ವಿಜಯಪುರ, 12 ಜುಲೈ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಶುಕ್ರವಾರ ನಿಕಟಪೂರ್ವ ಜಿಲ್ಲಾಧಿಕಾರಿಗಳಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಕಾರ್ಯಕ್ರಮ ಜರುಗಿತು.
ಜಿಲ್ಲಾಡಳಿತದಿಂದ ವತಿಯಿಂದ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರನ್ನು ಕುಟುಂಬ ಸದಸ್ಯರೊಂದಿಗೆ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಹಲವರು ಮಾತನಾಡಿ, ತಮ್ಮ ಸೇವಾವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದೊಂದಿಗೆ ಬೆರೆತು ಜನರ ಮನಸ್ಸನ್ನು ಗೆದ್ದಂತಹ ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಇತರರಿರೂ ಮಾದರಿಯಾಗಿದೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ವಿಜಯಪುರದಿಂದ ವರ್ಗಾವಣೆಗೊಂಡಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ನನ್ನ ಎರಡು ವರ್ಷಗಳವರೆಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ನನ್ನ ಮನಸ್ಸಿನಲ್ಲಿಯೇ ಅಚ್ಚಳಿಯದೇ ಉಳಿಯುವಂತೆ ಮಾಡಿದೆ. ಜಿಲ್ಲೆಯ ನೆನಪುಗಳು ಜೀವನದುದ್ದಕ್ಕೂ ನನ್ನ ಜೊತೆಗಿರಲಿವೆ. ನನ್ನಿಬ್ಬರು ಮಕ್ಕಳು ಜನಿಸಿದ್ದು ಬಾಗಲಕೋಟೆ ಹಾಗೂ ವಿಜಯಪುರದಲ್ಲಿಯೇ, ಇದು ಅವರಿಗೆ ಭಾವನಾತ್ಮಕ ಬೆಸುಗೆ ಬೆಸೆಯಲಿದೆ. ಇಲ್ಲಿನ ಜನರು ವಿಶಾಲ ಹೃದಯವುಳ್ಳವರೂ, ಅವರು ನೀಡಿರುವ ಪ್ರೀತಿ-ವಿಶ್ವಾಸ, ಸಹಕಾರವನ್ನು ಎಂದಿಗೂ ಮರೆಯಲಾಗದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಈ ವಿಭಜಿತ ಜಿಲ್ಲೆಗಳಲ್ಲಿ ಸಲ್ಲಿಸಿದ ಸೇವೆ ನನಗೆ ತೃಪ್ತಿ ತಂದಿದೆ. ಈ ಅವಧಿಯಲ್ಲಿ ನಾನು ಬೇರೆ ರಾಜ್ಯದವನು ಎಂಬ ಭಾವನೆ ಬರದ ಹಾಗೆ ನೋಡಿಕೊಂಡು,ನನ್ನನ್ನು ತಮ್ಮ ಮನೆ-ಮಗನೆಂದು ಭಾವಿಸಿ ನನಗೆ ನೀಡಿರುವ ಪ್ರೀತಿ-ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ರಾಜಗುರು ದುರಂತದ ಸಂದರ್ಭ, ಅತಿವೃಷ್ಟಿ-ಅನಾವೃಷ್ಟಿ ಬಂದಾಗ ಸಮರ್ಥವಾಗಿ ನಿರ್ವಹಿಸುವ ಸಂದರ್ಭಗಳಲ್ಲಿ, ಬೋರವೆಲ್ ಸಿಲುಕಿದ ಮಗುವಿನ ಒಂದುವರೆ ದಿನ ರಕ್ಷಣಾ ಕಾರ್ಯ ನಿರ್ವಹಣೆ ಸಂದರ್ಭದಲ್ಲಿ ಅಧಿಕಾರಿಗಳು, ಸಾರ್ವಜನಿಕರು ನೀಡಿರುವ ಸಹಾಯ-ಸಹಕಾರವನ್ನು ನೆನೆದರು. ಜಿಲ್ಲೆಯ ಅಭಿವೃದ್ಧಿಗಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಇದರೊಂದಿಗೆ ಪೊಲೀಸ್ ಇಲಾಖೆಯ ಸಹಕಾರಕ್ಕೆ ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಮಾಧ್ಯಮದವರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ನೂತನ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಮಾತನಾಡಿ, ಹಿಂದಿನ ಜಿಲ್ಲಾಧಿಕಾರಿಗಳು ನಡೆಸಿಕೊಂಡ ಬಂದ ಕಾರ್ಯಗಳೊಂದಿಗೆ ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಿ, ಜನರ ಆಶೋತ್ತರಗಳಿಗುಣವಾಗಿ ಶ್ರಮಿಸುವುದಾಗಿ ತಿಳಿಸಿದ ಅವರು, ಇಲ್ಲಿ ನಾನಾ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ತಮ್ಮ ಅನಿಸಿಕೆ ಹಂಚಿಕೊಂಡ ವಿಷಯಗಳಿಂದ ಜಿಲ್ಲೆಯ ಸಮಗ್ರ ಚಿತ್ರಣವೂ ಸಹ ತಿಳಿದುಕೊಳ್ಳಲು ಸಾದ್ಯವಾಯಿತು.ಈ ಅನಿಸಿಕೆಗಳಿಂದ ನಿಕಟ ಪೂರ್ವ ಜಿಲ್ಲಾಧಿಕಾರಿಗಳು ಜನಸಾಮಾನ್ಯರ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿರುವ ಕುರಿತು ಮನನವಾಗಿದೆ. ನಿಕಟಪೂರ್ವ ಜಿಲ್ಲಾಧಿಕಾರಿಗಳಿಗೆ ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವುದರಿಂದ ಈ ಅವಕಾಶಗಳನ್ನು ಬಳಸಿಕೊಂಡು ಚೆನ್ನಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಗ್ರಾಮೀಣ ಹಾಗೂ ನಗರಾಭಿವೃದ್ಧಿ ಇಲಾಖೆಗಳಲ್ಲಿ ಅನುಭವ ಹೊಂದಿದ ನಿಕಟಪೂರ್ವ ಜಿಲ್ಲಾಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುವುದರಿಂದ ಹೆಚ್ಚಿನ ಮಾರ್ಗದರ್ಶನ ಪಡೆದುಕೊಳ್ಳಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳು ಮಾದರಿಯಾಗಿವೆ. ಡಾ.ಬಾಬು ಜಗಜೀವನರಾಂ ಭವನ, ಬಿ.ಆರ್ ಅಂಬೇಡ್ಕರ್ ಭವನ ಪುನರ್ಜೀವನಗೊಳಿಸಿದರು. ಅನಾಥ ಮಕ್ಕಳಿಗೆ ಸಹಾಯ ಸಹಕಾರ, ವಾಚಕರಿಗೆ 148 ಹಳೆಯ ಕಟ್ಟಡ ಗ್ರಂಥಾಲಯದ ನವೀಕರಣಗೊಳಿಸಿ ಬಡ ವಿದ್ಯಾರ್ಥಿಗಳಿಗೆ ಓದಲು ಅವಕಾಶ ಹಾಗೂ ಅನುಕೂಲ ಕಲ್ಪಿಸಿದ್ದಾರೆ. ನಾನಾ ಇಲಾಖೆಗಳಲ್ಲಿನ ಸೌಲಭ್ಯಗಳನ್ನು ಸಾರ್ವಜನಿಕರಿಗೆ ದೊರಕಬೇಕೆಂಬ ಮಹದಾಸೆ ಹೊಂದಿದ ಇವರು, ಮಾತೃಹೃದಯದ ಜಿಲ್ಲಾಧಿಕಾರಿಗಳಾಗಿ, ನನಗೆ ಸಹೋದರ ಹಾಗೂ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೆಣ್ಣೂರ ಅವರು ಸ್ವಾಗತಿಸಿ ಮಾತನಾಡಿ, ಪ್ರೀತಿ ಮತ್ತು ವಿಶ್ವಾಸದಿಂದ ಪ್ರತಿಯೊಬ್ಬರನ್ನು ಕಂಡಿದ್ದಾರೆ. ಪ್ರತಿಯೊಬ್ಬರಿಗೆ ಮಾರ್ಗದರ್ಶನ ಮಾಡಿ, ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಇವರ ದಿಟ್ಟತನ ಕಾರ್ಯವೈಖರಿ ಇತರ ಅಧಿಕಾರಿಗಳಿಗೆ ಮಾದರಿಯಾಗಿದೆ. ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಮನೋಭಾವ ಹೊಂದಿರುವ, ಅವರು, ಜನರ ಕುಂದು ಕೊರತೆಗಳಿಗೆ ಸ್ಪಂದಿಸಿದ್ದಾರೆ. ರೈತರು, ಸಾರ್ವಜನಿಕರ ಸಮಸ್ಯೆಗೆ ಹಗಲಿರುಳು ಶ್ರಮಿಸಿ ಅಂತಃಕರುಣವುಳ್ಳ ಪ್ರೀತಿಯ ಹೃದಯ ಸಿರಿವಂತ ಅಧಿಕಾರಿಯಾಗಿದ್ದಾರೆ ಎಂದು ಅವರು ಹೇಳಿದರು.
ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಹಾಸೀಂಪೀರ್ ವಾಲಿಕಾರ ಮಾತನಾಡಿ, ಹೃದಯ ಶ್ರೀಮಂತಿಕೆಯುಳ್ಳ ಜಿಲ್ಲೆ ನಮ್ಮದು. ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಹಿತ್ಯಾಸಕ್ತರಿಗೆ ಪ್ರೇರಣೆ ಒದಗಿಸಿದ್ದಾರೆ ಎಂದು ಹೇಳಿದರು.
ರೈತ ಮುಖಂಡರಾದ ಅರವಿಂದ ಕುಲಕರ್ಣಿ ಅವರು ಮಾತನಾಡಿ, ರೈತಪರ ಚಿಂತಕರಾಗಿರುವ ನಿಕಟಪೂರ್ವ ಜಿಲ್ಲಾಧಿಕಾರಿಗಳು, ಯಾವುದೇ ಕೆಲಸದ ಒತ್ತಡದಲ್ಲಿದ್ದರೂ ಸಹ ರೈತರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರು. ರೈತರ ಬಗ್ಗೆ ಕಳಕಳಿ ಹೊಂದಿದ್ದ ಇವರು, ಉನ್ನತ ಹುದ್ದೆ ಹೊಂದಲಿ ಎಂದು ಆಶಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಎಲ್.ಎಚ್.ಬಿದರಿ ಅವರು ಮಾತನಾಡಿ, ರೆಡ್‍ಕ್ರಾಸ್ ಸಂಸ್ಥೆಗೆ ಸಾಕಷ್ಟು ನೆರವು ಒದಗಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳಿ, ರೈತಪರ ಸಂಘಟನೆ, ನಾನಾ ಸಂಘಟನೆಯವರು ಸನ್ಮಾನ ಮಾಡಿ, ತಮ್ಮ ಪ್ರೀತಿಯ ಸನ್ಮಾನ ಸಲ್ಲಿಸಿದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ,ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಾಜಶೇಖರ ಡಂಬಳ,ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಶಿವಾನಂದ ಮಾಸ್ತಿಹೊಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬದ್ರುದ್ದಿನ್ ಸೌದಾಗರ್, ಇಂಡಿ ತಹಶೀಲ್ದಾರ ಬಿ.ಎಸ್ ಕಡಕ್‍ಭಾವಿ, ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ, ಚಕ್ರವರ್ತಿ ಸೇರಿದಂತೆ ಇತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಹಿಂದೂಸ್ತಾನ್ ಸಮಾಚಾರ್ / jyothi deshpande