ಹುಬ್ಬಳ್ಳಿ, 15 ಜುಲೈ (ಹಿ.ಸ.) :
ಆ್ಯಂಕರ್ : ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕಟ್ನೂರು ಹಾಗೂ ಹಳ್ಯಾಳ ಗ್ರಾಮಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್ ಅವರು ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಮಾವನೂರು ಗ್ರಾಮದ ಬಹುಗ್ರಾಮ ಕುಡಿಯುವ ನೀರು ಸ್ಥಾವರದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅವರು, ಜಾಕ್ವೆಲ್ ಸುತ್ತಲೂ ಸ್ವಚ್ಛತೆ ಕಾಪಾಡಿ, ರಿಟೈನಿಂಗ್ ವಾಲ್ ನಿರ್ಮಿಸುವಂತೆ ಸೂಚಿಸಿದರು. ಪ್ಯಾನಲ್ ಬೋರ್ಡ್ ದುರಸ್ತಿ, ಬೋರ್‌ವೆಲ್ ನೀರಿನ ಬಳಕೆ ತಗ್ಗಿಸಿ ಜೆಜೆಎಂ ಮೂಲಕ ನೀರು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮನೆ ಮನೆಗೆ ಭೇಟಿ ನೀಡಿ ಯೋಜನೆಯಡಿ ನೀರು ಸರಿಯಾಗಿ ಪೂರೈಕೆಯಾಗುತ್ತಿರುವುದನ್ನು ಪರಿಶೀಲಿಸಿದ ಅವರು, ಗ್ರಾಮ ಪಂಚಾಯತಿ ಸಿಬ್ಬಂದಿಯ ಹಾಜರಾತಿ ತಪಾಸಿಸಿ ತಡ ಹಾಜರಾತಿಗೆ ನೋಟಿಸ್ ನೀಡಲು ತಾಪಂ ಅಧಿಕಾರಿಗಳಿಗೆ ಸೂಚಿಸಿದರು. ತೆರಿಗೆ ವಸೂಲಾತಿ ಕುಂಠಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಕ್ರಮಕ್ಕೆ ಸೂಚಿಸಿದರು.
ಅಂಗನವಾಡಿ ಕೇಂದ್ರ, ಆರೋಗ್ಯ ಮೇಳ, ಶಾಲೆಗಳಿಗೆ ಭೇಟಿ ನೀಡಿದ ಸಿಇಒ ಅವರು ಆಹಾರದ ಗುಣಮಟ್ಟ, ಮಕ್ಕಳ ತೂಕ, ಆರೋಗ್ಯ ಪರಿಶೀಲನೆ ಸೇರಿದಂತೆ ಪರಿಸರ ಸಂರಕ್ಷಣೆ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಸಂಜೀವಿನಿ ಘಟಕದಲ್ಲಿನ ಮಹಿಳಾ ಸ್ವಸಹಾಯ ಸಂಘಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅನೇಕ ಇಲಾಖೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa