ವಿಜಯಪುರ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರು ತಮ್ಮ ಸ್ನೇಹಿತರ ಜನ್ಮ ದಿನದಂದು ಮೈಮರೆತು ನೃತ್ಯ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.
ಕಳೆದ ಕೆಲ ದಿನಗಳ ಹಿಂದೆ ನಡೆದಿದ್ದು ಎನ್ನಲಾದ, ಜಿಲ್ಲಾಧ್ಯಕ್ಷರ ಸ್ನೇಹಿತ ಡಾ.ರಾಜುಗೌಡ ಬಿರಾದಾರ್ ಅವರ ಜನ್ಮ ದಿನದಂದು ಜಿಲ್ಲಾಧ್ಯಕ್ಷ ಅಂಗಡಿ ಕುಡಿದು ಮನ ಬಂದಂತೆ ನೃತ್ಯ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈ ವಿಡಿಯೋ ತುಣುಕನ್ನು ಶಾಸಕ ಯತ್ನಾಳ್ ಅವರ ಅಭಿಮಾನಿಗಳು ನಿರ್ಮಿಸಿರುವ ಯತ್ನಾಳ್ ವಾರಿಯರ್ಸ್ ಎಂಬ ಫೇಸ್ ಬುಕ್ ಖಾತೆಯಿಂದ ಹರಿಬಿಡುವ ಮೂಲಕ ಜಿಲ್ಲಾಧ್ಯಕ್ಷ ಅಂಗಡಿ ಅವರ ಮಾನ ಹರಾಜು ಮಾಡಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ಯತ್ನಾಳ ಅಸಮಾಧಾನ ಹೊರ ಹಾಕಿದ್ದರು. ವಿಜಯಪುರ ಜಿಲ್ಲೆಗೆ ಸಮರ್ಥ ಮುಖಂಡನನ್ನು ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದರು. ಆದರೆ ರಾಜ್ಯಾಧ್ಯಕ್ಷ ವಿಜಯೇಂದ್ರ, ಯತ್ನಾಳ್ ವಿರೋಧಿ ಬಣದ ಮುಖಂಡ ಗುರುಲಿಂಗಪ್ಪ ಅಂಗಡಿ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.
ಆ ಸೇಡಿಗೆ ಎಂಬಂತೆ ಅಂಗಡಿ ಅವರು ಈ ಹಿಂದೆ ತಡ ರಾತ್ರಿ ಕುಡಿದ ಅಮಲಿನಲ್ಲಿ ನೃತ್ಯ ಮಾಡಿದ್ದಾರೆ. ಇವರು ಯಾರು ಎಂದು ಗುರುತಿಸುತ್ತೀರಾ ಎಂಬ ಬರಹಗಳಿರುವ ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡುವ ಮೂಲಕ ಅಂಗಡಿ ಅವರನ್ನು ವ್ಯವಸ್ಥಿತವಾಗಿ ತೇಜೋವಧೆ ಮಾಡಲಾಗಿದೆ ಎಂಬ ಮಾತುಗಳು ಜಿಲ್ಲೆಯ ಜನರಲ್ಲಿ ಕೇಳಿ ಬರುತ್ತಿವೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳಿಗೆ ಸಿಗದೇ ಜಿಲ್ಲಾಧ್ಯಕ್ಷ ಅಂಗಡಿ ವಿಡಿಯೋ ಬಗ್ಗೆ ಸ್ಪಷ್ಟಣೆ ನೀಡದೇ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು, ಜಿಲ್ಲಾಧ್ಯಕ್ಷ ಅಂಗಡಿ ಅವರ ಅದ್ವಾನದ ಕುಡಿದ ಅಮಲಿನ ನೃತ್ಯ ಕಣ್ತುಂಬಿಕೊಂಡು ಎಂಥಹ ವ್ಯಕ್ತಿಯನ್ನು ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎಂದು ಮನದಲ್ಲೇ ಕೊರಗುವಂತಾಗಿದೆ.
ಯತ್ನಾಳ್ ಅವರ ಉಚ್ಚಾಟನೆ, ವಿಜಯಪುರ ಜಿಲ್ಲಾ ಬಿಜೆಪಿ ಪಕ್ಷದಲ್ಲಿ ದಿನಕ್ಕೊಂದು ವಿದ್ಯಮಾನ ಆಗುತ್ತಿರುವುದು ಪಕ್ಷ ಸಂಘಟನೆಗೆ ಬಹು ದೊಡ್ಡ ಹೊಡೆತ ಬಿದ್ದಂತಾಗಿದೆ ಎಂದು ಕಾರ್ಯಕರ್ತರು ಮನಸ್ಸಿನಲ್ಲಿ ನೋವು ಅನುಭವಿಸುವಂತಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಪ್ರಸನ್ನ