ಬಳ್ಳಾರಿ, 12 ಜುಲೈ (ಹಿ.ಸ.):
ಆ್ಯಂಕರ್: ಸರ್ಕಾರ ನೀಡಿದ್ದ ಭೂಮಿಯ ಮೂಲ ಮಾಲೀಕರು ಮೃತಪಟ್ಟ ನಂತರ ಪ್ರಭಾವಿ ವ್ಯಕ್ತಿಯೋರ್ವನು ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ಎಕ್ಸ್‍ಪಾರ್ಟಿ ಮಾಡಿ ಮಾಲೀಕರ ಗಮನಕ್ಕಿಲ್ಲದೇ ಭೂಮಿಯನ್ನು ಕಬಳಿಸಿದ್ದಾರೆ ಎಂದು ಚರಕುಂಟೆ ಗ್ರಾಮದ ಹತ್ತು ರೈತರು ಜಿಲ್ಲಾ ಪೊಲೀಸ್‍ಗೆ ದೂರು ನೀಡಿದ್ದಾರೆ.
ಭೂ ಸಂತ್ರಸ್ತ ರೈತರಾಗಿರುವ ಹಿರಿಯ ನಾಗರಿಕರಾದ ಶೇಖಮ್ಮ, ಲಕ್ಷ್ಮಮ್ಮ, ಹನುಮಂತ, ಪಾರ್ವತಿ, ಗೌರಮ್ಮ, ನಾಗೇಂದ್ರಪ್ಪ, ವೀರಬಸಪ್ಪ, ಲಿಂಗಾರೆಡ್ಡಿ, ನಾಗೇಂದ್ರಪ್ಪ, ಹನಮಂತಪ್ಪ ಸೇರಿ ಹಲವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಶನಿವಾರ ಲಿಖಿತ ದೂರನ್ನು ಸಲ್ಲಿಸಿ, ಆರೋಪಿಗಳ ವಿರುದ್ಧ ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸಂತ್ರಸ್ತ ರೈತರು ಹೇಳಿದಂತೆ, 35 ವರ್ಷಗಳ ಹಿಂದೆ ನಮ್ಮ ಕುಟುಂಬದ ವಾರಸುದಾರರ ಹೆಸರಿಗೆ ಕರ್ನಾಟಕ ಸರ್ಕಾರ ತಲಾ 1.26 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಈ ಜಮೀನಿನಲ್ಲಿ ಇಂದಿನವರೆಗೆ ನಾವುಗಳು ಉಳುವೆ ಮಾಡುತ್ತಿದ್ದೇವೆ. ಆದರೆ, ಎಂ. ಗೋವರ್ಧನ್ ಎಂಬ ಬಳ್ಳಾರಿ ನಿವಾಸಿ, `ನಾನು ಈ ಜಮೀನನ್ನು ಖರೀದಿಸಿದ್ದೇನೆ' ಎಂದು ನ್ಯಾಯಾಲಯದಲ್ಲಿ ನಮ್ಮ ಕುಟುಂಬದ ಮೂಲ ಗ್ರ್ಯಾಂಟ್‍ದಾರರ ಹೆಸರಲ್ಲಿ ಕೇಸ್ ದಾಖಲಿಸಿ ಅವರಿಗೆ ನೋಟಿಸ್ ನೀಡಿರುತ್ತಾರೆ. ಸತ್ತ ವ್ಯಕ್ತಿಗಳು ನೋಟೀಸ್ ಸ್ವೀಕರಿಸಲು - ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಸಾಧ್ಯವೇ? ಕಾರಣ ನ್ಯಾಯಾಲಯಕ್ಕೆ ದಿಕ್ಕುತಪ್ಪಿಸಿ ಎಕ್ಸ್‍ಪಾರ್ಟಿ ಅಡಿಯಲ್ಲಿ ಕೋರ್ಟ್‍ನ ಕಮೀಷನರ್ ಮೂಲಕ ನಮ್ಮೆಲ್ಲರ ಜಮೀನನ್ನು ಅವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದೆಲ್ಲಾ ತಪ್ಪು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇಷ್ಟೆಲ್ಲಾ ಆದರೂ, ನಮ್ಮ ಗಮನಕ್ಕೆ ಬಂದಿಲ್ಲ. 2023 ರ ಪಹಣಿ ಪತ್ರಿಕೆಯಲ್ಲಿ ಎಂ. ಗೋವರ್ಧನ್ ಅವರ ಹೆಸರು ನಮೂದಾಗಿರುವುದು ಗಮನಕ್ಕೆ ಬಂದಿದ್ದು, ತಕ್ಷಣವೇ ತಹಸೀಲ್ದಾರ್ ಮತ್ತು ಸಹಾಯಕ ಆಯುಕ್ತರಿಗೆ ದೂರು ನೀಡಿದ್ದೇವೆ. ಈ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಪ್ರಸ್ತುತ ಬಿತ್ತನೆಗೆ ನಮಗೆ ಅವಕಾಶವಿಲ್ಲವಾಗಿದೆ. ಕಾರಣ ಕೃಷಿಯನ್ನೇ ನಂಬಿಕೊಂಡಿರುವ ನಮಗೆ ಈ ಭೂಮಿಯಲ್ಲಿ ಕೃಷಿ ನಡೆಸಲು ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್