ಕೋಲಾರ, ೦೬ ಏಪ್ರಿಲ್ (ಹಿ.ಸ) ಆಂಕರ್ :
ಆ್ಯಂಕರ್ : ಶ್ರೀರಾಮನವಮಿ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಶ್ರೀರಾಮಸೇನೆ ಸಂಘಟನೆ ನಗರದ ಗಾಂಧಿವನದಲ್ಲಿ ನಿರ್ಮಿಸಿದ್ದ ಅದ್ದೂರಿ ವೇದಿಕೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಟಾಪಿಸಿದ್ದು, ಮೂರು ದಿನಗಳ ಕಾಲ ನಡೆದ ರಾಮೋತ್ಸವದ ನಂತರ ನಡೆದ ಶೋಭಾಯಾತ್ರೆಗೆ ಖ್ಯಾತ ಚಿತ್ರನಟ ವಶಿಷ್ಟ ಸಿಂಹ ಚಾಲನೆ ನೀಡಿದರು.
ಧರ್ಮ ಉಳಿಸುವ ಕಾರ್ಯ ಇಂದು ಅಗತ್ಯವಾಗಿದೆ, ಸಮಾಜದಲ್ಲಿ ಹಿಂದೂ ಧರ್ಮದ ಮಹತ್ವವನ್ನು ತಿಳಿಸಿಕೊಡಿ, ಸಮಾಜದ ಯುವಕರು ದಾರಿ ತಪ್ಪದಂತೆ ಎಚ್ಚರ ವಹಿಸಿ ಮತ್ತು ಸಂಘಟಿತರಾಗಿ ಎಂದು ಕರೆ ನೀಡಿದರು.
ಇಡೀ ವಿಶ್ವದಲ್ಲೇ ಹಿಂದೂ ಧರ್ಮದಷ್ಟು ಪುರಾತನವಾದ ಧರ್ಮ ಬೇರೊಂದಿಲ್ಲ, ಭಾರತ ವಿಶ್ವಗುರುವಾಗುವ ಹಾದಿಯಲ್ಲಿ ಧರ್ಮ ಉಳಿಸುವ ಕಾರ್ಯವೂ ಅದರ ಜತೆಗೆ ನಡೆಯಬೇಕು ಎಂದು ತಿಳಿಸಿ ಪ್ರತಿ ವರ್ಷವೂ ರಾಮೋತ್ಸವವನ್ನು ಮತ್ತಷ್ಟು ವೈಭವದಿಂದ ಆಚರಿಸಿ ಧರ್ಮ ರಕ್ಷಣೆಗೆ ಸಂಕಲ್ಪ ತೊಡಿ ಎಂದರು.
ಕಳೆದ ಮೂರು ದಿನಗಳಿಂದ ಗಾಂಧಿವನದಲ್ಲಿ ಅತ್ಯಂತ ಅದ್ಬುತವಾದ ವೇದಿಕೆ ನಿರ್ಮಿಸಿ ರಾಮಲಲ್ಲಾ ಪ್ರತಿಮೆ ಪ್ರತಿಷ್ಟಾಪಿಸಿ ಪೂಜೆ ನಡೆಸಲಾಯಿತು. ಇಡೀ ಎಂ.ಜಿ.ರಸ್ತೆಯಲ್ಲಿ ಕೇಸರಿ ಧ್ವಜಗಳು ರರಾಜಿಸುವಂತೆ ಮಾಡಲಾಗಿತ್ತು. ಮೆರವಣಿಗೆ ನಗರದ ಎಂ.ಜಿ.ರಸ್ತೆ, ಎಲೆಪೇಟೆ, ಕಾಳಮ್ಮ ಗುಡಿ ರಸ್ತೆ ಮೂಲಕ ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿದ್ದು, ಮಾರ್ಗದುದ್ದಕ್ಕೂ ಜೈಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತ್ತು. ಸಾವಿರಾರು ಸಂಖ್ಯೆಯಲ್ಲಿದ್ದ ಯುವಕರು ಕೇಸರಿ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಇಡೀ ಎಂ.ಜಿ.ರಸ್ತೆ ಕೇಸರಿಮಯವಾಗಿತ್ತು.
ರಾಮೋತ್ಸವದ ಅಂಗವಾಗಿ ಕಳೆದ ಮೂರು ದಿನಗಳಿಂದಲೇ ಶ್ರೀರಾಮಸೇನೆ ಸಿದ್ದತೆ ನಡೆಸಿದ್ದು, ಇಡೀ ಎಂ.ಜಿ.ರಸ್ತೆ ವಿದ್ಯುತ್ ದೀಪಗಳಿಂದ ಝಗಮಗಿಸುವಂತೆ ಮಾಡಿದ್ದರು. ಮೂರು ದಿನಗಳೂ ಸಾಂಸ್ಕೃತಿಕ ಕಾರ್ಯಾಕ್ರಮಗಳನ್ನು ನಡೆಸಲಾಯಿತು.
ತಮಟೆನಾದ, ಡೊಳ್ಳು ಮತ್ತಿತರ ಕಲಾತಂಡಗಳ ತಾಳಕ್ಕೆ ಯುವಕರು ಕುಣಿಯುತ್ತಾ, ಜೈಶ್ರೀರಾಂ ಘೋಷಣೆಯೊಂದಿಗೆ ಮೆರವಣಿಗೆಗೆ ಮೆರಗು ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಶ್ರೀರಾಮಸೇನೆ ಪದಾಧಿಕಾರಿಗಳಾದ ವಿಭಾಗೀಯ ಅಧ್ಯಕ್ಷ ರಮೇಶ್ ರಾಜ್, ಬಜರಂಗದಳದ ಬಾಲಾಜಿ, ಬಾಬು, ಅಣ್ಣಮ್ಮರಾಜೇಂದ್ರ, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಚಿನ್ನಪ್ಪ, ತಾಲ್ಲೂಕು ಅಧ್ಯಕ್ಷ ಸಿ.ನಾಗರಾಜ್, ನಗರ ಅಧ್ಯಕ್ಷ ಸುಪ್ರೀತ್, ಪದಾಧಿಕಾರಿಗಳಾದ ನಾಗರಾಜ್, ಮಹೇಶ್, ನಾಗೇಂದ್ರ, ಶಬರೀಷ್‌ಶೆಟ್ಟಿ, ಕಾರ್ತಿಕ್, ದರ್ಶನ್, ಗುರು, ದೀಫಕ್, ಅಪ್ಪು, ದರ್ಶಿತ್,ಚಂದನ್, ಶ್ರೀಕಾಂತ್, ವಕೀಲ ನಾರಾಯಣಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
ಚಿತ್ರ : ಕೋಲಾರದ ಗಾಂಧಿವನದಲ್ಲಿ ಶ್ರೀರಾಮಸೇನೆಯಿಂದ ಆಯೋಜಿಸಿರುವ ರಾಮನವಮಿ ಹಾಗೂ ಬೃಹತ್ ಶೋಭಾಯಾತ್ರೆಗೆ ಖ್ಯಾತ ಚಿತ್ರನಟ ವಶಿಷ್ಟ ಸಿಂಹ ಚಾಲನೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್