ಉಂಡ ಮನೆಗೆ ದ್ರೋಹ ಬಗೆದ ಮಾಲೂರು ಶಾಸಕ ನಂಜೇಗೌಡ ; ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ
ಉಂಡ ಮನೆಗೆ ದ್ರೋಹ ಬಗೆದ ಮಾಲೂರು ಶಾಸಕ ನಂಜೇಗೌಡ ; ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ
ಜ್ಯಾತ್ಯಾತೀತ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿದ್ದರು.


ಕೋಲಾರ,೧೨ ಜುಲೈ (ಹಿ.ಸ) :

ಆ್ಯಂಕರ್ : ನೋಡಿ ಶಾಸಕರೇ ಇವತ್ತಿನ ದಿನಾಂಕ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ೨೦೨೮ರ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ನೀವೇನಾದ್ರು ಕಾಂಗ್ರೆಸ್ ಶಾಸಕರಾದ್ರೆ ಮಾಲೂರು ತಾಲ್ಲೂಕು ಕಡೆ ತಲೆ ಹಾಕುವುದಿಲ್ಲ. ಜನತಾದಳ ಎಲ್ಲಿದೆ ಎಂದ ಮಾಲೂರು ಶಾಸಕರ ಕೆ.ವೈ.ನಂಜೇಗೌಡಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಖಡಕ್ ಕೌಂಟರ್ ಕೊಟ್ಟಿದ್ದಾರೆ.

ಮಾಲೂರಿನಲ್ಲಿ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಾಲೂರು ಶಾಸಕರ ಕೆ.ವೈ.ನಂಜೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು. ಮಾಲೂರು ಶಾಸಕರೇ ಕೋಮುಲ್ ಅಧ್ಯಕ್ಷರಾಗಿ ಡೈರಿ ಯಲ್ಲಿ ನೇಮಕಾತಿಗೆ ಎಷ್ಟು ಲಂಚ ಪಡೆದಿದ್ರಿ. ಎಷ್ಟಕ್ಕೆ ಮಾರಾಟ ಮಾಡಿದ್ದೀರಿ. ಭೂ ಹಗರಣಗಳು ನಮ್ಮ ಕಣ್ಮುಂದೆ ಇದೆ. ಅಕ್ರಮ ನೇಮಕಾತಿ ವಿಚಾರವಾಗಿ ಶಾಸಕರ ವಿರುದ್ಧ ಇಡಿ ದಾಳಿಯೂ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್ ಪಕ್ಷದಲ್ಲೇ ಉಂಡು ತಿಂದು, ಬೆಳೆದು ಅಧಿಕಾರ ಅನುಭವಿಸಿ, ಇವತ್ತು ಜನತಾದಳ ಪಕ್ಷದ ಬಗ್ಗೆನೇ ಮಾತಾಡ್ತೀರಾ. ಜೆಡಿಎಸ್ ಪಕ್ಷವನ್ನು ರಾಜಕೀಯ ವೇದಿಕೆಯಾಗಿ ಬಳಸಿಕೊಂಡು. ಇವತ್ತು ಜನತಾದಳ ಪಕ್ಷ ಎಲ್ಲಿದೆ ಎಂದು ಪ್ರಶ್ನೆ ಮಾಡ್ತಾರೆ ಎಂದು ಕೆ.ವೈ. ನಂಜೇಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಜನತೆಗೆ ಕೈಮುಗಿದು ಮನವಿ ಮಾಡುತ್ತೇನೆ. ಗೌರವಸ್ತರನ್ನ ಆಯ್ಕೆ ಮಾಡಿ. ಯಾರು ತಾಲೂಕಿನ ಸಮಸ್ಯೆಯನ್ನ ಅರಿತಿದ್ದಾರೆ ಅಂಥವರನ್ನ ಆಯ್ಕೆಮಾಡಿ. ಇಂಥ ಶಾಸಕರು ಹೆಚ್ಚಾಗಿರುವುದಕ್ಕೆ ರಾಜ್ಯದಲ್ಲಿ ಇಂಥ ಪರಿಸ್ಥಿತಿ ಬಂದಿರುವುದು ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ. ಮಾತೆತ್ತಿದ್ರೆ ಸಿಎಂ ಮತ್ತು ಡಿಸಿಎಂ ಕುರ್ಚಿ ಉಳಿಸಿಕೊಳ್ಳಲು ದೆಹಲಿಗೆ ಹೋಗಿ ಕೂತ್ಕೋತಾರೆ. ಒಬ್ಬ ಸಿಎಂ ಕುರ್ಚಿ ಉಳಿಸಿಕೊಳ್ಳಬೇಕು, ಇನ್ನೊಬ್ಬರು ಉಪಮುಖ್ಯಮಂತ್ರಿ ಕುರ್ಚಿಯಿಂದ ಸಿಎಂ ಕುರ್ಚಿಗೆ ಆರಬೇಕು. ಮತ್ತೊಬ್ಬ ಕಾಂಗ್ರೆಸ್ ಅಧ್ಯಕ್ಷರ ಕುರ್ಚಿ ಕಾಲಿ ಆಗುತ್ತೆ ಅಂತ ಕಾಯ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ನಾಯಕರಿಗೆ ನಾಚಿಕೆ ಮಾನ ಮರ್ಯಾದೆ ಅರ್ಥ ಗೊತ್ತಿದ್ಯಾ. ೧೩೮ ಜನ ಶಾಸಕರನ್ನ ಗೆಲ್ಲಿಸಿ ಕೊಟ್ಟಿದ್ದಾರೆ. ಪ್ರತಿನಿತ್ಯ ನಿಮಗೆ ಕುರ್ಚಿ ಚಿಂತೆ ಎಂದು ಪ್ರತಿನಿತ್ಯ ಯೋಚನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹಿಗ್ಗಮುಗ್ಗ ವಾಗ್ದಾಳಿ ನಡೆಸಿದರು.

ಬಿಹಾರದಲ್ಲಿ ಚುನಾವಣೆ ನಡೆಯುತ್ತಿದೆ. ಅದಕ್ಕೆ ಕಂತೆ ಕಂತೆ ರಾಜ್ಯದಿಂದ ಹಣ ಕಳಿಸುವುದಕ್ಕೆ ರಾಜ್ಯದ ಕನ್ನಡಿಗರ ತೆರಿಗೆಯನ್ನ ವಸೂಲಿ ಮಾಡಿ ಬಿಹಾರದ ಚುನಾವಣೆಗೆ ಹಣ ಕಳಿಸಲು ದೆಹಲಿಯಲ್ಲಿ ಪ್ಲಾನ್ ಮಾಡಿಕೊಂಡು ಕೂತ್ಕೊಳ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು.

ಶ್ರೀನಿವಾಸಪುರದಲ್ಲಿ ಮಾವು ಬೆಳೆಗಾರರು ಮಾವನ್ನು ರಸ್ತೆಯಲ್ಲಿ ಚೆಲ್ಲಿದ್ದಾರೆ. ಕುಮಾರಣ್ಣ ಕೇಂದ್ರ ಕೃಷಿ ಸಚಿವರಲ್ಲ ಆದ್ರೂ ಅವರು ಶಿವರಾಜ್ ಸಿಂಗ್ ಚೌಹಾಣ್ ಗೆ ಪತ್ರ ಬರೆದರು. ಕುಮಾರಣ್ಣ ಪತ್ರಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಆದರೆ ಇಲ್ಲಿವರೆಗೆ ರಾಜ್ಯ ಸರ್ಕಾರದ ತೆಗೆದುಕೊಳ್ಳಬೇಕಾದ ಕ್ರಮಗಳಲ್ಲಿ ವಿಫಲವಾಗಿದೆ ಎಂದು ನಿಖಿಲ್ ಆರೋಪಿಸಿದರು.

ನನ್ನ ಮುಂದಿನ ಸ್ಪರ್ದೆ ಕುರಿತು ಯಾವುದೇ ತೀರ್ಮಾನ ಮಾಡಿಲ್ಲ. ಹೆಚ್ಚಿನ ಸಂಖ್ಯೆ ಜನತಾದಳ ಶಾಸಕರು ಗೆಲ್ಲಬೇಕು. ಅಂದ್ರೆ ಎಲ್ಲ ಜಿಲ್ಲೆಗಳೂ ಸಹ ನಮಗೆ ಒಂದೆಯಾಗಿವೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಜನರೊಂದಿಗೆ ಜನತಾದಳ ಯಶಸ್ವಿಯಾಗಿ ನೆರವೇರಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು.

ಇದು ಮೊದಲ ಹಂತದ ಪ್ರವಾಸ,ಎರಡನೇ ಹಂತದಲ್ಲಿ ಇನ್ನಷ್ಟು ತಾಲೂಕಿನ ಪ್ರವಾಸ ಇದೆ. ಮೂರು ವರ್ಷಗಳ ಕಾಲ ನಿರಂತರವಾಗಿ ಇದೇ ರೀತಿ ಓಡಾಡುತ್ತೇನೆ. ನಿಖಿಲ್ ಕುಮಾರಸ್ವಾಮಿ ಒಬ್ಬರಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ. ಮುಖಂಡರು ಮತ್ತು ಕಾರ್ಯಕರ್ತರ ಬೆಂಬಲಬೇಕು ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಕೋಲಾರ ಸಂಸದರಾದ ಮಲ್ಲೇಶ್ ಬಾಬು, ಮಾಜಿ ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಗೋವಿಂದ್ ರಾಜಣ್ಣ. ಜವರಾಯ್ ಗೌಡ, ಮಾಜಿ ಶಾಸಕರಾದ ಅನ್ನದಾನಿ, ಸುರೇಶ್ ಗೌಡ ,ರಾಜಾ ವೆಂಕಟಪ್ಪ ನಾಯಕ ರವರು, ಆರ್. ಚೌಡರೆಡ್ಡಿ, ಮಹಿಳಾ ರಾಜ್ಯಾಧ್ಯಕ್ಷರಾದ ರಶ್ಮಿ ರಾಮೇಗೌಡರು, ಮುಖಂಡರಾದ ರಾಮೇಗೌಡ , ಸಿಎಂಆರ್ ಶ್ರೀನಾಥ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

ಚಿತ್ರ ; ಜ್ಯಾತ್ಯತೀತ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande