ಕೋಲಾರ, 0೨ ಏಪ್ರಿಲ್ (ಹಿ.ಸ) :
ಆ್ಯಂಕರ್ : ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಪ್ರಸಿದ್ದ ಪ್ರವಾಸಿ ತಾಣವಾದ ಸೀತಿ ಗ್ರಾಮದ ಶ್ರೀ ಪತೇಶ್ವರ ಮತ್ತು ಶ್ರೀ ಭೈರವೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವವು ಬುಧವಾರ ಅಪಾರ ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿ0ದ ನಡೆಯಿತು.
ಶ್ರೀ ಪತೇಶ್ವರ ಮತ್ತು ಶ್ರೀ ಭೈರವೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಶಾಸಕ ಕೊತ್ತೂರು ಜಿ ಮಂಜುನಾಥ್, ಎಂ.ಎಲ್.ಸಿ ಅನಿಲ್ ಕುಮಾರ್, ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಚಾಲನೆ ನೀಡಿದರು.
ಬಿಸಿಲಿನ ಝಳವನ್ನೂ ಲೆಕ್ಕಿಸದೇ ಸಹಸ್ರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಧನ್ಯತಾಭಾವ ಮೆರೆದರು ಕೋಲಾರ ತಾಲೂಕು ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದ ಇತರೆ ಭಾಗಗಳಿಂದ ಆಗಮಿಸಿದ ಅಪಾರ ಭಕ್ತಸ್ತೋಮ ರಥೋತ್ಸವಕ್ಕೆ ಸಾಕ್ಷಿಯಾದರು. ಈ ಎಲ್ಲದರ ನಡುವೆ ನೆರೆದಿದ್ದ ಭಕ್ತರು ತೇರಿಗೆ ಹೂವು, ಹಣ್ಣು ಎಸೆದು ಜೈಕಾರ ಕೂಗುತ್ತಾ ಸಂಭ್ರಮಿಸಿದರು. ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ರಥ ಎಳೆಯಲಾಯಿತು.
ರಥೋತ್ಸವ ಪ್ರಯುಕ್ತ ಶ್ರೀ ಪತೇಶ್ವರ ಮತ್ತು ಶ್ರೀ ಭೈರವೇಶ್ವರಸ್ವಾಮಿ, ಮತ್ತು ಗಂಗಮ್ಮ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ, ವಿಶೇಷ ಪೂಜೆ ಸಲ್ಲಿಸಲಾಯಿತು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಂದಾಗಿ ಪ್ರತಿನಿತ್ಯ ಜಂಜಾಟದಲ್ಲಿ ಇರುತ್ತಾರೆ. ಇಂತಹ ಜಾತ್ರೆಗಳಿಂದ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಶಕ್ತಿಯು ಪರಮಾತ್ಮ ನೀಡುತ್ತಾನೆ. ಜಾತ್ರೆಗಳಿಂದ ಎಲ್ಲರೂ ಒಟ್ಟುಗೂಡುವ ವಾತಾವರಣ ನಿರ್ಮಾಣವಾಗುವುದರಿಂದಾಗಿ ಎಲ್ಲರೂ ಜಾತಿ, ಧರ್ಮಗಳ ಬೇಧ ಭಾವ ಮರೆತು ಸಂತಸದಿ0ದ ಪಾಲ್ಗೊಂಡಾಗ ತಮ್ಮ ಮನಸ್ಸಿನಲ್ಲಿ ನೆಮ್ಮದಿ ದೈವ ಭಕ್ತಿ ಕಾಣಬಹುದು ಎಂದು ಅಭಿಪ್ರಾಯಪಟ್ಟರು.
ಪ್ರಸಿದ್ಧ ಪ್ರವಾಸಿ ತಾಣದ ಸೀತಿ ಜಾತ್ರೆಗೆ ಎಷ್ಟೇ ಬಿಸಿಲು ಇದ್ದರು ಸಹಸ್ರಾರು ಮಂದಿ ಭಕ್ತರು ಬರುವ ಹಿನ್ನಲೆ ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ವೇಮಗಲ್ ಇನ್ಸ್ ಪೆಕ್ಟರ್ ಮಂಜು ಬಿ.ಪಿ ನೇತೃತ್ವದಲ್ಲಿ ಸೂಕ್ತ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನ ತಾಪ ಹೆಚ್ಚಾಗಿರುವ ಯಾವುದೇ ಬೆಂಕಿ ಅವಘಡಗಳು ಸಂಭವಿಸದ0ತೆ ಬೆಸ್ಕಾಂ ಸಿಬ್ಬಂದಿ ಜಾತ್ರೆಯಲ್ಲಿ ಕಣ್ಗಾವಲಾಗಿ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸಿದರು.
ತಹಶಿಲ್ದಾರ್ ನಯನ, ಮುಜರಾಯಿ ತಹಶೀಲ್ದಾರ್ ಶ್ರೀನಿವಾಸರೆಡ್ಡಿ, ಉಪ ತಹಶಿಲ್ದಾರ್ ಹೇಮಲತಾ, ಪಾರುಪಾತ್ತೇದಾರ ವೆಂಕಟೇಶ್, ವೇಮಗಲ್ ರಾಜಸ್ವ ನಿರೀಕ್ಷಕ ಬಿ.ಮಂಜು, ಇನ್ಸ್ ಪೆಕ್ಟರ್ ಮಂಜು ಬಿ.ಪಿ. ಪುರಹಳ್ಳಿ ಪಿಳ್ಳೇಗೌಡ, ಕುರುಗಲ್ ಚೌಡೇಗೌಡ, ಗ್ರಾಪಂ ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು, ಸಹಸ್ರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ತಾಲ್ಲೂಕು ವೇಮಗಲ್ ಸೀತಿ ಗ್ರಾಮದ ಪತೇಶ್ವರ ಜಾತ್ರಾ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್