ಬೆಂಗಳೂರು, 12 ಜುಲೈ (ಹಿ.ಸ.) :
ಆ್ಯಂಕರ್ : ಭಾರತದ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಆಲೂಗಡ್ಡೆ ರಫ್ತು ವಲಯದಲ್ಲೂ ಮುಂಚೂಣಿಯಲ್ಲಿದ್ದು, ದೇಶದ ಆರ್ಥಿಕತೆಗೆ ಬಲ ತುಂಬಿದೆ.
ಭಾರತದಲ್ಲಿ ಆಲೂಗಡ್ಡೆ ಬೆಳೆ 2024-25ರ ಆರ್ಥಿಕ ವರ್ಷದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಕಂಡು ಬಂದಿದೆ. ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಪ್ರಾಥಮಿಕ ವರದಿ ಪ್ರಕಾರ 2024-25 ರಲ್ಲಿ ಬರೋಬ್ಬರಿ 60.17 ಮಿಲಿಯನ್ ಟನ್ ಆಲೂಗಡ್ಡೆ ಉತ್ಪಾದಿಸಿದೆ. ಇದು ಕಳೆದ ವರ್ಷಕ್ಕಿಂತ ಶೇ.4ರಷ್ಟು ಉತ್ಪಾದನೆಯನ್ನು ಹೆಚ್ಚಾಗಿಸಿದೆ.
ಆಲೂಗಡ್ಡೆಯನ್ನು ಆಹಾರಕ್ಕಾಗಿ ಹಾಗೂ ಖಾದ್ಯಗಳಿಗಾಗಿ ಹೆಚ್ಚು ಹೆಚ್ಚು ಬಳಸುತ್ತಿದ್ದು, ಈಗ ಆಹಾರ ಸಂಸ್ಕರಣೆ, ಖಾದ್ಯೋದ್ಯಮ ಮತ್ತು ನಿರುದ್ಯೋಗ ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಮೂಲಕ ಆರ್ಥಿಕ ಶಕ್ತಿಯ ಕೇಂದ್ರಬಿಂದುವಾಗಿದೆ ಈ ಬೆಳೆ-ಉತ್ಪನ್ನ.
ದೇಶದ ಆಹಾರೋತ್ಪನ್ನದ ಮೌಲ್ಯ ಸ್ಥಿರತೆ ಮತ್ತು ಗ್ರಾಮೀಣ ಆರ್ಥಿಕತೆಗೂ ಸಹಾಯಕವಾಗಿದೆ ಆಲೂಗಡ್ಡೆ ಬೆಳೆ. ಇದರ ಸಂಸ್ಕರಣಾ ಮತ್ತು ಉಪ ಉತ್ಪನ್ನಗಳ ಮೂಲಕ ಅಸಂಖ್ಯಾತ ಜನಕ್ಕೆ ಉದ್ಯೋಗ ಕಲ್ಪಿಸಿದೆ.
*ಆಲೂಗಡ್ಡೆಯಲ್ಲಿ 2024–25ರಲ್ಲಿ ದಾಖಲೆ ಮಟ್ಟದ ಬೆಳವಣಿಗೆ:*
2023-24ರ ಆರ್ಥಿಕ ವರ್ಷದಲ್ಲಿ ಭಾರತ 59.74 ಮಿಲಿಯನ್ ಟನ್ ಆಲೂಗಡ್ಡೆಯನ್ನು ಉತ್ಪಾದಿಸಿತ್ತು. ಇದೀಗ ಬರೋಬ್ಬರಿ 60.17 ಮಿಲಿಯನ್ ಟನ್ ಉತ್ಪಾದಿಸಿದ್ದು, ಈ ಬೆಳವಣಿಗೆ ರೈತರ ಆದಾಯ ಹೆಚ್ಚಳ ಮತ್ತು ದೇಶದ ಆಹಾರ ಮೌಲ್ಯ ಸ್ಥಿರತೆಯತ್ತ ಮಹತ್ವದ ಹೆಜ್ಜೆಯಾಗಿದೆ.
ದೇಶದಲ್ಲಿ ಉತ್ತರ ಪ್ರದೇಶ ಒಂದೇ ಆಲೂಗಡ್ಡೆ ಉತ್ಪಾದನೆಯಲ್ಲಿ 18.5 ಮಿಲಿಯನ್ ಟನ್ ಉತ್ಪಾದಿಸಿ ಅಗ್ರ ಸ್ಥಾನದಲ್ಲಿದೆ. ಇದು ದೇಶದ ಒಟ್ಟಾರೆ ಉತ್ಪಾದನೆಯಲ್ಲಿ ಶೇ.31ರಷ್ಟು ಪಾಲು ಹೊಂದಿದ್ದು, ಅಗ್ರಸ್ಥಾನ ಪಡೆದುಕೊಂಡಿದೆ. ಉಳಿದಂತೆ ಪಶ್ಚಿಮ ಬಂಗಾಳ 13 , ಬಿಹಾರ 8.5, ಮಧ್ಯಪ್ರದೇಶ 4.5, ಪಂಜಾಬ್ ಮತ್ತು ಗುಜರಾತ್ ತಲಾ 2.5 ಮಿಲಿಯನ್ ಟನ್ ಆಲೂಗಡ್ಡೆ ಉತ್ಪಾದನೆ ಕೊಡುಗೆ ನೀಡಿವೆ.
ಇನ್ನು, ಅಂತರಾಷ್ಟ್ರೀಯ ರಫ್ತು ಮಾರುಕಟ್ಟೆ ಭಾರತೀಯ ಆಲೂಗಡ್ಡೆ ಬೆಳೆಗಾರರಿಗೆ ಹೊಸ ಮಾರ್ಗವಾಗಿದೆ. 2024–25ರಲ್ಲಿ ಭಾರತ 3.2 ಲಕ್ಷ ಟನ್ ಆಲೂಗಡ್ಡೆಯನ್ನು ವಿದೇಶಕ್ಕೆ ರಫ್ತು ಮಾಡಿದ್ದು, ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಆಲೂಗಡ್ಡೆಗೆ ಇರುವ ಬೇಡಿಕೆಯನ್ನು ತೋರಿಸುತ್ತದೆ.
ಮಲೇಷಿಯಾ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಯುಎಇ ಮುಂತಾದ ದೇಶಗಳು ಭಾರತದ ಆಲೂಗಡ್ಡೆ ರುಚಿ ಕಂಡಿದ್ದು, ನಮ್ಮ ಆಲೂಗಡ್ಡೆ ಮತ್ತು ಸಂಸ್ಕರಣಾ ಅಗಾರೋತ್ಪನ್ನಗಳಿಗೆ ಅತ್ಯಧಿಕ ಬೇಡಿಕೆ ಇಡುತ್ತಿರುವ ರಾಷ್ಟ್ರಗಳಾಗಿವೆ.
*ತಂತ್ರಜ್ಞಾನದಿಂದ ರೈತರಿಗೆ ಹೊಸ ಬಲ:* ಆಲೂಗಡ್ಡೆ ಬೆಳೆಯಲ್ಲಿ ಅಳವಡಿಸಿಕೊಂಡ ತಂತ್ರಜ್ಞಾನ ಮತ್ತು ಇದರಲ್ಲಿ ಇತರೆ ಆಹಾರೋತ್ಪನ್ನಗಳ ಮೌಲ್ಯವರ್ಧನೆಯಿಂದಾಗಿ ರೈತರಿಗೆ ಆದಾಯ ವೃದ್ಧಿಗೆ ಸಹ ದಾರಿಯಾಗಿದೆ. Pepsi Co India, CropIn Technologies ಮುಂತಾದ ಸಂಸ್ಥೆಗಳು AI ಆಧಾರಿತ ಬಿತ್ತನೆ, ರೋಗ ನಿಯಂತ್ರಣ ಮತ್ತು ಭೂಮಿ ಅವಲೋಕನ ತಂತ್ರಜ್ಞಾನಗಳನ್ನು ನೀಡಿದ ಪರಿಣಾಮ, ರೈತರಲ್ಲಿ ಹೆಚ್ಚಿನ ಉತ್ಪಾದನೆಗೆ ಸಹಕಾರಿಯಾಗಿದೆ. ಇದರ ಜೊತೆಗೆ ನವೀನ ಹೈಬ್ರಿಡ್ ಬೀಜ, ಸಕಲಿಕವಾಗಿ ಬೆಳೆ ನಿರ್ವಹಣೆ ಹಾಗೂ ಕೇಂದ್ರ ಸರ್ಕಾರದ ಫಸಲ್ ಬಿಮಾದಂತಹ ಬೆಳೆ ವಿಮೆ ಯೋಜನೆಗಳು ರೈತರಿಗೆ ಮತ್ತಷ್ಟು ಬಲ ನೀಡಿವೆ.
ಕೇಂದ್ರ ಸರ್ಕಾರದ Operation Greens – TOP (Tomato, Onion, Potato) ಯೋಜನೆಗಳು ಹಾಗೂ ಉತ್ತರ ಪ್ರದೇಶದ ಆಗ್ರಾದಲ್ಲಿ ಅಂತರಾಷ್ಟ್ರೀಯ ಆಲೂಗಡ್ಡೆ ಪ್ರಾದೇಶಿಕ ಕೇಂದ್ರ (CIP) ಸ್ಥಾಪನೆ ರೈತರಿಗೆ ಬಂಪರ್ ಕೊಡುಗೆಯಾಗಿದೆ.
ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರಗಳ (CSARC) ಭಾಗವಾಗಿ ಸ್ಥಾಪನೆಗೊಂಡ ಈ ಅಂತಾರಾಷ್ಟ್ರೀಯ ಘಟಕ ಆಲೂಗಡ್ಡೆ ಉತ್ಪಾದಕರಿಗೆ ವ್ಯವಸ್ಥಾಪನಾ, ನೇರ ಮಾರಾಟ ಸೌಲಭ್ಯ, ಶೀತಲೀಕರಣ-ಸಂಗ್ರಹಣಾ ಘಟಕಗಳ ಸ್ಥಾಪನೆ ಮತ್ತು ರೈತ ಉತ್ಪಾದಕರ ಸಂಸ್ಥೆಗಳ ಬಲವರ್ಧನೆಗೆ ಹೆಚ್ಚು ಆದ್ಯತೆ ನೀಡಲಾಗಿದೆ.
*ಆಗ್ರಾದಲ್ಲಿ ಅಂತರಾಷ್ಟ್ರೀಯ ಆಲೂಗಡ್ಡೆ ಕೇಂದ್ರ ಹೂಡಿಕೆಗೆ ಆಕರ್ಷಣೆ:* ಉತ್ತರ ಪ್ರದೇಶದ ಆಗ್ರಾದಲ್ಲಿ ಅಂತರಾಷ್ಟ್ರೀಯ ಆಲೂಗಡ್ಡೆ ಕೇಂದ್ರ (CIP)ದ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರಗಳ (CSARC) ಸ್ಥಾಪನೆಯಿಂದಾಗಿ ಭಾರತದ ಕೃಷಿ ಮತ್ತು ಆಹಾರೋತ್ಪನ್ನ ವಲಯದಲ್ಲಿ ಹೆಚ್ಚು ಹೆಚ್ಚು ಹೂಡಿಕೆಯನ್ನೂ ಆಕರ್ಷಿಸಲಿದೆ.
ಭಾರತದಲ್ಲಿ ಆಲೂಗಡ್ಡೆ ವಲಯವು ಉತ್ಪಾದನೆ, ಮೌಲ್ಯವರ್ದಿತ ಆಹಾರ ಪದಾರ್ಥ, ಪೌಷ್ಟಿಕಾಂಶ ಭರಿತ ಆಹಾರ ಭದ್ರತೆ, ರೈತರ ಆದಾಯ, ಆಹಾರ ಸಂಸ್ಕರಣೆ, ಪ್ಯಾಕೇಜಿಂಗ್, ಸಾರಿಗೆ, ಮಾರುಕಟ್ಟೆ ಇತ್ಯಾದಿಗಳಲ್ಲಿ ಗಮನಾರ್ಹ ಉದ್ಯೋಗಾವಕಾಶ ಸಹ ಸೃಷ್ಟಿಸಲಿದೆ.
ಭಾರತ ಈಗ ಚೀನಾದ ನಂತರ ವಿಶ್ವದ ಎರಡನೇ ಅತಿ ದೊಡ್ಡ ಆಲೂಗಡ್ಡೆ ಉತ್ಪಾದಕ ರಾಷ್ಟ್ರವಾಗಿದೆ. ಜಾಗತಿಕ ಉತ್ಪಾದನೆಯಲ್ಲಿನ ಶೇ.12ರಷ್ಟು ಪಾಲನ್ನು ಹೊಂದಿದೆ ಭಾರತ. ಆಲೂಗಡ್ಡೆ ಕೃಷಿಯ ಬೆಳವಣಿ ದೇಶದ ಕೃಷಿ ಭದ್ರತೆ, ತಂತ್ರಜ್ಞಾನ ಪ್ರವೇಶ ಮತ್ತು ಗ್ರಾಮೀಣ ಆರ್ಥಿಕ ಪ್ರಗತಿಯ ಸೂಚಕವಾಗಿದೆ.
ಸರ್ಕಾರ ಮತ್ತು ಖಾಸಗಿ ವಲಯಗಳ ಸಮನ್ವಯದಿಂದ, ಭಾರತ ಆಲೂಗಡ್ಡೆ ಕ್ಷೇತ್ರದಲ್ಲಿ ಭವಿಷ್ಯದ ಜಾಗತಿಕ ನಾಯಕತ್ವದ ಶಕ್ತಿಯಾಗಿ ಹೊರ ಹೊಮ್ಮುಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa