ವಿದೇಶಿ ಹೂಡಿಕೆಗೆ ಭಾರತ ʼಹಾಟ್‌ಸ್ಪಾಟ್'
ಬೆಂಗಳೂರು, 09 ಜುಲೈ (ಹಿ.ಸ.) : ಆ್ಯಂಕರ್ : ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತ ಹೂಡಿಕೆದಾರರಿಗೆ ಹೊಸ ಆಶಾಕಿರಣವಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಕೈಗೊಂಡ ರಚನಾತ್ಮಕ ಆರ್ಥಿಕಾ ಸುಧಾರಣಾ ಕ್ರಮಗಳು, ಸುಧಾರಿತ ನೀತಿ-ನಿಯಮ ಹಾಗೂ ಡಿಜಿಟಲ್‌ ಪರ್ವದತ್ತ ಇಟ್ಟ ದಿಟ್ಟ ಹೆಜ್ಜೆಗಳಿಂದಾಗಿ ಭಾರತ ಈಗ ಜಾಗತ
Fdi


ಬೆಂಗಳೂರು, 09 ಜುಲೈ (ಹಿ.ಸ.) :

ಆ್ಯಂಕರ್ : ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತ ಹೂಡಿಕೆದಾರರಿಗೆ ಹೊಸ ಆಶಾಕಿರಣವಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಕೈಗೊಂಡ ರಚನಾತ್ಮಕ ಆರ್ಥಿಕಾ ಸುಧಾರಣಾ ಕ್ರಮಗಳು, ಸುಧಾರಿತ ನೀತಿ-ನಿಯಮ ಹಾಗೂ ಡಿಜಿಟಲ್‌ ಪರ್ವದತ್ತ ಇಟ್ಟ ದಿಟ್ಟ ಹೆಜ್ಜೆಗಳಿಂದಾಗಿ ಭಾರತ ಈಗ ಜಾಗತಿಕ ಹೂಡಿಕೆದಾರರಿಗೆ ಪ್ರಮುಖ ʼಹಾಟ್‌ಸ್ಪಾಟ್ʼ ಪರಿವರ್ತನೆ ಕಂಡಿದೆ.

2024–25ನೇ ಹಣಕಾಸು ವರ್ಷದಲ್ಲಿ ಆದ ವಿದೇಶಿ ನೇರ ಹೂಡಿಕೆ (FDI) ಹರಿವಿನಿಂದ ಭಾರತದ ಆರ್ಥಿಕತೆ ಮಹತ್ವದ ತಿರುವು ಪಡೆಕೊಂಡಿದೆ. $81.04 ಬಿಲಿಯನ್ ಮೊತ್ತದ ಎಫ್‌ಡಿಐ ಆಮದು ಭಾರತದ ಆರ್ಥಿಕ ಸ್ಥೈರ್ಯ ಮತ್ತು ಜಾಗತಿಕ ಹೂಡಿಕೆದಾರರ ವಿಶ್ವಾಸಕ್ಕೆ ಪ್ರತೀಕವಾಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.14ರಷ್ಟು ವೃದ್ಧಿಸಿದ್ದು, ತಂತ್ರಜ್ಞಾನ, ಸೇವೆಗಳು ಮತ್ತು ತಯಾರಿಕಾ ವಲಯಗಳಲ್ಲಿ ಭಾರತ ತೋರಿದ ಪ್ರಗತಿ ಐತಿಹಾಸಿಕವಾಗಿದೆ.

*ಸೇವೆ, ತಂತ್ರಜ್ಞಾನ, ಉತ್ಪಾದನೆಗೆ ಹೂಡಿಕೆದಾರರ ಒಲವು:* ಆರ್‌ಬಿಐ ವರದಿ ಪ್ರಕಾರ 2025ರ ಏಪ್ರಿಲ್‌ನಲ್ಲಿ ಒಟ್ಟು ಎಫ್‌ಡಿಐ $8.80 ಬಿಲಿಯನ್ ತಲುಪಿದ್ದು, 39 ತಿಂಗಳಲ್ಲಿಯೇ ಇದು ಅತ್ಯಧಿಕ ಹೂಡಿಕೆಯಾಗಿದೆ. ಐಟಿ, ಕಂಪ್ಯೂಟರ್ ಸಾಫ್ಟ್‌ವೇರ್ ಹಾಗೂ ತಯಾರಿಕಾ ವಿಭಾಗಗಳು ಹೂಡಿಕೆಯ ಪ್ರಮುಖ ವಲಯಗಳಾಗಿ ಮುಂಚೂಣಿಯಲ್ಲಿವೆ. ಈ ವಲಯಗಳಲ್ಲಿ ಶೇ.16ರಿಂದ ಶೇ.19ರಷ್ಟು ಹೂಡಿಕೆ ಹರಿದು ಬಂದಿದೆ.

ಭಾರತದಲ್ಲಿ ತಂತ್ರಜ್ಞಾನ ಮೂಲಸೌಕರ್ಯದ ಬೆಳವಣಿಗೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಮತ್ತು ಪಿಎಲ್‌ಐ (PLI) ಯೋಜನೆಗಳ ಪರಿಣಾಮ ತಯಾರಿಕಾ ವಲಯದಲ್ಲಿ $19 ಬಿಲಿಯನ್ ಹೂಡಿಕೆ ದಾಖಲಾಗಿರುವುದು ಈ ವಲಯದ ಮೇಲೆ ವಿದೇಶಿಗರು ಹೊಂದಿದ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ಈ ಬೆಳವಣಿಗೆಯಲ್ಲಿ ರಾಜ್ಯಗಳ ಪಾತ್ರವೂ ಮಹತ್ವಪೂರ್ಣದ್ದಾಗಿದ್ದು, ಮಹಾರಾಷ್ಟ್ರ ಶೇ.39ರಷ್ಟು FDI ಸೆಳೆದಿದ್ದರೆ, ಕರ್ನಾಟಕ ಮತ್ತು NCR ಪ್ರದೇಶಗಳು ಕ್ರಮವಾಗಿ ಶೇ.13 ಮತ್ತು ಶೇ.12ರಷ್ಟು ಪಾಲು ಪಡೆದಿವೆ. ಬೆಂಗಳೂರಿನಲ್ಲಿ ತಂತ್ರಜ್ಞಾನ ಕಂಪನಿಗಳ ಸಾಂಧ್ರತೆ, ಸ್ಟಾರ್ಟ್‌ಅಪ್ ಮತ್ತು ನಾವೀನ್ಯತೆಯ ಆವಿಷ್ಕಾರ ಹೂಡಿಕೆದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಹೂಡಿಕೆಗಾಗಿ ಭಾರತದ ಮೇಲೆ ವಿಶ್ವದ ನೋಟ ತೀಕ್ಷ್ಣವಾಗಿದೆ. ಸಿಂಗಾಪುರ್, ಮಾರಿಷಸ್, ಅಮೆರಿಕ ಮುಂತಾದ ರಾಷ್ಟ್ರಗಳು ಸಹ ಹೂಡಿಕೆಯ ಮುಂಚೂಣಿಯಲ್ಲಿವೆ. ಈ ದೇಶಗಳಿಂದ ಉದ್ಯಮ, ಫಿನ್‌ಟೆಕ್, ಈ-ಕಾಮರ್ಸ್ ಮತ್ತು ಡಿಜಿಟಲ್ ವೇದಿಕೆಗಳಿಗೆ ಭಾರಿ ಪ್ರಮಾಣದ ಬಂಡವಾಳ ಹರಿದು ಬಂದಿದ್ದು, ಬದಲಾಗುತ್ತಿರುವ ಸನ್ನಿವೇಶದಲ್ಲಿ ಜಾಗತಿಕ ಬಂಡವಾಳದ ಹರಿವು ಭಾರತದ ಅಭಿವೃದ್ಧಿಗೆ ದಿಕ್ಸೂಚಿಯಾಗಿದೆ.

*ಜಾಗತಿಕ ಅರ್ಥ ಕುಸಿತದ ನಡುವೆಯೂ ಭಾರತ ಬಲ:* ವಿಶ್ವದ ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಎಫ್‌ಡಿಐ ಗಣನೀಯವಾಗಿ ಕುಸಿತಗೊಂಡಿದ್ದು, ಭಾರತ ಮಾತ್ರ ಹೂಡಿಕೆಗೆ ಆಕರ್ಷಣಾ ಕೇಂದ್ರವಾಗಿ ಸ್ಥಾನ ಬಲಪಡಿಸಿಕೊಂಡಿದೆ. ವಿಶ್ವಬ್ಯಾಂಕ್ ಇತ್ತೀಚೆಗೆ ನೀಡಿದ ವರದಿ ಪ್ರಕಾರ 2023ರಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಹರಿದ ಎಫ್‌ಡಿಐ $435 ಬಿಲಿಯನ್‌ ಆಗಿದ್ದು, ಇದು 20 ವರ್ಷಗಳಲ್ಲೇ ಕನಿಷ್ಠ ಮಟ್ಟ. ಆದರೆ ಭಾರತ ಮಾತ್ರ ಈ ಬಿಕ್ಕಟ್ಟಿನ ಸನ್ನಿವೇಶದಲ್ಲೂ ಅಭಿವೃದ್ಧಿ ಪರ್ವದಲ್ಲಿದೆ. ಹೂಡಿಕೆ ಕ್ರಾಂತಿಯ ಹಾದಿಯಲ್ಲಿದೆ.

ಏಪ್ರಿಲ್ 2025ರಲ್ಲಿ ಭಾರತ $3.95 ಬಿಲಿಯನ್ ನೆಟ್ ಎಫ್‌ಡಿಐ ದಾಖಲಿಸಿದ್ದು, ಇದು ಕಳೆದ 35 ತಿಂಗಳುಗಳಲ್ಲೇ ಗರಿಷ್ಠ ಮಟ್ಟದ್ದಾಗಿದೆ. ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಈ ಬಾರಿ ದ್ವಿಗುಣಗೊಂಡಿದೆ. ಈ ಬೆಳವಣಿಗೆ ಜಾಗತಿಕ ಹೂಡಿಕೆದಾರರಲ್ಲಿ ಭರವಸೆಯ ದೇಶವಾಗುಳಿದಿದೆ ಭಾರತ.

*ಆರ್ಥಿಕ ʼಪವರ್ ಹೌಸ್' ಪಥದತ್ತ ಭಾರತ:* ಭಾರತಕ್ಕೆ ಹರಿದು ಬರುತ್ತಿರುವ ಎಫ್‌ಡಿಐ ಕೇವಲ ಆರ್ಥಿಕ ಲಾಭವಷ್ಟೇ ಅಲ್ಲ, ಭವಿಷ್ಯದ ತಂತ್ರಜ್ಞಾನಾಧಾರಿತ ಬೆಳವಣಿಗೆ, ಉದ್ಯೋಗ ಸೃಷ್ಟಿ, ತಂತ್ರಜ್ಞಾನ, ಮತ್ತು ಉತ್ಪಾದನಾ ವಲಯದ ವಿಸ್ತರಣೆಯತ್ತ ಭಾರತವನ್ನು ಕೊಂಡೊಯ್ಯುತ್ತಿದೆ. ದೇಶಿ ಮಾರುಕಟ್ಟೆ ವಿಸ್ತಾರ, ಖರೀದಿ, ಮತ್ತು ಸುಧಾರಿತ ವ್ಯಾಪಾರಿ ನಿಯಮಾವಳಿಗಳು ಭಾರತವನ್ನು ಜಾಗತಿಕ ಹೂಡಿಕೆಯ ನಾಯಕನನ್ನಾಗಿ ಹಾಗೂ ಭವಿಷ್ಯದ ಆರ್ಥಿಕ ಪವರ್‌ ಹೌಸ್ ಆಗಿ ರೂಪಿಸುತ್ತಿವೆ ಎಂದರೆ ಅತಿಶಯೋಕ್ತಿಯಲ್ಲ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande