ಗದಗ, 20 ಮೇ (ಹಿ.ಸ.) :
ಆ್ಯಂಕರ್ : ಪ್ರೀತಿಯ ಹೆಸರಿನಲ್ಲಿ ಜೊತೆಯಾದ ದಾಂಪತ್ಯ, ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ ನಡೆದಿರುವ ಭಯಾನಕ ಘಟನೆ ಜನರ ಮನದಲ್ಲಿ ಬೆಚ್ಚಿ ಬೀಳಿಸುವಂತೆ ಮಾಡಿದೆ. ಪತಿಯೊಂದಿಗೆ ಜೀವನ ನಡೆಸುತ್ತಿದ್ದ ವಿದ್ಯಾ ಎಂಬ ಮಹಿಳೆ, ತನ್ನ ಪ್ರಿಯಕರ ಶಿವಕುಮಾರ್ ಜೊತೆ ಸೇರಿ ಗಂಡನನ್ನು ಹತ್ಯೆ ಮಾಡಿದ ಭಯಾನಕ ಸತ್ಯ ಇದೀಗ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.
ಗದಗ ಜಿಲ್ಲೆಯ ರೋಣ ನಿವಾಸಿಯಾದ ಶಂಕ್ರಪ್ಪ ಕೊಳ್ಳಿ ಎಂಬವರು ಕೆಲವು ದಿನಗಳಿಂದ ನಾಪತ್ತೆಯಾಗಿದ್ದು, ಪತ್ನಿ ವಿದ್ಯಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು. ಈ ವೇಳೆ ಮುಗಳಿ ಗ್ರಾಮದ ಹೊರವಲಯದ ಬಾವಿಯಲ್ಲಿ ಪುರುಷನ ಶವ ಪತ್ತೆಯಾಗಿತ್ತು. ಇದೆ ವೇಳೆ ವಿದ್ಯಾಳನ್ನು ಶವವನ್ನು ಗುರುತಿಸಲು ಹೇಳಿದರು. ಇದು ತನ್ನ ಗಂಡನ ಶವ ಎಂದು ಹೇಳಿ, ತನ್ನ ಭಾವನ ಮೇಲೆ ಕೊಲೆ ಆರೋಪ ಮಾಡಿದ್ದಳು.
ಆದರೆ ಪೊಲೀಸ್ ತನಿಖೆ ಸಂದರ್ಭದಲ್ಲಿ ವಿದ್ಯಾ ಹೇಳಿಕೆಗಳಲ್ಲಿ ತಾರತಮ್ಯ ಕಂಡು ಬಂದಿತು. ಶಂಕ್ರಪ್ಪನ ಶವದ ಮೇಲೆ ಪತ್ತೆಯಾದ ಹಾಸಿಗೆ ಹಾಗೂ ಬಟ್ಟೆ, ಅವರ ಮನೆಯದ್ದೆಂಬುದು ದೃಢಪಟ್ಟಿತ್ತು. ಪರಿಣಾಮವಾಗಿ ವಿಚಾರಣೆ ಮಾಡಿದ ಪೊಲೀಸರಿಗೆ ಕ್ರೂರ ಸತ್ಯ ಬಹಿರಂಗವಾಯಿತು. ವಿದ್ಯಾ ತನ್ನ ಪ್ರಿಯಕರ ಶಿವಕುಮಾರ್ ಜೊತೆಗೆ ಸೇರಿ ಪತಿಯ ಕೊಲೆಯ ಸೂತ್ರ ರಚಿಸಿದ್ದಳು.
ಮನೆಯಲ್ಲೇ ಗಾಢ ನಿದ್ರೆಯಲ್ಲಿದ್ದ ಶಂಕ್ರಪ್ಪನಿಗೆ ರಾಡ್‌ನಿಂದ ಹೊಡೆದು ಶಿವಕುಮಾರ್ ಕೊಲೆ ಮಾಡಿದ್ದನು. ನಂತರ ಶವವನ್ನು ಹಾಸಿಗೆ ಮತ್ತು ಬಟ್ಟೆಯಲ್ಲಿ ಕಟ್ಟಿ, ಬಾವಿಗೆ ಎಸೆದಿದ್ದನು. ವಿದ್ಯಾ ಮನೆಯಲ್ಲಿಯೇ ರಕ್ತದ ಕಲೆಗಳನ್ನು ಅಡಗಿಸಿ, ಮಕ್ಕಳೊಂದಿಗೆ ಇದ್ದಂತೆ ನಡೆದುಕೊಂಡು, ನಂತರ ಗಂಡ ನಾಪತ್ತೆಯಾಗಿದ್ದಾನೆ ಎಂಬ ನಾಟಕವಾಡಿದ್ದಳು.
ಈಗ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಸುತ್ತಿದ್ದಾರೆ. ಶಂಕ್ರಪ್ಪನ ಸಹೋದರಿ ತಮ್ಮ ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರಾಗಿದ್ದಾರೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP