ಅಧ್ಯಕ್ಷತೆ ಯಲ್ಲಿ ಕೆ ಡಿ ಪಿ ಸಭೆ ವೇಳೆಗೆ ಜಂಟಿ ಸರ್ವೇ ನಡೆಸಿ ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸಲು ಹಾಗೂ ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ತಾಕೀತು ಮಾಡಿದರು.
ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ವಿಧಾಸಭಾ ಕ್ಷೇತ್ರಗಳಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸಿರುವ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಬಡವರ ಜಮೀನನ್ನು ಅರಣ್ಯ ಒತ್ತುವರಿ ನೆಪದಲ್ಲಿ ತೆರವು ಮಾಡುತ್ತಿದೆ ಸಾಗುವಳಿ ಚೀಟಿ ಪಡೆದುಕೊಂಡು ಕೃಷಿಗೆ ಬಳಸಲಾಗುತ್ತಿದ್ದ ಟ್ರಾಕ್ಟರ್ ನ್ನು ವಶಪಡಿಸಿಕೊಳ್ಳಲಾಗಿದೆ. ಕೂಡಲೇ ಒತ್ತುವರಿ ತೆರವು ಕಾರ್ಯಚರಣೆ ಸ್ಥಗಿತಗೊಳಿಸಿ ಜಂಟಿ ಸರ್ವೇ ನಡೆಸಿ ನಂತರ ಮುಂದುವರೆಯಲು ಆದೇಶಿಸುವಂತೆ ಸಭೆಗೆ ತಿಳಿಸಿದರು.
ವಿಧಾನ ಪರಿಷತ್ ಶಾಸಕ ಇಂಚರ ಗೋವಿಂದರಾಜು ಅವರು ದನಿಗೂಡಿಸಿದರು.
ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಸುಪ್ರೀಂ ಕೋರ್ಟ್ ಆದೇಶದಂತೆ ಒತ್ತುವರಿ ತೆರವು ಕಾರ್ಯಚರಣೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಹಿಂಜರಿಯುವ ಪ್ರಮೇಯ ಇಲ್ಲ ಎಂದು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸರಿನಾ ಸಿಕ್ಕಲಿಗರ್ ಅವರು ಉತ್ತರಿಸಿದರು. ಈ ಪ್ರತಿಕ್ರಿಯೆಗಾಗಿ ಸಭೆಯಲ್ಲಿ ಕೆಲಕಾಲ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.
ಜಲಜೀವನ್ ಮಿಷನ್ ಅಡಿ ಹಲವು ಗ್ರಾಮಗಳಿಗೆ ನೀರಿನ ಪೂರೈಕೆ ಆಗುತ್ತಿಲ್ಲ. ಹಲವು ಕಾಮಗಾರಿಗಳನ್ನು ಈವರೆಗೆ ಕೈಗೆತ್ತಿಕೊಂಡಿಲ್ಲ ಎಂದು ವಿಧಾನ ಪರಿಷತ್ ಶಾಸಕ ಎಂ.ಎಲ್. ಅನಿಲ್ ಕುಮಾರ್ ಆಗ್ರಹಿಸಿದರು ಇದಕ್ಕೆ ಕೋಲಾರ ಶಾಸಕ ಡಾ. ಕೊತ್ತೂರ್. ಜಿ ಮಂಜುನಾಥ್ ದನಿಗೂಡಿಸಿದರು.
ಮೊದಲು ಓವರ್ ಹೆಡ್ ಟ್ಯಾಂಕ್ಗಳನ್ನು ನಿರ್ಮಿಸಿ, ಕೊಳವೆಬಾವಿ ಕೊರೆಸಿ ನಂತರ ಪೈಪ್ಲೈನ್ ಕಾಮಗಾರಿ ಕೈಗೊಳ್ಳಬೇಕು ಎಂದು ಸಂಸದರು ತಿಳಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಅನುದಾನವನ್ನು ನೀಡುತ್ತಿದ್ದು ಸುಮಾರು ೧೫೦ ಕೂ ಹೆಚ್ಚಿನ ಮನೆಗಳಿಗೆ ಎರೆಡೆರಡು ಬಿಲ್ ಗಳು ಪಾವತಿ ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು ಫಲಾನುಭವಿಗಳನ್ನು ಮಾನದಂಡಗಳ ಪ್ರಕಾರ ಆಯ್ಕೆ ಮಾಡುವಂತೆ ತಿಳಿಸಿದರು.
ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತನಾಡಿ ಇಕೋ ಅನುಧಾನ, ಕ್ರೀಡಾ ಅನುದಾನ, ಸೇರಿದಂತೆ ಸಿವಿಲ್ ಕಾಮಗಾರಿಗಳು ನಡೆಯುತ್ತಿದ್ದು ೭ ಶಾಲೆಗಳಿಗೆ ಅನುಧಾನ ಬಿಡುಗಡೆಯಾಗಿದೆ ೪ ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ ಅನುಧಾನದಲ್ಲಿ ಕರಾಟೆ ಅನುಧಾನ, ಅಟಲ್ ಟಿಂಕರಿಂಗ್ ಲ್ಯಾಬ್ ನಿರ್ಮಾಣ ಮಾಡಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ಮುಳಬಾಗಿಲು ಶಾಸಕರಾದ ಸಮೃದ್ಧಿ ಮಂಜುನಾಥ್ ಅವರು ಮಾತನಾಡಿ ಅಧಿಕಾರಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ ಅದನ್ನೆಲ್ಲ ಬಿಟ್ಟು ಸರ್ಕಾರಿ ಶಾಲೆಗಳನ್ನು ಕಾಪಾಡುವ ಕೆಲಸವನ್ನು ಮಾಡುವಂತೆ ತಿಳಿಸಿದರು.
ತೋಟಗಾರಿಕಾ ಇಲಾಖೆ ಅಧಿಕಾರಿ ಕುಮಾರಸ್ವಾಮಿ ಅವರು ಮಾತನಾಡಿ ಮಾವಿನ ಬೆಂಬಲ ಬೆಲೆ ಪಡೆಯಲು ೯೧೮೦ ರೈತರು ಅರ್ಜಿಯನ್ನು ಸಲ್ಲಿಸಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ ಅದರಲ್ಲಿ ೪೫೦೦ ಜನರು ಬಿಲ್ಗಳನ್ನು ನೀಡಿದ್ದಾರೆ, ಅದರಲ್ಲಿ ೫ ರೈತರಿಗೆ ಡಿಬಿಟಿ ಮೂಲಕ ಹಣವನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.
ಒಬ್ಬರೈತರಿಂದ ಒಂದು ಎಕರೆಗೆ ೫ ಟನ್, ಎರಡು ಎಕರೆಗೆ ೧೦ ಟನ್ ವರೆಗೂ ಖರೀದಿ ಮಾಡಲು ಅವಕಾಶ ಇದೆ ಇದನ್ನು ರೈತರು ಉಪಯೋಗಿಸಿಕೊಳ್ಳುವಂತೆ ತಿಳಿಸಿದರು.
ಅಬಕಾರಿ ಇಲಾಖೆ ಕುರಿತು ಸಮೃದ್ಧಿ ಮಂಜುನಾಥ್ ಅವರು ಮಾತನಾಡಿ ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿ ಒಂದು ತಾಲ್ಲೂಕಿಗೆ ಎಷ್ಟಾದರೂ ಸಿಎಲ್ ೭ ಗಳಿಗೆ ಅನುಮತಿ ನೀಡಬಹುದ ಎಂದು ಕೇಳಿದರು.
ನಮ್ಮ ಜಿಲ್ಲೆಯಲ್ಲಿ ಅಬಕಾರಿ ಆದಾಯ ಯಾಕೆ ಕಡಿಮೆ ಆಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ ನಮ್ಮ ಜಿಲ್ಲೆಯು ಆಂಧ್ರಪ್ರದೇಶಕ್ಕೆ ಹೊಂದುಕೊಂಡಿದ್ದು, ಆಂಧ್ರಪ್ರದೇಶದಲ್ಲಿ ಮಧ್ಯದ ದರ ಕಡಿಮೆ ಇರುವುದರಿಂದ ಜನರು ಗಡಿಭಾಗದಲ್ಲಿ ಮಧ್ಯ ಖರೀದಿ ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ ಆದಾಯ ಕಡಿಮೆ ಆಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಮದ್ಯ ಮಾರಾಟ ನಡೆಯದಂತೆ ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೋಲಾರ ವಿಭಾಗ ನಿಯಂತ್ರಣ ಅಧಿಕಾರಿ ಮಾತನಾಡಿ ನೂತನವಾಗಿ ನಗರದಲ್ಲಿ ಸಾರಿಗೆಯನ್ನು ಪ್ರಾರಂಭ ಮಾಡಿರುವುದಾಗಿ ತಿಳಿಸಿದರು ನಂತರ ಸಂಸದರಾದ ಮಲ್ಲೇಶ್ ಬಾಬು ಅವರು ಮಾತನಾಡಿ ಇತ್ತೀಚಿಗೆ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಸುಮಾರು ೬೦೦೦ ವಿದ್ಯುತ್ ಚಾಲಿತ ಬಸ್ಗಳು ಉದ್ಘಾಟನೆ ಮಾಡಿದರು ಅದರಲ್ಲಿ ಕೋಲಾರಕ್ಕೆ ಬರುತ್ತದಾ ಎಂದು ಕೇಳಿದಾಗ ಸದ್ಯಕ್ಕೆ ಇಲ್ಲ ಮುಂದಿನ ದಿನಗಳಲ್ಲಿ ಬರಬಹುದು ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಕುರಿತು ಮಾತನಾಡಿ ನಗರದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಮತ್ತು ಕೆಲವು ಕಡೆ ಮನೆಗಳಲ್ಲಿಯೇ ಅಕ್ರಮವಾಗಿ ಪಿಜಿ ಸೆಂಟರ್ ನಡೆಸುತ್ತಿದ್ದಾರೆ. ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಇತ್ತೀಚಿಗೆ ಕೈಗಾರಿಕೆ ಪ್ರದೇಶಗಳಲ್ಲಿ ಹೊರ ರಾಜ್ಯದ ಯುವಕರು ಬಂದು ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹವರ ಮೇಲೆ ನಿಗಾವಹಿಸಬೇಕು ಎಂದು ತಿಳಿಸಿದರು.
ಇದರ ಬಗ್ಗೆ ಮಾತನಾಡಿದ ಅಡಿಶ್ನಲ್ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಅವರು ಮಾತನಾಡಿ ನಾವು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು ಸಿಸಿ ಕ್ಯಾಮರಾ ಅಳವಡಿಸುವುದಾಗಿ ತಿಳಿಸಿದ್ದೇವೆ ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮದೊಂದಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀನಿವಾಸ್ ಅವರು ಮಾತನಾಡಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗದವರು ಇರುವಂತಹ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು. ಶಾಸಕರಾದ ವೆಂಕಟಶಿವರೆಡ್ಡಿ ಅವರು ಮಾತನಾಡಿ ಜಿಲ್ಲೆಯ ಅನೇಕ ಭಾಗಗಳಲ್ಲಿ ಸಮುದಾಯ ಭವನಗಳ ನಿರ್ಮಾಣ ಬಾಕಿ ಇದೆ ಅದನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಮುಳಬಾಗಿಲು ಶಾಸಕ ಸಂವೃದ್ದು ಮಂಜುನಾಥ್ ಅವರು ಮಾತನಾಡಿ ಇತ್ತೀಚಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ನಡೆದಂತಹ ಅಮಾನವೀಯ ಘಟನೆ ಎಲ್ಲರಿಗೂ ನೋವು ಕೋಡುವಂತಹ ವಿಷಯವಾಗಿದೆ. ಆದರೆ ಆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿರುವುದು ಸಮಂಜಸವಲ್ಲ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿಧಾನಸಭಾ ಸದಸ್ಯರಾದ ಕೋತ್ತೂರು ಜಿ.ಮಂಜುನಾಥ್, ಎಸ್.ಎನ್. ನಾರಾಯಣಸ್ವಾಮಿ, ಸಮೃದ್ಧಿ ಮಂಜುನಾಥ್, ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗರ್, ಎ.ಡಿ.ಎಸ್.ಪಿ.ಜಗದೀಶ್, ಯೋಜನ ನಿರ್ದೇಶಕರು, ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಚಿತ್ರ :ಕೋಲಾರ ಸಂಸದ ಎಂ. ಮಲ್ಲೇಶ್ ಬಾಬು ಅಧ್ಯಕ್ಷತೆಯಲ್ಲಿ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ (ದಿಶಾ) ಸಭೆ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್