ಬೆಂಗಳೂರು, 12 ಜುಲೈ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ನಿವೃತ್ತ ನ್ಯಾ.ಮೈಕೆಲ್ ಡಿ.ಕುನ್ಹಾ ಏಕಸದಸ್ಯ ತನಿಖಾ ಆಯೋಗ ಸಲ್ಲಿಸಿದ ವರದಿಯಲ್ಲಿನ ಅಂಶಗಳು ಬಹಿರಂಗವಾಗಿದ್ದು ಆರ್ಸಿಬಿ, ಕೆಎಸ್ಸಿಎ ಹಾಗೂ ಪೊಲೀಸರು ಘಟನೆಗೆ ನೇರ ಕಾರಣ ಎಂದು ಉಲ್ಲೇಖಿಸಲಾಗಿದೆ.
ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ 11 ಮಂದಿ ಅಭಿಮಾನಿಗಳು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು. ಈ ಸಂಬಂಧ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ನೇತೃತ್ವದ ಏಕಸದಸ್ಯ ತನಿಖಾ ಆಯೋಗವನ್ನು ಜೂನ್ 5ರಂದು ರಚಿಸಿತ್ತು.
ಮೈಕೆಲ್ ಡಿ.ಕುನ್ಹಾ ಅವರು ಕಾಲ್ತುಳಿತದ ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿದ್ದು ವರದಿಯಲ್ಲಿ ಕಾಲ್ತುಳಿತಕ್ಕೆ ಕೆಎಸ್ಸಿಎ, ಡಿಎನ್ಎ, ಅರ್ಸಿಬಿ ಹಾಗೂ ಪೊಲೀಸರು ಹೊಣೆ ಎಂದು ಉಲ್ಲೇಖಿಸಿದೆ.
ಇಷ್ಟು ಕಡಿಮೆ ಅವಧಿಯಲ್ಲಿ ಕಾರ್ಯಕ್ರಮ ಆಯೋಜಿಸುವುದು ಅಸಾಧ್ಯವೆಂದು ಗೊತ್ತಿದ್ದರೂ ಕಾರ್ಯಕ್ರಮ ನಡೆಸಲಾಗಿದೆ. ಎಲ್ಲರ ಕರ್ತವ್ಯ ಲೋಪ, ನಿರ್ಲಕ್ಷ್ಯತನದಿಂದ ಈ ದುರಂತ ಸಂಭವಿಸಿದೆ. ವಿಜಯೋತ್ಸವಕ್ಕೆ ಬಂದೋಬಸ್ತ್ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ವ್ಯಾಪಕ ಪೊಲೀಸ್ ನಿಯೋಜನೆ ಇರಲಿಲ್ಲ. ಲಕ್ಷಾಂತರ ಅಭಿಮಾನಿಗಳು ಆಗಮಿಸಲಿದ್ದಾರೆ ಎಂಬುದನ್ನು ಅಂದಾಜಿಸುವಲ್ಲಿ ಪೊಲೀಸರು, ಆರ್ಸಿಬಿ ಹಾಗೂ ಕೆಎಸ್ಸಿಎ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಯೋಗ ತಿಳಿಸಿದೆ.
ಆರ್ಸಿಬಿ ಉಚಿತ ಪಾಸ್ ಪ್ರಕಟಣೆಯು ಅಪಾರ ಅಭಿಮಾನಿಗಳು ಜಮಾವಣೆಯಾಗಲು ಕಾರಣವಾಗಿದೆ. ಅಲ್ಲದೆ, ಆರ್ಸಿಬಿ, ಕೆಎಸ್ಸಿಎ ಹಾಗೂ ಪೊಲೀಸರ ಮಧ್ಯೆ ಯಾವುದೇ ಸಮನ್ವಯತೆ ಇಲ್ಲದೇ ಇರುವುದು ದುರಂತಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜೊತೆಗೆ, ಜನಸಂದಣಿ ನಿರ್ವಹಣೆಗೆ ಸ್ಪಷ್ಟ ಮಾರ್ಗಸೂಚಿ ಇಲ್ಲದಿರುವ ಬಗ್ಗೆ ತನಿಖಾ ಆಯೋಗ ಒತ್ತಿ ಹೇಳಿದೆ.
ವರದಿ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ೧೭ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa