ಮಂಗಳೂರು, 13 ಜೂನ್ (ಹಿ.ಸ.) :
ಆ್ಯಂಕರ್ : ಕರ್ನಾಟಕದಲ್ಲಿ ಕೋಮು ವೈಷಮ್ಯ ಪ್ರಕರಣಗಳನ್ನು ತಡೆಯಲು ಮಂಗಳೂರನ್ನು ಕೇಂದ್ರೀಕರಿಸಿ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಲು ವಿಶೇಷ ಕೋಮು ನಿಗ್ರಹ ಪಡೆ ಇಂದಿನಿಂದ ಕಾರ್ಯಾರಂಭ ಮಾಡಿದೆ.
ಇದು ಕೋಮು ವೈಷಮ್ಯ ತಡೆಯಲು ದೇಶದಲ್ಲೇ ಮೊದಲ ಬಾರಿಗೆ ಸ್ಥಾಪಿಸಲಾದ ಸಂಸ್ಥೆಯಾಗಿದೆ. ಸಂಸ್ಥೆಗೆ ಗೃಹ ಸಚಿವ ಜಿ.ಪರಮೇಶ್ವರ ಇಂದು ಮಂಗಳೂರಿನಲ್ಲಿ ಚಾಲನೆ ನೀಡಿದರು.
ದಕ್ಷಿಣ ಕನ್ನಡ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕೋಮು ದ್ವೇಷದ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ವೈಷಮ್ಯದಿಂದ ಸರಣಿ ಹತ್ಯೆಗಳು ನಡೆಯುತ್ತಿವೆ. ಕೋಮು ವೈಷಮ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಭಯದಿಂದ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಎಸ್ಎಎಫ್ ಸ್ಥಾಪಿಸಿ ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಕೋಮು ವೈಷಮ್ಯ ತಡೆಯಲು ಪೋರ್ಸ್ ಸ್ಥಾಪನೆ ಮಾಡುತ್ತಿರುವುದು ದೇಶದಲ್ಲೇ ಪ್ರಥಮ. ಕೋಮು ವೈಷಮ್ಯ ಪ್ರಕರಣಗಳು ನಡೆದಾಗ ವಿವಿಧ ರೀತಿಯಲ್ಲಿ ಅವುಗಳನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುತ್ತಿದ್ದೆವು. ಆದರೆ ಅದರಿಂದ ಕೋಮು ವೈಷಮ್ಯ ಪ್ರಕರಣಗಳು ನಿಯಂತ್ರಣಕ್ಕೆ ಬಾರದಿರುವುದನ್ನು ಅರಿತು ಎಸ್ಎಎಫ್ ಸ್ಥಾಪಿಸಿ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕಾರ್ಕಳದಲ್ಲಿ ಕೇಂದ್ರ ಸ್ಥಾನದಲ್ಲಿರುವ ನಕ್ಸಲ್ ನಿಗ್ರಹ ದಳದ 656 ಸಿಬ್ಬಂದಿಗಳಲ್ಲಿ 248 ಸಿಬ್ಬಂದಿಗಳನ್ನು ಎಸ್ಎಎಫ್ಗೆ ನಿಯೋಜಿಸಲಾಗಿದೆ. ಇದರಲ್ಲಿ ಡಿಐಜಿಪಿ 1, ಡಿವೈಎಸ್ಪಿ ಸಿವಿಲ್ 1, ಸಹಾಯಕ ಕಮಾಂಡೆಂಟ್ 1, ಪಿಐ/ ಆರ್ಪಿಐ 4, ಪಿಎಸ್ಐ/ ಆರ್ಎಸ್ಐ/ ಎಸ್ಐ 16, ಸಿಹೆಚ್ಸಿ 60 , ಸಿಪಿಸಿ/ಎಪಿಸಿ 150, ಅನುಯಾಯಿ 15 ಮಂದಿ ಇರಲಿದ್ದಾರೆ. ಇದರಲ್ಲಿ ಮಂಗಳೂರು ಕೇಂದ್ರ ಸ್ಥಾನದಲ್ಲಿ ಡಿಐಜಿಪಿ 1, ಎಸ್ಪಿ 1, ಡಿವೈಎಸ್ಪಿ 1, ಸಹಾಯಕ ಕಮಾಂಡೆಂಟ್ 1, ಪಿಐ/ಆರ್ಪಿಐ 1, ಪಿಎಸ್ಐ, ಆರ್ಎಸ್ಐ, ಎಸ್ಐ 1, ಸಿಹೆಚ್ಸಿ 3 , ಪಿಸಿಪಿ, ಎಪಿಸಿ 6 ಇದ್ದು, ಒಟ್ಟು 15 ಮಂದಿ ಇರಲಿದ್ದಾರೆ. ಇನ್ನು ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗೆ ತಲಾ ಒಂದು ಪಿಐ/ ಆರ್ಪಿಐ, 5 ಪಿಎಸ್ಐ / ಆರ್ಎಸ್ಐ / ಎಸ್ಐ, 19 ಸಿಹೆಚ್ಸಿ , 48 ಸಿಪಿಸಿ/ಎಪಿಸಿ ಮತ್ತು 5 ಅನುಯಾಯಿ ಇರಲಿದ್ದಾರೆ. ಮೂರು ಜಿಲ್ಲೆಗೂ ತಲಾ 78 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa