ರಾಯಚೂರು, 02 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೌಟುಂಬಿಕ ಕಲಹದ ವಿಚಾರಣೆಗೆ ವ್ಯಕ್ತಿಯನ್ನು ಠಾಣೆಗೆ ಕರೆಸಿ, ಹಲ್ಲೆ ನಡೆಸಿದ ಪರಿಣಾಮ ಆತನು ಮೃತಪಟ್ಟಿರುವ ಆರೋಪ ಕೇಳಿ ಬಂದಿದ್ದು, ಈ ಪ್ರಕರಣಕ್ಕೆ ಸಂಬ0ಧಿಸಿದ0ತೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯ ಸಿಪಿಐ ನಾಗರಾಜ ಮೆಕಾ, ಪಿಎಸ್‌ಐ ಮಂಜುನಾಥ ಅವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಎಸ್.ಪಿ. ಪುಟ್ಟಮಾದಯ್ಯ ಅವರು ಅಮಾನತು ಆದೇಶವನ್ನು ಜಾರಿ ಮಾಡಿ, ಇಲಾಖಾ ತನಿಖೆಗೆ ಆದೇಶ ನೀಡಿದ್ದಾರೆ. ನಗರದ ಈಶ್ವರನಗರದ ನಿವಾಸಿ ವಿರೇಶ್ ಎಂಬವರ ಸಾವಿಗೆ ಪಶ್ಚಿಮ ಪೊಲೀಸ್ ಠಾಣೆಯ ಸಿಪಿಐ ನಾಗರಾಜ ಮೇಕಾ ಮತ್ತು ಪಿಎಸ್‌ಐ ಮಂಜುನಾಥ ಕಾರಣ ಎಂದು ಮೃತನ ಸಹೋದರಿ ದೂರು ದಾಖಲಿಸಿದ್ದರು. ಕಾರಣ ಇವರನ್ನು ಅಮಾನತು ಮಾಡಿ, ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಲಾಗಿದೆ.
ವೀರೇಶ್‌ನ ಸಾವಿಗೆ ಕಾರಣರಾದವರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಶಾಸಕ ಡಾ. ಶಿವರಾಜ ಪಾಟೀಲ್ ಅವರು ಸಂತ್ರಸ್ತನ ಕುಟುಂಬದ ಸದಸ್ಯರ ಜೊತೆಯಲ್ಲಿ ಎಸ್ಪಿ ಕಚೇರಿ ಮುಂದೆ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು.
ಸಂತ್ರಸ್ತ ವ್ಯಕ್ತಿ ವೀರೇಶ್ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ವಿಚಾರಣೆ ಮಾಡುವ ವೇಳೆ ಸಿಪಿಐ ನಾಗರಾಜ ಹಾಗೂ ಪಿಎಸ್‌ಐ ಮಂಜುನಾಥ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾರಣ ಈ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಹಾಗೂ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್