ಮಾಲೂರಿನಲ್ಲಿ ವಿಶ್ವಕರ್ಮ ಸಮುದಾಯದ ಸಾಮೂಹಿಕ ಉಪನಯನ
ಮಾಲೂರಿನಲ್ಲಿ ವಿಶ್ವಕರ್ಮ ಸಮುದಾಯದ ಸಾಮೂಹಿಕ ಉಪನಯನ ಕಾರ್ಯಕ್ರಮ
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಶಿವಾರಪಟ್ಟಣ ಗ್ರಾಮದಲ್ಲಿ ವಿಶ್ವಕರ್ಮ ಸಮುದಾಯದ ಸಾಮೂಹಿಕ ಉಪನಯನ ಕಾರ್ಯಕ್ರಮ ನಡೆಯಿತು.


ಕೋಲಾರ, ಮೇ.೦೯ (ಹಿ.ಸ) :

ಆ್ಯಂಕರ್ : ಮಾಲೂರು ತಾಲೂಕಿನ ಶಿವಾರಪಟ್ಟಣದ ಶ್ರೀ ಕಾಳಿಕಾ ಕಮಟೇಶ್ವರ ದೇವಾಲಯದ ಆವರಣದಲ್ಲಿ ಶ್ರೀ ಕಾಳಿಕಾ ಕಮಟೇಶ್ವರ ವಿಶ್ವಕರ್ಮ ದೇವಾಲಯ ಅಭಿವೃದ್ಧಿ ಸಮಿತಿ ವತಿಯಿಂದ ೫೬ ಜನಗಳಿಗೆ ಸಾಮೂಹಿಕ ಉಪನಯನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಸನಾತನ ಧರ್ಮದಲ್ಲಿ ಉಪನಯನ ಎನ್ನುವುದಕ್ಕೆ ಸಂಕ್ಷಿಪ್ತವಾದ ವಿವರಣೆ ಕೊಟ್ಟರೆ ಜ್ಞಾನದ ಕಣ್ಣನ್ನು ತೆರೆಸುವ ಉದ್ದೇಶದಿಂದ ಮಾಡುವ ಕ್ರಿಯೆಗೆ ಉಪ ನಯನ ಎನ್ನುತ್ತಾರೆ. ಇದು ಬ್ರಾಹ್ಮಣ ಸಂಪ್ರದಾಯಸ್ಥರಲ್ಲಿ ಮಾತ್ರ ಕಾಣಬಹುದಾಗಿದೆ. ತಾಯಿಯ ಗರ್ಭದಿಂದ ಹುಟ್ಟುವಾಗ ಎಲ್ಲರೂ ಸರಿಸಮನರಾಗಿರುತ್ತಾರೆ. ಆದರೆ ಅವರವರ ಕೆಲಸಗಳಿಗೆ ತಕ್ಕ ರೀತಿಯಲ್ಲಿ ಅವರನ್ನು ಜಾತಿ ವ್ಯವಸ್ಥೆಯಲ್ಲಿ ಗುರುತಿಸುತ್ತಾರೆ. ಇಂತಹ ಸಂದರ್ಭದಲ್ಲಿ ಬ್ರಾಹ್ಮಣ ಪದ್ಧತಿಯಲ್ಲಿ ವಟುವಿಗೆ ಸರಿಯಾದ ಸಮಯಕ್ಕೆ ಯಜ್ಞೋಪವಿತ ಹಾಗೂ ಬ್ರಹ್ಮೋಪದೇಶ ನೀಡಿದಾಗ ಮಾತ್ರ ಆ ವ್ಯಕ್ತಿ ತನ್ನ ಮುಂದಿನ ಜೀವನದಲ್ಲಿ ಸನಾತನ ಧರ್ಮಕ್ಕೆ ಗುರುವಿನ ರೂಪದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇದರ ಮೂಲ ಮಂತ್ರ ಗಾಯತ್ರಿ ಮಂತ್ರ ಇದನ್ನು ದಿನನಿತ್ಯ ಅನುಷ್ಠಾನದಲ್ಲಿ ಇಟ್ಟುಕೊಂಡಾಗ ಮಾತ್ರ ಅವನು ಬ್ರಹ್ಮತೇಜಸ್ಸಿನಿಂದ ಕೂಡಿರುವ ಬ್ರಾಹ್ಮಣನಾಗುತ್ತಾನೆ ಎನ್ನುವ ಗೂಡಾರ್ಥದೊಂದಿಗೆ ಈ ಉಪನಯನ ಸಂಸ್ಕಾರ ಕೂಡಿರುತ್ತದೆ. ಈ ನಿಟ್ಟಿನಲ್ಲಿ ಶಿವಾರಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮಕ್ಕೆ ಅನೇಕ ಜಿಲ್ಲೆಗಳಿಂದ ಹೆಚ್ಚಾಗಿ ಕೋಲಾರ ಜಿಲ್ಲೆಯಿಂದ ವಿಶ್ವ ಬ್ರಾಹ್ಮಣ ಸಮಾಜದವರು ಆಗಮಿಸಿ ತಮ್ಮ ಮಕ್ಕಳಿಗೆ ಉಪನಯನವನ್ನು ಮಾಡಿಸಿಕೊಂಡಿರುತ್ತಾರೆ.

ಶ್ರೀ ಕಾಳಿಕಾ ಕಮಟೇಶ್ವರ ವಿಶ್ವಕರ್ಮ ದೇವಾಲಯ ಅಭಿವೃದ್ಧಿ ಸಮಿತಿಯವರು ಅತ್ಯಂತ ಶಿಸ್ತು ಬದ್ಧವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಜ್ಯೋತಿಷಿ ಡಾ.ಡಿ.ಎಲ್.ವೀರಭ್ರಹ್ಮಾಚಾರಿ, ನಿವೃತ್ತ ಐ.ಎ.ಎಸ್ ಅಧಿಕಾರಿ ಬೆಂಗಳೂರಿನ ಮಾಳಿಗಾಚಾರ್ಯ, ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ್ ಪತ್ತಾರ್, ನಾಡೋಜ ಡಾ.ಬಿ.ಎಂ.ಉಮೇಶ್ ಕುಮಾರ್, ಖ್ಯಾತ ವಾಗ್ಮಿ ಹೊಸಕೋಟೆ ಈಶ್ವರ್, ಮಹಾ ಒಕ್ಕೂಟದ ಸಹ ಕಾರ್ಯದರ್ಶಿ ಸುರೇಶ್ ಆಚಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಗೌಡ ಭಾಗವಹಿಸಿದ್ದರು.

ಚಿತ್ರ : ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಶಿವಾರಪಟ್ಟಣ ಗ್ರಾಮದಲ್ಲಿ ವಿಶ್ವಕರ್ಮ ಸಮುದಾಯದ ಸಾಮೂಹಿಕ ಉಪನಯನ ಕಾರ್ಯಕ್ರಮ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande