ಮಂಗಳೂರು, 03 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಮಂಗಳೂರು ಪೊಲೀಸ್ ಆಯುಕ್ತರು ಮಹತ್ವದ ಹೇಳಿಕೆ ನೀಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಜೊತೆ ಸಭೆ ನಡೆಸಿದ ನಂತರ ಮಾತನಾಡಿದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಘಟನೆ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದಿದ್ದು, ಬಂಧಿತರ ವಿವರ ನೀಡಿದ್ದಾರೆ.
ಈ ಪೈಕಿ ಇಬ್ಬರು ಹಿಂದುಗಳು ಇರುವುದು ದೃಢಪಟ್ಟಿದೆ. ಆದರೆ, ಈ ಹಿಂದೆ ಕೊಲೆಯಾಗಿದ್ದ ಫಾಜಿಲ್ ತಮ್ಮ ಆದಿಲ್ ಸುಹಾಸ್ ಕೊಲೆಗೆ ಸಂಚು ಹೂಡಿದ್ದು, 5 ಲಕ್ಷ ಹಣಕಾಸು ಸಹಾಯ ಮಾಡಿರುವುದನ್ನು ಪೊಲೀಸ್ ಆಯುಕ್ತರು ಬಹಿರಂಗ ಪಡಿಸಿದ್ದಾರೆ. ಇದರೊಂದಿಗೆ, ಅಣ್ಣನ ಹತ್ಯೆ ಪ್ರತೀಕಾರಕ್ಕೆ ಆದಿಲ್ ಹಿಂದೂಗಳನ್ನೂ ಬಳಸಿಕೊಂಡಿರುವುದು ಬಯಲಾದಂತಾಗಿದೆ.
ಸುಹಾಸ್ ಶೆಟ್ಟಿ ಹತ್ಯೆಯ ಭೀಕರ ದೃಶ್ಯ ಸಿಸಿಟಿವಿ ಹಾಗೂ ಸ್ಥಳೀಯರ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಮಂಗಳೂರಿನ ಪೊಲೀಸರು ಕೂಡ ಇದೇ ವಿಡಿಯೋಗಳನ್ನು ಆಧರಿಸಿ ಆರೋಪಿಗಳ ಬೆನ್ನುಬಿದ್ದಿದ್ದರು.
ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅವಿತುಕೊಂಡಿದ್ದ ವಿಚಾರ ತಿಳಿದಿದ್ದ ಪೊಲೀಸರು, ಎಂಟು ಮಂದಿಯ ಹೆಡೆಮುರಿ ಕಟ್ಟಿದ್ದಾರೆ. ಅಬ್ದುಲ್ ಸಫಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ಮೊಹಮ್ಮದ್ ರಿಜ್ವಾನ್, ರಂಜಿತ್ ಹಾಗೂ ನಾಗರಾಜ್‌ನನ್ನ ಬಂಧಿಸಿದ್ದಾರೆ. ಈ ವೇಳೆ ಸುಹಾಸ್ ಕೊಲೆಯಲ್ಲಿ ಒಂಬತ್ತು ಜನ ಶಾಮೀಲಾಗಿರುವುದು ಬಯಲಾಗಿದೆ.
ತನಿಖೆ ಆರಂಭಿಸಿದ ಪೊಲೀಸರಿಗೆ 2023ರ ಪ್ರಕರಣವೊಂದರ ಕುರಿತ ಮಾಹಿತಿ ಆಧಾರದ ಮೇಲೆ ತನಿಖೆ ನಡೆಸಿದ ಪೋಲಿಸರಿಗೆ ಅಸಲಿ ಸತ್ಯ ಗೊತ್ತಾಗಿದ್ದು ಈ ಹಿಂದೆ ಸುಹಾಸ ಶೆಟ್ಟಿ ತಂಡದಿಂದ ಹತ್ಯೆಯಾಗಿದ್ದ ಫೈಜಲ್ ಸಹೋದರ ಆದಿಲ್ ಸುಹಾಸ ಶೆಟ್ಟಿ ತಂಡದಲ್ಲಿ ಗುರುತಿಸಿಕೊಂಡು ಸುಹಾಸ ಹತ್ಯೆಗೆ ಸಂಚು ರೂಪಿಸಿರುವುದು ತನಿಖೆ ವೇಳೆ ಬಯಲಾಗಿದೆ.
ಸುಹಾಸ ಹತ್ಯೆಗೆ ಹಿಂದೂ ಯುವಕರನ್ನು ಬಳಸಿಕೊಂಡು ಆದಿಲ್ ಅಣ್ಣನ ಹತ್ಯೆಗೆ ಪ್ರತಿಕಾರ ತೀರಿಸಿಕೊಂಡಿರುವುದು ಬಹಿರಂಗವಾಗಿದೆ.
ಈ ಕುರಿತು ಮಂಗಳೂರಿನಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಗೃಹ ಸಚಿವ ಜಿ.ಪರಮೇಶ್ವರ ಸಂಪೂರ್ಣ ಮಾಹಿತಿ ಪಡೆದುಕೊಂಡು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಕೊಲೆ ಪ್ರಕರಣದ ಆರೋಪಿಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಕಠಿಣ ಶಿಕ್ಷೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಮಾಜದಲ್ಲಿ ಶಾಂತಿ ಕಾಪಾಡುವುದು ಎಲ್ಲರ ಕರ್ತವ್ಯ, ಯಾರು ಪ್ರಚೋದನಕಾರಿ ಹೇಳಿಕೆ ನೀಡಬಾರದು. ನೀಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೋಲಿಸರಿಗೆ ಅಧಿಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿರುವ ಕೊಲೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿರುವುದು ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa