ಗದಗ ಬೆಟಗೇರಿ ನಗರಸಭೆಯ ಆಯವ್ಯಯ ವಿಶೇಷ ಸಭೆ
Gadag Betageri Stadsraad Begroting Spesiale Vergadering
ಫೋಟೋ


ಗದಗ, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗದಗ ಬೆಟಗೇರಿ ನಗರಸಭೆ ಸಭಾಭವನದಲ್ಲಿ ಗದಗ ಬೆಟಗೇರಿ ನಗರಸಭೆಯ ಆಯವ್ಯಯ ವಿಶೇಷ ಸಭೆಯು ಗದಗ ಬೆಟಗೇರಿ ನಗರಸಭೆಯ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಸಿ.ಎನ್. ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರಾದ ರಾಜಾರಾಮ್ ಪವಾರ್ ಅವರು 2025-2026 ರ ಆಯವ್ಯಯವನ್ನು ಮಂಡಿಸಿದರು. ಜಿಲ್ಲಾಧಿಕಾರಿ ಹಾಗೂ ಗದಗ ಬೆಟಗೇರಿ ನಗರಸಭೆ ಆಡಳಿತಾಧಿಕಾರಿ ಸಿ.ಎನ್. ಶ್ರೀಧರ್ ಅವರು 2025-26 ನೇ ಸಾಲಿನ ಆಯವ್ಯಯಕ್ಕೆ ಅನುಮೋದನೆ ನೀಡಿದರು.

2025-26ನೇ ಸಾಲಿನ ಆಯವ್ಯಯದಲ್ಲಿನ ಮುಖ್ಯಾಂಶಗಳು ಈ ಕೆಳಗಿನಂತಿವೆ.

ಮಿಗತೆಯ ಅಂದಾಜು ಆಯವ್ಯಯ: 2025-26 ನೇ ಸಾಲಿನಲ್ಲಿ ರಾಜಸ್ವ ಖಾತೆಯಲ್ಲಿ ರೂ. 6763.23 ಲಕ್ಷಗಳನ್ನು, ಬಂಡವಾಳ ಖಾತೆಯಲ್ಲಿ ರೂ. 2501.69 ಲಕ್ಷ ಹಾಗೂ ಅಸಾಧಾರಣ ಖಾತೆಯಲ್ಲಿ ರೂ. 2495.58 ಲಕ್ಷಗಳನ್ನು ಒಟ್ಟು ರೂ. 11760.50 ಲಕ್ಷಗಳ ಸ್ವೀಕೃತಿಯನ್ನು ನಿರೀಕ್ಷಿಸಲಾಗಿದೆ.

ರಾಜಸ್ವ ಖಾತೆಯಲ್ಲಿ ರೂ. 7822.31 ಲಕ್ಷಗಳ ರಾಜಸ್ವ ವೆಚ್ಚವನ್ನು, ಬಂಡವಾಳ ಖಾತೆಯಲ್ಲಿ ಆಸ್ತಿ ನಿರ್ಮಾಣಕ್ಕಾಗಿ ರೂ. 4720.97 ಲಕ್ಷಗಳನ್ನು ವೆಚ್ಚಕ್ಕಾಗಿ ಮೀಸಲಿರಿಸಿ, ಅಸಾಧಾರಣ ಖಾತೆಯಲ್ಲಿ ರೂ. 2995.19 ಲಕ್ಷಗಳ ಅಸಾಧಾರಣ ಆದಾಯವನ್ನು ನಿರೀಕ್ಷಿಸಿ ಒಟ್ಟಾರೆಯಾಗಿ ರೂ. 15538.47 ಲಕ್ಷಗಳ ವೆಚ್ಚವನ್ನು ನಿರೀಕ್ಷಿಸಿ, ರೂ. 3777.97 ಲಕ್ಷಗಳ ಕೊರತೆಯನ್ನು ಅಂದಾಜಿಸಿದೆ. ಈ ಕೊರತೆಯನ್ನು ರೂ. 4224.94 ಲಕ್ಷಗಳ ಆರಂಭಿಕ ಶಿಲ್ಕುದಿಂದ ಸರಿದೂಗಿಸಿ ಒಟ್ಟಾರೆಯಾಗಿ ರೂ. 446.97 ಲಕ್ಷಗಳ ಉಳಿತಾಯ/ಮಿಗತೆಯ ಅಂದಾಜನ್ನು ಮಂಡಿಸಿದೆ.

ನಗರಸಭೆಯ ಆಯ-ವ್ಯಯದಲ್ಲಿ ಸ್ವೀಕೃತಿ/ಆದಾಯ: ಆಯ-ವ್ಯಯದಲ್ಲಿ ನಗರಸಭೆಗೆ ಆಸ್ತಿ ತೆರಿಗೆಯಿಂದ ಶೇ% 21 ರಷ್ಟು, ವಹಿಸಿದ ಸ್ವೀಕೃತಿಯಿಂದ ಶೇ% 1 ರಷ್ಟು, ಮಳಿಗೆಗಳ ಬಾಡಿಗೆಯಿಂದ ಶೇ% 1 ರಷ್ಟು, ಫೀ ಹಾಗೂ ಬಳಕೆ ವೆಚ್ಚದಿಂದ ಶೇ% 15 ರಷ್ಟು ಹಾಗೂ ರಾಜ್ಯ/ಕೇಂದ್ರ ಸರ್ಕಾರದ ಅನುದಾನ/ವಂತಿಕೆಗಳಿAದ ಶೇ% 62 ರಷ್ಟು, ಆದಾಯ ಬರಬಹುದೆಂದು ಅಂದಾಜಿಸಲಾಗಿದೆ.

ಸಿಬ್ಬಂದಿ ವೇತನ/ಮಾನವ ಸಂಪನ್ಮೂಲ ವೆಚ್ಚಕ್ಕಾಗಿ ಶೇ% 37 ರಷ್ಟು, ಆಡಳಿತಕ್ಕೆ ಸಂಬAಧಿಸಿದ ವೆಚ್ಚಕ್ಕಾಗಿ ಶೇ% 3 ರಷ್ಟು, ದುರಸ್ತಿ ಮತ್ತು ನಿರ್ವಹಣೆ ವೆಚ್ಚಕ್ಕಾಗಿ ಶೇ% 35 ರಷ್ಟು, ಕಾರ್ಯಕ್ರಮ ವೆಚ್ಚಕ್ಕಾಗಿ ಶೇ% 8 ರಷ್ಟು, ನಗರದ ಬಡವರ ಏಳ್ಗೆಗಾಗಿ ಶೇ% 1 ರಷ್ಟು ಖರ್ಚು ಮಾಡುವ ಪ್ರಾವದಾನ ಮಾಡಿಕೊಳ್ಳಲಾಗಿದೆ. ರಾಜಸ್ವ ಆದಾಯಗಳಲ್ಲಿ ಮುಖ್ಯವಾಗಿ ಸರಕಾರದಿಂದ ಮುಕ್ತನಿಧಿ ಅನುದಾನ ರೂ. 37.00 ಲಕ್ಷ; ವೇತನ ಅನುದಾನ ರೂ. 1720.00 ಲಕ್ಷ; ವಿದ್ಯುಶ್ಚಕ್ತಿ ಅನುದಾನದಿಂದ ರೂ. 2126.00 ಲಕ್ಷ ಹಾಗೂ ನೀರು ಸರಬರಾಜು ವ್ಯವಸ್ಥೆಗಾಗಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ರೂ. 25.00 ಲಕ್ಷಗಳನ್ನು ನೀರಿಕ್ಷಿಸಿದೆ.

ಆಸ್ತಿ ತೆರಿಗೆ ಆದಾಯದಿಂದ ರೂ. 1400.00 ಲಕ್ಷ; ಅಭಿವೃದ್ದಿ ಶುಲ್ಕದಿಂದ ರೂ. 100.00 ಲಕ್ಷ; ಕಟ್ಟಡ ಅನುಮತಿ ಶುಲ್ಕದಿಂದ ರೂ. 60.00 ಲಕ್ಷಗಳನ್ನು ನಿರೀಕ್ಷಿಸಿದೆ. ಅದೇ ರೀತಿ ವಾಣಿಜ್ಯ ಸಂಕೀರ್ಣಗಳ ಬಾಡಿಗೆಯಿಂದ ರೂ. 65.00 ಲಕ್ಷ; ಅಂಗಡಿಗಳ ಲೈಸೆನ್ಸದಿಂದ ರೂ. 65.00 ಲಕ್ಷ; ಖಾತಾ ನಕಲು ಶುಲ್ಕದಿಂದ ರೂ. 16.00 ಲಕ್ಷ; ಖಾತಾ ಬದಲಾವಣೆಯಿಂದ ರೂ. 110.00 ಲಕ್ಷ; ಘನತಾಜ್ಯ ನಿರ್ವಹಣೆ ಶುಲ್ಕದಿಂದ ರೂ. 65.00 ಲಕ್ಷ; ಒಳಚರಂಡಿ ಬಳಕೆದಾರರ ಫೀ ರೂ. 10.00 ಲಕ್ಷ ಹಾಗೂ ನೀರು ಸರಬರಾಜು ಫೀ ಯಿಂದ ರೂ. 250.00 ಲಕ್ಷಗಳ ಆದಾಯವನ್ನು ನಿರೀಕ್ಷಿಸಿ ಅಂದಾಜಿಸಿದೆ.

ನಗರಸಭೆಯ ಕಂದಾಯ ಶಾಖೆಯಿಂದ ನೀಡಲಾಗುವ ವಿವಿಧ ಸೇವೆಗಳನ್ನು ಉನ್ನತಿಕರಿಸಲು ಹಾಗೂ ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ಕರ ವ್ಯಾಪ್ತಿಗೆ ತರಲು ಸಾಕಷ್ಟು ಕ್ರಮಗಳನ್ನು ಮುಂದುವರೆಸಲಾಗಿದೆ. ಹೀಗಾಗಿಯೇ ಪ್ರಸ್ತುತ ಸುಮಾರು ರೂ. 1300.00 ಲಕ್ಷಗಳಿರುವ ಆಸ್ತಿ ತೆರಿಗೆಯನ್ನು ರೂ. 1400.00 ಲಕ್ಷಗಳಿಗೆ ಹೆಚ್ಚಿಸಿ ಕಂದಾಯ ವಸೂಲಾತಿಯ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ನಗರಸಭೆಯ ಆಡಳಿತ: 2025-26 ನೇ ಸಾಲಿನಲ್ಲಿ ಪೌರಕಾರ್ಮಿಕರ ಬೆಳಗಿನ ಉಪಹಾರದ ವ್ಯವಸ್ಥೆ ರೂ. 61.00 ಲಕ್ಷಗಳನ್ನು ಅವರ ಅಭ್ಯದಯ ವೆಚ್ಚಕ್ಕಾಗಿ ಮೀಸಲಿರಿಸಲಾಗಿದೆ. ಪ್ರಿಂಟಿAಗ ಮತ್ತು ಸ್ಟೇಶನರಿಗಾಗಿ ರೂ. 22.25 ಲಕ್ಷಗಳನ್ನು; ಆಡಳಿತ ಮಂಡಳಿಯ ಗೌರವಧನ ಇತ್ಯಾದಿಗಳಿಗಾಗಿ ರೂ. 49.07 ಲಕ್ಷ; ವಾಹನಗಳ ದುರಸ್ಥಿಗಾಗಿ ರೂ. 65.00 ಲಕ್ಷ; ಹಾಗೂ ವಾಹನಗಳ ವಿಮೆಗಾಗಿ ರೂ. 20.00 ಲಕ್ಷ; ಸಮಾಲೋಚನ ವೆಚ್ಚಕ್ಕಾಗಿ ರೂ. 17.50 ಲಕ್ಷ; ಜಾಹೀರಾತು ಹಾಗೂ ಪ್ರಚಾರಕ್ಕಾಗಿ ರೂ. 26.60 ಲಕ್ಷ; ಸಂಪರ್ಕ ವೆಚ್ಚಕ್ಕಾಗಿ ರೂ 3.50 ಲಕ್ಷ; ಇತ್ಯಾದಿ ಹೀಗೆ ಸಾಮಾನ್ಯ ಆಡಳಿತಕ್ಕಾಗಿ ರೂ. 1557.95 ಲಕ್ಷಗಳನ್ನು ಸನ್ 2025-26 ರಲ್ಲಿ ಮೀಸಲಿಸಿ ಕಾಯ್ದಿರಿಸಿದೆ.

ರಸ್ತೆ ಹಾಗೂ ಚರಂಡಿ: ರಸ್ತೆ ರಿಪೇರಿಗಾಗಿ ರೂ. 80.00 ಲಕ್ಷಗಳನ್ನು ಹಾಗೂ ಹೊಸ ರಸ್ತೆಗಳ ನಿರ್ಮಾಣಕ್ಕಾಗಿ ರೂ. 1001.96 ಲಕ್ಷಗಳನ್ನು ಹಾಗೂ ತ್ಯಾಜ್ಯ ನೀರು ಹರಿಯಲು ಚರಂಡಿ ನಿರ್ವಹಣೆಗೆ ರೂ. 109.50 ಲಕ್ಷಗಳನ್ನು ಹಾಗೂ ಹೊಸ ಚರಂಡಿ ನಿರ್ಮಾಣ ಮಾಡುವ ಕಾರ್ಯಕ್ರಮಕ್ಕಾಗಿ ರೂ. 265.18 ಲಕ್ಷಗಳ ಗುರಿ ಹೊಂದಲಾಗಿದೆ.

ಬೀದಿ ದೀಪ: ನಗರದ ಬೀದಿದೀಪದ ನಿರ್ವಹಣೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಹೊರಗುತ್ತಿಗೆ ನೀಡಲು ಈ ವರ್ಷ ರೂ. 1.35 ಕೋಟಿಗಳನ್ನು ಮೀಸಲಿರಿಸಿದ್ದು ಹಾಗೂ ಹೊಸ ಬಡಾವಣೆಗಳಿಗೆ ಬೀದಿದೀಪದ ವ್ಯವಸ್ಥೆಯನ್ನು ವಿಸ್ತರಿಸುವ ಹಾಗೂ ವಿವಿಧ ಸ್ಥಳಗಳಲ್ಲಿ ಹಾಕುವ ಕಾರ್ಯಕ್ರಮವನ್ನು ಮುಂದುವರೆಸಲಾಗಿದ್ದು, ಅದಕ್ಕಾಗಿ ಈ ವರ್ಷ ರೂ. 1.14 ಕೋಟಿಗಳನ್ನು ಮೀಸಲಿರಿಸಿ ನಗರದ ಎಲ್ಲ ಬಡಾವಣೆ, ಓಣಿ, ಹಾಗೂ ವಿವಿಧ ಸ್ಥಳಗಳಲ್ಲಿ ವಿದ್ಯುತ್-ದೀಪಗಳನ್ನು ಬೆಳಗಿಸುವ ಕಾರ್ಯಕ್ರಮ ಮುಂದುವರಿಸಿದೆ.

ಆರೋಗ್ಯ ಮತ್ತು ನೈರ್ಮಲ್ಯ, ಪಟ್ಟಣದ ನೈರ್ಮಲ್ಯ ಹಾಗೂ ಆರೋಗ್ಯ ಕಾಯ್ದುಕೊಂಡು, ಶುದ್ದ ಕುಡಿಯುವ ನೀರು ಒದಗಿಸಿ ನಗರವಾಸಿಗಳ ಆರೋಗ್ಯ ಸ್ಥಿತಿ ಸುಧಾರಿಸುವ ಕಾರ್ಯಕ್ರಮಕ್ಕಾಗಿ ಈ ಪ್ರಸಕ್ತ ವರ್ಷ ರೂ. 1522.17 ಲಕ್ಷಗಳನ್ನು ಈ ಮುಂಗಡ ಪತ್ರದಲ್ಲಿ ವೆಚ್ಚಕ್ಕಾಗಿ ಪ್ರಸ್ತಾವನೆ ಮಾಡಿಕೊಳ್ಳಲಾಗಿದೆ.

15 ನೇ ಹಣಕಾಸಿನಡಿ ಹೆಚ್ಚುವರಿಯಾಗಿ ನಾನ್ ಮಿಲಿಯನಿಯಮ್ ಪ್ಲಸ್ ಸಿಟೀಸ್, ಅನುದಾನದಡಿ ರೂ. 308.00 ಲಕ್ಷಗಳು ಬಿಡುಗಡೆಯಾಗಿದ್ದು, ಅದನ್ನು ಪೂರ್ಣವಾಗಿ ಸರ್ಕಾರದ ಸುತ್ತೋಲೆಯಂತೆ ನೀರು ಸರಬರಾಜು ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಬಳಸಿಕೊಳ್ಳಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.

ಹೊರಗುತ್ತಿಗೆ ಪೌರಕಾರ್ಮಿಕರು, ಲೋಡರ್ಸಗಳು ಹಾಗೂ ಮನೆ ಮನೆ ಕಸ ಸಂಗ್ರಹಿಸುವ ಕಾರ್ಮಿಕ ಸಿಬ್ಬಂದಿಗಳ ಸಂಭಾವನೆಗಾಗಿ ಪ್ರಸಕ್ತ ವರ್ಷ ರೂ. 560.00 ಲಕ್ಷಗಳನ್ನು ಮೀಸಲಿಡಲಾಗಿದೆ. ಹಾಗೂ ಅವರ ಆರೋಗ್ಯ ಸಂರಕ್ಷಣಾ ಸಾಮಾನುಗಳನ್ನು ಖರೀದಿಸಲು ರೂ. 25.00 ಲಕ್ಷಗಳನ್ನು ಮೀಸಲಿಡಲಾಗಿದೆ. ಈ ವರ್ಷ ಘನತ್ಯಾಜ್ಯ ನಿರ್ವಹಣೆಗೆ ರೂ. 1412.28 ಲಕ್ಷಗಳನ್ನು ಮೀಸಲಿಡಲಾಗಿದೆ. ಹಾಗೂ ಬಂಡವಾಳ ಹೂಡಿ ಹೊಸ ತಂತ್ರಜ್ಞಾನದ ಮಶೀನರಿಗಳನ್ನು ಹಾಗೂ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ರೂ. 252.44 ಲಕ್ಷಗಳನ್ನು ಘನತಾಜ್ಯ ನಿರ್ವಹಣೆ ಕಾರ್ಯಕ್ರಮಕ್ಕಾಗಿ ಮೀಸಲಿಡಲಾಗಿದೆ.

ಕುಡಿಯುವ ನೀರು ಹಾಗೂ ಒಳಚರಂಡಿ: ಮಾನವನಿಗೆ ಅತೀ ಮುಖ್ಯವಾಗಿ ಬೇಕಾಗಿರುವುದು ಶುದ್ದ ನೀರು. ಈ ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯಕ್ಕಾಗಿ ಈ ವರ್ಷ ವಿದ್ಯುತ ಬಿಲ್ಲ ಹೊರತುಪಡಿಸಿ ರೂ. 280.00 ಲಕ್ಷಗಳನ್ನು ವೆಚ್ಚಕ್ಕಾಗಿ ಈ ಆಯ-ವ್ಯಯದಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ. ಹಾಗೂ ಸ್ಥಾವರ ಯಂತ್ರೋಪಕರಣಗಳಂತಹ ಬಂಡವಾಳ ವೆಚ್ಚಕ್ಕಾಗಿ ರೂ. 676.18 ಲಕ್ಷಗಳನ್ನು ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಇದರೊಂದಿಗೆ ರೂ. 1414.00 ಲಕ್ಷಗಳ ವಿದ್ಯುತ ಬಿಲ್ಲ ಪಾವತಿಸಬೇಕಾಗಬಹುದೆಂದು ಅಂದಾಜಿಸಲಾಗಿದೆ.

ಒಳಚರಂಡಿ ಯೋಜನೆಯ ನಿರ್ವಹಣೆಗಾಗಿ ರೂ. 100.00 ಲಕ್ಷಗಳನ್ನು ಹಾಗೂ ನಿರ್ಮಾಣಕ್ಕಾಗಿ ರೂ. 265.18 ಲಕ್ಷಗಳನ್ನು ಪ್ರಸಕ್ತ ಆಯವ್ಯಯದಲ್ಲಿ ಮೀಸಲಿಡಲಾಗಿದೆ.

ಉದ್ಯಾನವನ ಹಾಗೂ ಹಸರೀಕರಣ: ಈ ಉದ್ಯಾನವನ ನಿರ್ವಹಣೆ ಕಾರ್ಯಕ್ರಮಕ್ಕಾಗಿ ರೂ. 54.00 ಲಕ್ಷಗಳನ್ನು ನಿರ್ವಹಣೆಗಾಗಿ ವ್ಯಯಿಸುವ ಅದಲ್ಲದೆ ಸಾಮಾಜಿಕ ಅರಣ್ಯಿಕರಣದಡಿ ಗಿಡ ನಡುವ ಕಾರ್ಯಕ್ರಮಕ್ಕಾಗಿ ಸುಮಾರು ರೂ. 6.00 ಲಕ್ಷಗಳನ್ನು ವೆಚ್ಚಗಾಗಿ ಅವಕಾಶ ಮಾಡಿಕೊಳ್ಳಲಾಗಿದ್ದು, ಇದರಿಂದಾಗಿ ನಗರದ ಸೌಂದರ್ಯ ಹಾಗೂ ಹಸಿರು ಇಮ್ಮಡಿಯಾಗುವ ಭರವಸೆ ನಮಗಿದೆ.

ಸಾರ್ವಜನಿಕ ಸೌಕರ್ಯಗಳು: ನಗರಸಭೆಯ ವ್ಯಾಪ್ತಿಗೆ ಬರುವಂತಹ ರುದ್ರಭೂಮಿಗಳಲ್ಲಿ ಆದ್ಯತೆ ಮೇರೆಗೆ ಪರಿಸರ ಸ್ನೇಹಿ ವಿದ್ಯುತ್,ಚಿತಾಗಾರಗಳನ್ನು ಅಳವಡಿಸಲು ಕಾರ್ಯಕ್ರಮವನ್ನು ಮುಂದುವರೆಸಿದೆ.ಸ್ಮಶಾನ ಮತ್ತು ಶವ ಸಂಸ್ಕಾರ ಸ್ಥಳಗಳ ನಿರ್ವಹಣೆ ರೂ. 24.50 ಲಕ್ಷಗಳನ್ನು ಮೀಸಲಿಡಲಾಗಿದೆ. ಹಾಗೂ ಭಾಗಶಃ ಪೂರ್ಣಗೊಂಡ ಚಿತಾಗಾರಗಳಿಗೆ ರೂ. 109.89 ಲಕ್ಷಗಳನ್ನು ಪೂರ್ಣಗೊಳಿಸಲು ಮೀಸಲಿಡಲಾಗಿದೆ.

ಈಜುಗೊಳ ನಿರ್ವಹರ್ಣೆಗಾಗಿ ರೂ. 10.00 ಲಕ್ಷಗಳನ್ನು ಹಾಗೂ ಕಾಮಗಾರಿ ಬಾಕಿ ಉಳಿದ ಈಜುಗೊಳವನ್ನು ಪೂರ್ಣಗೊಳಿಸಲು ರೂ. 85.00 ಲಕ್ಷಗಳನ್ನು ಮೀಸಲಿಡಿಸಲಾಗಿದೆ.ಇನ್ನಿತರ ಸಾರ್ವಜನಿಕ ನಾಗರಿಕ ಸೌಲಭ್ಯಗಳನ್ನು ಒದಗಿಸಲು ರೂ. 8.00 ಲಕ್ಷಗಳನ್ನು ಮೀಸಲಿಡಿಸಲಾಗಿದೆ. ಇಂದಿರಾ ಕ್ಯಾಂಟಿನ್ ಹಾಗೂ ಇನ್ನಿತರ ಸಾರ್ವಜನಿಕ ಸೌಲಭ್ಯಕ್ಕಾಗಿ ರೂ. 71.50 ಲಕ್ಷಗಳನ್ನು ಮೀಸಲಿಡಲಾಗಿದೆ.ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿನಿರತ ಪತ್ರಕರ್ತರ ಮಕ್ಕಳ ಶ್ರೇಯೊಭಿವೃದ್ಧಿಗಾಗಿ ರೂ. 5.00 ಲಕ್ಷಗಳನ್ನು ವಂತಿಕೆಯಾಗಿ ನೀಡಲು ಅವಕಾಶ ಮಾಡಿಕೊಳ್ಳಲಾಗಿದ್ದು, ಅದಕ್ಕೆ ಮಂಜೂರಿ ಬಯಸಿದೆ.

ಶಿಕ್ಷಣ ಮತ್ತು ಸಂಸ್ಕೃತಿ: ಶಿಕ್ಷಣ ಕ್ಷೇತ್ರಕ್ಕೂ ಸಹ ಈ ಬಾರಿ ಒತ್ತು ನೀಡಿ ನಮ್ಮ ನಗರಸಭೆಯ ಆಧೀನದ ಮುನ್ಸಿಪಲ್ ಹೈ-ಸ್ಕೂಲ್ ನಿರ್ವಹಣೆ ಹಾಗೂ ದುರಸ್ಥಿಗಾಗಿ ರೂ. 6.00 ಲಕ್ಷಗಳನ್ನು ಕಾಯ್ದಿರಿಸಿದೆ. ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನಾಗಿ ನೀಡಲು ರೂ. 60.00 ಸಾವಿರಗಳನ್ನು ಹಾಗೂ ಕ್ರೀಡಾಕೂಟ ಏರ್ಪಡಿಸಲು ರೂ. 55.00 ಸಾವಿರಗಳನ್ನು ಮೀಸಲಿಡಲಾಗಿದೆ.

ಎಸ್.ಸಿ/ಎಸ್.ಟಿ ಹಾಗೂ ಹಿಂದುಳಿದವರ ಅಭಿವೃದ್ಧಿ: ಎಸ್.ಸಿ/ಎಸ್‌ಟಿ ಜನಾಂಗದ, ಆರ್ಥಿಕವಾಗಿ ಹಿಂದುಳಿದವರ ಹಾಗೂ ವಿಕಲ ಚೇತನವುಳ್ಳವರ ಆರ್ಥಿಕ ಸ್ವಾವಲಂಬನೆ ಹಾಗೂ ಅಭಿವೃದ್ದಿಗಾಗಿ ಶೇ%. 34.35% ರಷ್ಟು ಸ್ವೀಕೃತಿಯನ್ನು ಈ ವರ್ಷವೂ ಮೀಸಲಿಡಲಾಗಿದೆ. ಅವರಿಗಾಗಿ ರೂ. 146.55 ಲಕ್ಷಗಳನ್ನು ವ್ಯಯಿಸುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ರದಡಿ ನಗರಸಭೆಯಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ ಹಾಗೂ ಅವರ ನೈರ್ಮಲ್ಯತೆಗಾಗಿ ಆರೋಗ್ಯ ಪರಿಕರ ಒದಗಿಸಲು ಹಾಗೂ ಅವರ ಆರೋಗ್ಯ ತಪಾಸಣೆಯನ್ನು ಆದ್ಯತೆ ಮೇಲೆ ಪರಿಗಣಿಸಿ ವೆಚ್ಚಕ್ಕಾಗಿ ರೂ. 5.00 ಲಕ್ಷಗಳ ಹಣವನ್ನು ಮೀಸಲಿಡಲಾಗಿದೆ.

ಸ್ವಚ್ಛತೆ: :ನಮ್ಮ ನಗರವು ಸುಂದರ, ಸ್ವಚ್ಛ ಹಾಗೂ ನೈರ್ಮಲ್ಯ ನಗರವಾಗಿರುವುದನ್ನು ಉತ್ಕೃಷ್ಟಗೊಳಿಸಲು ಹಾಗೂ ನೈರ್ಮಲ್ಯವನ್ನು ಹೆಚ್ಚಿಸಲು ಸಾರ್ವಜನಿಕ ಹಾಗೂ ವೈಯಕ್ತಿಕ ಶೌಚಾಲಯ ಕಾಮಗಾರಿಗಳನ್ನು ಕೈಗೊಳ್ಳಲು ಸ್ವಚ್ಚ ಭಾರತ ಎಸ್.ಬಿ.ಎಂ-2.0 ಅನುದಾನ ರೂ. 29.70 ಲಕ್ಷ ನಿರೀಕ್ಷಿಸಿ ಕಾಮಗಾರಿಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

2025-26 ನೇ ಸಾಲಿನ ಆಯವ್ಯಯದಲ್ಲಿ ಅಳವಡಿಸಿಕೊಂಡಿರುವ ಕಾರ್ಯಕ್ರಮಗಳು : ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ನಾಗರೀಕರ ಬಹುದಿನಗಳ ಬೇಡಿಕೆಯಾದ ಹಕ್ಕು ಪತ್ರಗಳ ವಿತರಣೆ ಬಗ್ಗೆ ಸರ್ಕಾರದೊಂದಿಗೆ ಪತ್ರ ವ್ಯವಹರಿಸಿ ಅತೀ ಕಡಿಮೆಯ ವಂತಿಕೆ ಫಲಾನುಭವಿಗಳಿಂದ ಪಡೆದು ಹಕ್ಕು ಪತ್ರ ವಿತರಿಸುವ/ಮಾಲೀಕತ್ವ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರಸಭೆಯ ಮಾಲ್ಕಿಕತ್ವದ ವಾಣಿಜ್ಯ ಮಳಿಗೆಗಳನ್ನು ಸರ್ಕಾರದ ಸುತ್ತೋಲೆಯಂತೆ ದರ ನಿಗದಿಸಿ ಬಹಿರಂಗ ಹರಾಜು ಮಾಡುವ ಕಾರ್ಯವನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ನಗರಸಭೆಯ ಮಾಲೀಕತ್ವದ ಅವಧಿ ಮುಗಿದಿರುವ ಲೀಜ್ ಆಸ್ತಿಗಳನ್ನು ಹಿಂಪಡೆಯಲು/ಮುAದಿನ ಕಾನೂನು ಕ್ರಮ ಕೈಗೊಳ್ಳಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಅವುಗಳಿಂದ ಸಹ ಆದಾಯ ಹೆಚ್ಚಿಸಲು (ಪಿಪಿಪಿ) PPP/ ಇನ್ನಿತರ ಯೋಜನೆ ಮುಖಾಂತರ ಕಾರ್ಯಗತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

ನಗರಸಭೆಯ ವ್ಯಾಪ್ತಿಯ ಎಸ್.ಸಿಎಸ್.ಪಿ/ಟಿ.ಎಸ್.ಪಿ ಅನುದಾನದಲ್ಲಿ ಪ.ಜಾ ಹಾಗೂ ಪ.ಪಂಗಡದ ಪ್ರತಿಭಾವಂತ ತಲಾ 02 ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸರ್ಕಾರದ ಸುತ್ತೋಲೆಯ ವ್ಯಾಪ್ತಿಯೊಳಗೆ ಬಿ.ಇ/ಎಂ.ಬಿ.ಬಿ.ಎಸ್/ವೃತ್ತಿಪರ ಸ್ನಾತಕೋತ್ತರ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳ ಒಂದು ವರ್ಷದ ಪೂರ್ಣ ಶಿಕ್ಷಣ ಶುಲ್ಕ ಭರಿಸುವ ಕಾರ್ಯಕ್ರಮವನ್ನು 2025-26 ನೇ ಸಾಲಿನಲ್ಲಿ ಹಾಕಿಕೊಳ್ಳಲಾಗಿದೆ.

ಕುಡಿಯುವ ನೀರಿನ 24/7 ನೀರು ಸರಬರಾಜು ವ್ಯವಸ್ಥೆಗೆ ಪರ್ಯಾಯವಾಗಿ ಕ್ಲಿಷ್ಟಕರ ಸಮಯದಲ್ಲಿ ಬೋರವೆಲ್ ಮುಖಾಂತರ ನೀರು ಸರಬರಾಜು ವ್ಯವಸ್ಥೆ ಮಾಡಲು ಈಗಾಗಲೇ ಅಸ್ತಿತ್ವದಲ್ಲಿರುವ ಬೋರವೆಲ್‌ಗಳ ನಿರ್ವಹಣೆ ಹಾಗೂ ದುರಸ್ಥಿಗಾಗಿ ಆಯ-ವ್ಯಯದಲ್ಲಿ ಸಾಕಷ್ಟು ಅನುದಾನವನ್ನು ಮೀಸಲಿಡಲಾಗಿದೆ. ಒಳಚರಂಡಿ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಅವಶ್ಯಕ ಪ್ರತಿ ಮನೆಗೆ ಒಳಚರಂಡಿ ಜೋಡಣೆಯಾಗಿರುವ ಬಗ್ಗೆ ಖಚಿತಪಡಿಸಿಕೊಂಡು ಜೋಡಣೆಯಾಗದಿದ್ದಲ್ಲಿ ಅವುಗಳನ್ನು ಜೋಡಿಸುವ ಕಾರ್ಯಕ್ರಮವನ್ನು ಆಸಕ್ತ ಏಜನ್ಸಿಗಳೊಂದಿಗೆ ಒಪ್ಪಂದದ ಆಧಾರದ ಮೇಲೆ ವಸೂಲಾತಿಯೊಂದಿಗೆ ನಿರ್ವಹಣೆ ಮಾಡಲು ಏಜನ್ಸಿಗಳನ್ನು ನೇಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನಗರದ ಆರೋಗ್ಯ ಹಾಗೂ ನೈರ್ಮಲ್ಯ ಸುಧಾರಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರತಿ ದಿನ ಮನೆ ಮನೆ ಕಸ ಸಂಗ್ರಹದ ವ್ಯವಸ್ಥೆಯನ್ನು ಬದಲಾಯಿಸಿ ಹಸಿಕಸ ಸಂಗ್ರಹಿಸುವ ದಿನ ಹಾಗೂ ಒಣಕಸ ಸಂಗ್ರಹಿಸುವ ದಿನಗಳನ್ನು ಘೋಷಿಸಿ ಅಂತಹ ದಿನಗಳಂದು ಹಸಿಕಸ ಮಾತ್ರ ಹಾಗೂ ಒಣಕಸ ಮಾತ್ರಗಳನ್ನು ಸಂಗ್ರಹಿಸುವ ಕಾರ್ಯಕ್ರಮ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಕಾರ್ಯಗತಗೊಳಿಸಲಾಗುವುದು.

ನಗರಸಭೆಯಲ್ಲಿ ಸೇವೆ ಪಡೆಯಲು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಪ್ರತಿ ಶಾಖೆಗೆ ಬಯೋಮೆಟ್ರಿಕ ಆಧಾರಿತ ಪ್ರವೇಶಾತಿಯನ್ನು ಕಡ್ಡಾಯಗೊಳಿಸಿ ಸಾರ್ವಜನಿಕದ ಸಂಪರ್ಕದ ಸಮಯ ಹೊರತುಪಡಿಸಿ ಇನ್ನುಳಿದ ಸಮಯದಲ್ಲಿ ಇನ್ನಿತರರಿಗೆ ಪ್ರವೇಶಾತಿಯುನ್ನು ನಿಷೇಧಿಸಲು ಸೂಕ್ತ ವ್ಯವಸ್ಥೆ ಮಾಡಿ ಸಾರ್ವಜನಿಕರಿಗಾಗುವ ತೊಂದರೆ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಡೆಯಲು ಮತ್ತು ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಅವರ ಕೆಲಸ ಕಾರ್ಯಗಳನ್ನು ಪೂರೈಸಲು ಸೂಕ್ತ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ .

ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ( ಪರಿಸರ) ಆನಂದ ಬದಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಸಿವಿಲ್) ಬಂಡಿವಡ್ಡರ, ಲೆಕ್ಕಾಧೀಕ್ಷಕರಾದ ಟಿ.ಎಚ್. ದ್ಯಾವನೂರ ಹಾಗೂ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande